ಪ್ರಭಾಕರ ಭಟ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಸಾಹಿತಿಗಳ ಒತ್ತಾಯ

Update: 2023-12-25 13:38 GMT

ಕಲ್ಲಡ್ಕ ಪ್ರಭಾಕರ ಭಟ್

ಬೆಂಗಳೂರು: ಕೋಮುವಾದಿ ಹೇಳಿಕೆಗಳನ್ನು ನೀಡುತ್ತಿರುವ ಸಂಘಪರಿವಾರದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಾಹಿತಿ ಪ್ರೋ.ಕೆ.ಮರುಳಸಿದ್ದಪ್ಪ, ಡಾ. ಜಿ.ರಾಮಕೃಷ್ಣ, ಡಾ. ವಿಜಯಾ, ಪ್ರೋ. ಎಸ್.ಜಿ.ಸಿದ್ದರಾಮಯ್ಯ, ಪ್ರೋ. ರಾಜೇಂದ್ರ ಚೆನ್ನಿ, ಡಾ. ಬಂಜಗೆರೆ ಜಯಪ್ರಕಾಶ್ ಸೇರಿದಂತೆ ಜಾಗೃತ ನಾಗರಿಕರು ಕರ್ನಾಟಕದ ಮುಖಂಡರು ಒತ್ತಾಯಿಸಿದ್ದಾರೆ.

ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಮಂಡ್ಯದಲ್ಲಿ ನಡೆದ ಹನುಮ ಸಂಕೀರ್ತನ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟ ಮಹಿಳೆಯರ ಕುರಿತು ಅತ್ಯಂತ ಕೀಳುಮಟ್ಟದ ಅವಮಾನಕರ ಹೇಳಿಕೆಯನ್ನು ನೀಡಿರುವುದನ್ನು ನಾವು ಖಂಡಿಸುತ್ತೇವೆ. ರಾಮನನ್ನು ಹಿಂದೂ ಧಾರ್ಮಿಕತೆಗೆ ಬಳಸಿಕೊಂಡು ವೈಭವೀಕರಿಸುವ ಪ್ರಭಾಕರ ಭಟ್ಟ ಕಾಲಕಾಲಕ್ಕೆ ಈ ರೀತಿಯ ಜೀವ ವಿರೋಧಿ ಹೇಳಿಕೆ ಕೊಡುತ್ತಾ ಬಂದಿದ್ದಾರೆ ಎಂದು ಟೀಕಿಸಿದ್ದಾರೆ.

ನಾಗರಿಕ ಸಮಾಜದ ವರ್ತನೆಗಳನ್ನು ತಿರಸ್ಕರಿಸುವ ಇವರ ಹೇಳಿಕೆಗಳು ಕೇವಲ ಮುಸ್ಲಿಂ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಸಮುದಾಯದ ಮಹಿಳೆಯರಿಗೆ ಮಾಡಿದ ಅವಮಾನವೇ ಆಗಿದೆ. ಆದರೆ ಕಲ್ಲಡ್ಕ ಪ್ರಭಾಕರ ಭಟ್ಟರಂತಹವರನ್ನು ಅಭಿಮಾನಿಸುವ, ಹಿಂಬಾಲಿಸುವ ಜನರಿದ್ದಾರೆ ಎನ್ನುವ ಸಂಗತಿಯೇ ಅತ್ಯಂತ ಕಳವಳಕಾರಿಯಾಗಿದೆ ಎಂದು ಸಾಹಿತಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯಾಷನಲ್ ಕ್ರೈಂ ರಿಪೋರ್ಟ್ ಬ್ಯೂರೋ ‘2022ರಲ್ಲಿ ದೇಶದಲ್ಲಿ ಮಹಿಳೆಯರ ವಿರುದ್ಧ 4,45,256 ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. 2019-21ರ ಅವಧಿಯಲ್ಲಿ 13.13 ಲಕ್ಷ ಮಹಿಳೆಯರು ಮತ್ತು ಹುಡುಗಿಯರು ಕಾಣೆಯಾಗಿದ್ದಾರೆ. ಕರ್ನಾಟಕದಲ್ಲಿ 40 ಸಾವಿರ ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿ ನೀಡಿದೆ. ಮಹಿಳೆಯರ ಆಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಇಂತಹ ದುರಿತ ಕಾಲದಲ್ಲಿ ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕಾಗಿರುವುದು ಮಾನವ ಧರ್ಮವಾಗಿ ಎಂದು ಹೇಳಿದ್ದಾರೆ.

ಆದರೆ ಕಲ್ಲಡ್ಕ ಪ್ರಭಾಕರ ಭಟ್ಟನಂತಹವರು ಇದಕ್ಕೆ ಪ್ರತಿಕೂಲವಾಗಿ ವರ್ತಿಸುತ್ತಾ ಮಹಿಳೆಯರ ಘನತೆ, ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ನೆಲದ ಕಾನೂನು ತನ್ನ ಕೆಲಸ ಮಾಡಿದರೆ ಇಂತಹ ಕ್ಷುದ್ರ ಮನಸ್ಸಿನ ಜನರು ತಹಬಂದಿಯಲ್ಲಿರುತ್ತಾರೆ. ಆದರೆ ಸರಕಾರವು ಈಗಲೂ ಮೌನವಾಗಿರಬಾರದೆ ಎಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News