ಕುಕ್ಕರ್, ಸೀರೆ ಶೇಖರಣೆ ಕಂಡುಬಂದಲ್ಲಿ ಬೆಂಕಿ ಹಚ್ಚಿ: ಜೆಡಿಎಸ್ ಕಾರ್ಯಕರ್ತರಿಗೆ ಕುಮಾರಸ್ವಾಮಿ ಕರೆ

Update: 2024-03-19 08:07 GMT

ಬೆಂಗಳೂರು, ಮಾ.19: ಚುನಾವಣೆಗೆ ಹಂಚಲು ಸೀರೆ, ಕುಕ್ಕರ್ ಶೇಖರಣೆ ಮಾಡಿರುವುದು ಕಂಡುಬಂದಲ್ಲಿ ಬೆಂಕಿ ಹಚ್ಚಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ನಗರದಲ್ಲಿಂದು ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಘೋಷಣೆಗೂ ಮುಂಚೆ ಸೀರೆ ಹಂಚಿದ್ದಾರೆ. ಚುನಾವಣೆ ಘೋಷಣೆ ಆಗಿರುವುದರಿಂದ ಮತ್ತೆ ಸೀರೆ, ಕುಕ್ಕರ್ ಹಂಚಿಕೆಯಾಗುತ್ತಿದೆ. ಹಣ ಬಲ ಮತ್ತು ತೋಳ್ಬಲದಿಂದ ಚುನಾವಣೆ ಮಾಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೊರಟ್ಟಿದ್ದಾರೆ. ಅದಕ್ಕೆ ನಾವು ಹೆದರದಲ್ಲ ಎಂದರು.

ಸಿದ್ದರಾಮಯ್ಯನವರೇ ಗ್ಯಾರಂಟಿ ಕೊಟ್ಟಿದ್ದಿರಿ, ಯಾಕೆ ಮತ್ತೆ ಕುಕ್ಕರ್ ಹಂಚುತ್ತಿದ್ದಿರಿ? ನಮ್ಮ ಕಾರ್ಯಕರ್ತರಿಗೆ ಕರೆ ಕೊಡುತ್ತೇನೆ ಸೀರೆ, ಕುಕ್ಕರ್ ಶೇಖರಣೆ ಇಟ್ಟ ಜಾಗದಲ್ಲೇ ಬೆಂಕಿ ಇಡಿ. ಯಾರು ಮೊಕದ್ದಮೆ ಹಾಕುತ್ತಾರೆ ನಾನೂ ನೋಡುತ್ತೇನೆ. ಮುಖ್ಯ ಚುನಾವಣಾ ಅಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಪ್ಯಾರಾ ಮಿಲಿಟರಿ ಪೋರ್ಸ್ ಗ್ರಾಮಾಂತರ ಕ್ಷೇತ್ರಕ್ಕೆ ಹಾಕಬೇಕು. ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಮಿಲಿಟರಿ ಬರಲಿಲ್ಲ ಅಂದರೆ ಗ್ರಾಮಾಂತರ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನೆಡೆಯಲ್ಲ ಎಂದು ತಿಳಿಸಿದರು.

ನಮ್ಮ ಮೈತ್ರಿ ಬಗ್ಗೆ ಡಿ.ಕೆ.ಶಿವಕುಮಾರ್ ಅಯ್ಯೋ ಪಾಪ ಎಂದಿದ್ದಾರೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ನೀವು ಮಂಡ್ಯದಲ್ಲಿ ಏನೂ ಮಾಡಿದ್ದೀರೆಂದು ಗೊತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.

2018 ರಲ್ಲಿ ನಾನು ಸಿಎಂ ಇದ್ದಾಗ ನೀವು ಹೇಗೆ ನೆಡೆಸಿಕೊಂಡಿದ್ದೀರಿ ಎಂದೂ ಗೊತ್ತಿದೆ. ನಾನು ಸಿಎಂ ಇದ್ದಾಗ ಒಂದು ದಿನ ನಮ್ಮ ಕೆಲಸದ ಬಗ್ಗೆ ನೀವು ಮಾತನಾಡಿಲ್ಲ. ರೈತರ ಸಾಲದ ಬಗ್ಗೆ ಒಂದು ಮತನಾಡಿಲ್ಲ. ಈಗ ನಮ್ಮ ಕಾರ್ಯಕರ್ತರಿಗೆ ಕಾಂಗ್ರೆಸ್ಗೆ ಬನ್ನಿ ಎಂದು ಕರೆ ಕೊಡುತ್ತಿರಾ?. ನನ್ನ ಕಾರ್ಯಕರ್ತರಿಗೆ ನಿಮ್ಮಿಂದ ರಕ್ಷಣೆ ಪಡೆಯುವ ದುಃಸ್ಥಿತಿ ಬಂದಿಲ್ಲ. ಪದೇ ಪದೇ ಬಿಜೆಪಿ ಬಿ ಟೀಮ್ ಎಂದು ಹೇಳಿದ್ದರು. ಹಂತ ಹಂತವಾಗಿ ನಮ್ಮ ಪಕ್ಷವನ್ನು ಮುಗಿಸಲು ಪ್ರಯತ್ನ ಪಟ್ಟಿದ್ದಾರೆ. ರಾಜಕೀಯವಾಗಿ ನಮಗೆ ವಿಷ ಹಾಕಿದ್ದಿರಿ. ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News