ಬೆಂಗಳೂರಿನಾದ್ಯಂತ ಅನಧಿಕೃತ 3,800ಕ್ಕೂ ಹೆಚ್ಚು ಫ್ಲೆಕ್ಸ್ ತೆರವು ; 48 ಎಫ್‍ಐಆರ್ ದಾಖಲು

Update: 2024-06-15 14:06 GMT

ಬೆಂಗಳೂರು : ಬಿಬಿಎಂಪಿ ವತಿಯಿಂದ ನಗರದಾದ್ಯಂತ ಅನಧಿಕೃತ ಫ್ಲೆಕ್ಸ್‌ ಗಳ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದು, ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಇದುವರೆಗೆ ಪೊಲೀಸ್ ಠಾಣೆಯಲ್ಲಿ 76 ದೂರುಗಳನ್ನು ನೀಡಿದ್ದು, 48 ಎಫ್‍ಐಆರ್ ದಾಖಲಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಅದರಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಎಲ್ಲ ವಲಯಗಳ ಅಧಿಕಾರಿಗಳ ಜೊತೆ ಪ್ರತಿನಿತ್ಯ ಪರಿಶೀಲನಾ ಸಭೆ ನಡೆಸುತ್ತಿದ್ದು, ಯಾವುದೇ ಅನಧಿಕೃತ ಜಾಹೀರಾತುಗಳು ಇರದಂತೆ ಸೂಚನೆ ನೀಡಿದ್ದಾರೆ.

ನಗರದಾದ್ಯಂತ ಜೂ.1ರಿಂದ ಜೂ.15ರವರೆಗೆ 3843 ಫ್ಲೆಕ್ಸ್, ಬ್ಯಾನರ್, ಎಲ್.ಇ.ಡಿ ಹಾಗೂ ಹೋರ್ಡಿಂಗ್ಸ್‌ ಗಳನ್ನು ತೆರವುಗೊಳಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ 76 ದೂರುಗಳನ್ನು ದಾಖಲಿಸಿದ್ದು, ಅದರಲ್ಲಿ 48 ಎಫ್‍ಐಆರ್ ಗಳನ್ನು ದಾಖಲಿಸಲಾಗಿದೆ. 75ಸಾವಿರ ರೂ.ದಂಡ ವಿಧಿಸಲಾಗಿದೆ.

ನಗರದ ರಸ್ತೆ ಬದಿ, ಪಾದಚಾರಿ ಮಾರ್ಗ, ಮೇಲು ಸೇತುವೆ ಸೇರಿದಂತೆ ಇನ್ನಿತರೆ ಕಡೆ ಅನಧಿಕೃತವಾಗಿ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸುವುದರಿಂದ ನಾಗರೀಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರ ಜೊತೆಗೆ ನಗರದ ಸೌಂದರ್ಯ ಹಾಳಾಗುತ್ತಿದೆ. ಅಲ್ಲದೆ ಪರಿಸರಕ್ಕೆ ಮಾರಕವಾಗಿರುತ್ತದೆ.

ಹೀಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳ ಕುರಿತು ನಾಗರೀಕರು ಪಾಲಿಕೆ ಸಹಾಯವಾಣಿ ಸಂಖ್ಯೆಯಾದ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸಪ್ ಸಂಖ್ಯೆ 94806 83939ಗೆ ಛಾಯಾಚಿತ್ರ ಅಥವಾ ವೀಡಿಯೋ ಮಾಡಿ ವಿಳಾಸ ಸಹಿತ ಕಳುಹಿಸಿದಲ್ಲಿ ಪಾಲಿಕೆ ವತಿಯಿಂದ ಕೂಡಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಪ್ರಕಟನೆ ಹೊರಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News