ಸರಕಾರದಿಂದ ಒಂದೂ ನಿವೇಶನ ಪಡೆದಿಲ್ಲ : ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟನೆ

Update: 2024-09-02 13:48 GMT

ಬೆಂಗಳೂರು : ನಾನಾಗಲಿ, ನಮ್ಮ ಕುಟುಂಬದ ಇತರರಾಗಲಿ ಜಿ-ಕ್ಯಾಟಗರಿ, ರಾಜ್ಯ ಗೃಹ ಮಂಡಳಿ(ಕೆಎಚ್‍ಬಿ) ಅಥವಾ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯ ನಿವೇಶನಗಳನ್ನು ಸರಕಾರದಿಂದ ಪಡೆದುಕೊಂಡಿಲ್ಲ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಮ್ಮ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸೋಮವಾರ ನಗರದಲ್ಲಿ ಪ್ರತಿಕ್ರಿಯಿಸಿದ ಅವರು,ನಮ್ಮ ಕುಟುಂಬಕ್ಕೂ ಬಾಗ್ಮನೆ ಕುಟುಂಬಕ್ಕೂ 25-30 ವರ್ಷಗಳಿಂದಲೂ ಪರಸ್ಪರ ಒಡನಾಟವಿದೆ ಎಂದು ಹೇಳಿದರು.

ಬೆಂಗಳೂರಿನ ಅಭಿವೃದ್ಧಿಗೆ ಪ್ರೆಸ್ಟೀಜ್, ಬ್ರಿಗೇಡ್, ಎಂಬೆಸಿ, ಮಂತ್ರಿ, ಬಾಗ್ಮನೆ ಸಮೂಹ ಸೇರಿದಂತೆ ಹಲವು ಉದ್ಯಮ ಸಮೂಹಗಳು ಕೊಡುಗೆ ನೀಡಿವೆ. ಎಲ್ಲ ಪಕ್ಷಗಳ ಸರಕಾರಗಳ ಆಡಳಿತಾವಧಿಯಲ್ಲೂ ಈ ಸಂಸ್ಥೆಗಳು ಈ ರೀತಿ ನಿವೇಶನ ಪಡೆದು, ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡಿರುವುದನ್ನು ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ತಿರುಗೇಟು ನೀಡಿದರು.

ಬಾಗ್ಮನೆಯೊಂದಿಗೆ ನಮ್ಮ ಕುಟುಂಬ ಮಟ್ಟದ ವ್ಯವಹಾರಕ್ಕೂ ಸರಕಾರದ ಮಟ್ಟದಲ್ಲಿ ಆಗುವ ನಿರ್ಧಾರಗಳಿಗೂ ಸಂಬಂಧವಿಲ್ಲ. ಬಾಗ್ಮನೆ ಸಂಸ್ಥೆಯವರು ಬೆಂಗಳೂರಿನ ಏರೋಸ್ಪೇಸ್ ಪಾರ್ಕಿನಲ್ಲಿ ಕೈಗಾರಿಕಾ ನಿವೇಶನ ಕೋರಿ ಅರ್ಜಿ ಹಾಕಿದ್ದರು. ಇಂತಹ ಸಂದರ್ಭದಲ್ಲಿ ನಾವು ಸಂಸ್ಥೆಯ ಅರ್ಹತೆ, ಸಾಧನೆಗಳನ್ನು ಮಾತ್ರ ಪರಿಗಣಿಸುತ್ತೇವೆ ಅಷ್ಟೆ. ನಾರಾಯಣಸ್ವಾಮಿಗೆ ಇಂತಹ ಸರಳ ಸತ್ಯ ಗೊತ್ತಾಗದೆ ಇರುವುದು ಆಶ್ಚರ್ಯಕರ ಸಂಗತಿ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ವೈಯಕ್ತಿಕ ಮತ್ತು ಸರಕಾರದ ಕೆಲಸಗಳನ್ನು ಪರಸ್ಪರ ತಳುಕು ಹಾಕಬಾರದು. ನಾರಾಯಣಸ್ವಾಮಿ ಇಂತಹ ಪ್ರಬುದ್ಧತೆಯನ್ನು ಪ್ರದರ್ಶಿಸಬೇಕು. ಇವರ ಮಾತುಗಳ ಹಿಂದೆ ಯಾರ ಕುಮ್ಮಕ್ಕು ಇದೆ ಎನ್ನುವುದು ಯಾರಿಗಾದರೂ ಅರ್ಥವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News