ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು : ಸಚಿವ ಝಮೀರ್ ಅಹ್ಮದ್ ಖಾನ್

Update: 2024-09-11 15:55 GMT

ಬೆಂಗಳೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

ಬುಧವಾರ ಹೆಗಡೆ ನಗರದಲ್ಲಿರುವ ಹಜ್ ಭವನದಲ್ಲಿ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ಫಲಾನುಭವಿಗಳಿಗೆ ವಾಹನ, ಸಾಲ ಮತ್ತು ಸಬ್ಸಿಡಿ ವಿತರಣೆ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ವಾರ್ಷಿಕ 54 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುವುದರ ನಡುವೆಯೂ ಅಲ್ಪಸಂಖ್ಯಾತರ ಕಲ್ಯಾಣಕ್ಕೆ 2024-25ನೆ ಸಾಲಿನ ಬಜೆಟ್‍ನಲ್ಲಿ 3200 ಕೋಟಿ ರೂ.ಅನುದಾನ ಒದಗಿಸಿದ್ದಾರೆ. ಈ ಪೈಕಿ 1480 ಕೋಟಿ ರೂ.ಗಳನ್ನು ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರ ಬಜೆಟ್ ಅನುದಾನ 10 ಸಾವಿರ ಕೋಟಿ ರೂ.ಗಳಿಗೆ ಏರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

ಇದರಿಂದ ಸಮುದಾಯದ ಲಕ್ಷಾಂತರ ಮಕ್ಕಳು ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಸಹಕಾರಿ ಆಗಿದೆ. ಅಲ್ಲದೆ ಅವರು ವಿದೇಶದಲ್ಲಿ ವ್ಯಾಸಂಗಕ್ಕೆ ಹೋಗುವಂತಾಗಿದೆ. ಸುಮಾರು 400 ಅಭ್ಯರ್ಥಿಗಳಿಗೆ ಐಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆ ಕೈಗೊಳ್ಳಲು ತರಬೇತಿ ನೀಡಲಾಗುತ್ತಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ಹಜ್ ಕ್ಯಾಂಪ್‍ನಲ್ಲಿ ಕೆಲಸ ಮಾಡುವ ಸ್ವಯಂ ಸೇವಕರ ಪೈಕಿ ಬಹುತೇಕ ಮಂದಿ ದಿನಗೂಲಿ ನೌಕರರು. ಒಂದು ತಿಂಗಳು ಅವರು ಇಲ್ಲಿ ಸ್ವಯಂ ಸೇವಕರಾಗಿ ದುಡಿಯುತ್ತಾರೆ. ಅವರಲ್ಲಿ ಆರ್ಥಿಕ ಶಕ್ತಿ ಇಲ್ಲದ ಕಾರಣ ಉಮ್ರಾ ಅಥವಾ ಹಜ್‍ಗೆ ಹೋಗಲು ಸಾಧ್ಯವಾಗಿಲ್ಲ. 2018ರಲ್ಲಿ 980 ಮಂದಿಯನ್ನು ಗುರುತಿಸಿ ಉಮ್ರಾ ಯಾತ್ರೆಗೆ ಕಳುಹಿಸಲಾಗಿತ್ತು. 2023ರಲ್ಲಿ 230 ಮಂದಿಯನ್ನು ಕಳುಹಿಸಲಾಗಿತ್ತು. ಇನ್ನೂ ಸುಮಾರು 220-230 ಮಂದಿ ಬಾಕಿ ಉಳಿದಿದ್ದಾರೆ. ಇನ್ನೆರಡು ತಿಂಗಳಲ್ಲಿ ಅವರಿಗೂ ಉಮ್ರಾ ಯಾತ್ರೆಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.

1-8ನೇ ತರಗತಿಯವರೆಗೆ ನೀಡುತ್ತಿದ್ದ ವಿದ್ಯಾರ್ಥಿವೇತನ ಬಿಜೆಪಿ ಸರಕಾರ ನಿಲ್ಲಿಸಿತ್ತು. ನಮ್ಮ ಸರಕಾರ ಆ ಯೋಜನೆ ಪುನಃ ಆರಂಭಿಸಿ 82 ಕೋಟಿ ರೂ.ಗಳನ್ನು ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ. ರಾಜ್ಯದಲ್ಲಿ ವಸತಿ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ. ರಾಜ್ಯದ ಪ್ರತಿ ಕುಟುಂಬಕ್ಕೂ ಸೂರು ಕಲ್ಪಿಸುವುದು ನಮ್ಮ ಸರಕಾರದ ಸಂಕಲ್ಪ. ಈಗಾಗಲೇ 2.32 ಲಕ್ಷ ಬಡವರಿಗೆ ಮನೆ ಕಟ್ಟಿಕೊಡುವ ಕ್ರಾಂತಿಕಾರಕ ನಿರ್ಧಾರ ಮಾಡಲಾಗಿದೆ ಎಂದು ಅವರು ಹೇಳಿದರು.

ಕೆಎಂಡಿಸಿಯಿಂದ ಶಿಕ್ಷಣ ಹಾಗೂ ಸ್ವಾವಲಂಬಿ ಜೀವನ ನಡೆಸಲು ಸಾಕಷ್ಟು ಯೋಜನೆ ರೂಪಿಸಲಾಗಿದೆ. ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ 177 ಆಟೋ ರಿಕ್ಷಾ, 68 ಟ್ಯಾಕ್ಸಿ, 30 ಗೂಡ್ಸ್ ವಾಹನ ಸೇರಿ 579 ಮಂದಿಗೆ ಸುಮಾರು 7.86 ಕೋಟಿ ರೂ. ಮೊತ್ತದ ಸವಲತ್ತು ವಿತರಿಸಲಾಗುತ್ತಿದೆ ಎಂದು ಝಮೀರ್ ಅಹ್ಮದ್ ಖಾನ್ ವಿವರಿಸಿದರು.

ಕಾರ್ಯಕ್ರಮದಲ್ಲಿ ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್, ಮಾಜಿ ಸಚಿವ ಹಿಂಡಸಗೇರಿ, ಶಾಸಕರಾದ ಇಕ್ಬಾಲ್ ಹುಸೇನ್, ಅಬ್ದುಲ್ ಜಬ್ಬಾರ್, ಐವಾನ್ ಡಿಸೋಜ, ಬಿಲ್ಕಿಸ್ ಬಾನು, ಮೌಲಾನ ಮಕ್ಸೂದ್ ಇಮ್ರಾನ್, ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾxa, ಕೆಎಂಡಿಸಿ ಅಧ್ಯಕ್ಷ ಬಿ.ಕೆ.ಅಲ್ತಾಫ್ ಖಾನ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್, ಕೆಎಂಡಿಸಿ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜೈ ಭೀಮ್ ಎಂದು ಭಾಷಣ ಆರಂಭಿಸಿದ ಝಮೀರ್

‘ಜೈ ಭೀಮ್’ ಎಂದು ಭಾಷಣ ಆರಂಭಿಸಿದ ಸಚಿವ ಝಮೀರ್ ಅಹ್ಮದ್ ಖಾನ್, 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಹೆಗ್ಡೆ ಎಂಬವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿದ್ದರು. ಸಿಎಎ, ಎನ್‍ಆರ್‍ಸಿ, ಹಿಜಾಬ್, ಲೌಡ್ ಸ್ಪೀಕರ್ ಸೇರಿದಂತೆ ಅನೇಕ ರೀತಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳನ್ನು ನಡೆಸಲಾಯಿತು. ಆದರೆ, ಅಂಬೇಡ್ಕರ್ ನಮಗೆ ಸಂವಿಧಾನ ನೀಡದೆ ಇದ್ದಿದ್ದರೆ ಬಹುಷಃ ನಾವು ಇಲ್ಲಿ ಕೂರಲು ಆಗುತ್ತಿರಲಿಲ್ಲ. ಅವರನ್ನು ಸದಾ ಸ್ಮರಿಸಬೇಕು ಎಂದರು.

ಝಮೀರ್ ಅಹ್ಮದ್ ಖಾನ್ ಸಮುದಾಯದ ನಾಯಕನಾಗಿ ಹೊರ ಹೊಮ್ಮಿ ಎಲ್ಲರನ್ನೂ ಜತೆಗೂಡಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಸಮುದಾಯ ಒಟ್ಟಿಗೆ ಇದ್ದರೆ ಅದೇ ಶಕ್ತಿ. ಅಲ್ಪಸಂಖ್ಯಾತ ಸಮುದಾಯದವರು ಕೇವಲ ಕೆಎಂಡಿಸಿಯಲ್ಲಿ ಸಿಗುವ ಸಾಲ ಸೌಲಭ್ಯಗಳಿಗೆ ಸೀಮಿತವಾಗಬೇಡಿ. ಕೆಐಎಡಿಬಿ, ರಾಜ್ಯ ಹಣಕಾಸು ಆಯೋಗ ಸೇರಿದಂತೆ ಸರಕಾರದ ವಿವಿಧ ಇಲಾಖೆಗಳಲ್ಲೂ ನಿಮಗೆ ಸಾಕಷ್ಟು ಸೌಲಭ್ಯಗಳು ಇವೆ. ಅವುಗಳನ್ನು ಬಳಸಿಕೊಳ್ಳಿ.

ನಸೀರ್ ಅಹ್ಮದ್, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News