ಎಸ್‌ಐಟಿಯಿಂದಲೇ ಸಂತ್ರಸ್ತೆ ಮಹಿಳೆಗೆ ಬೆದರಿಕೆ : ಕುಮಾರಸ್ವಾಮಿ
ಬೆಂಗಳೂರು: ಕಾಂಗ್ರೆಸ್ ಸರಕಾರಕ್ಕೆ ಅನುಕೂಲ ಆಗುವ ರೀತಿಯಲ್ಲಿ ಹೇಳಿಕೆ ನೀಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ಎಸ್‌ಐಟಿ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಗುರವಾರ ಶೇಷಾದ್ರಿಪುರಂನಲ್ಲಿರುವ ಜೆಪಿ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. ತನಿಖಾ ತಂಡದ ಅಧಿಕಾರಿಗಳು ನೊಂದ ಮಹಿಳೆಯರಿಗೆ ಬೆದರಿಕೆ ಹಾಕುತ್ತಿರುವುದು ಸುಳ್ಳೇ? ಎಲ್ಲೆಲ್ಲಿ ಏನೆಲ್ಲಾ ನಿಮ್ಮ ಅಧಿಕಾರಿಗಳು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ನನಗೂ ಬರುತ್ತಿದೆ. ನಾವು ಹೇಳಿದ ಹಾಗೆಯೇ ಹೇಳಿಕೆ ಕೊಡದಿದ್ದರೆ ನಿಮ್ಮನ್ನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಸಿಲುಕಿಸುತ್ತೇವೆ ಎಂದು ನಿಮ್ಮ ಅಧಿಕಾರಿಗಳು ಬೆದರಿಕೆ ಹಾಕುತ್ತಿಲ್ಲವೇ? ನಿಜ ಹೇಳಿ. ಇದೇನಾ ತನಿಖೆ ನಡೆಸುವ ರೀತಿ? ಎಂದು ಸಚಿವ ಕೃಷ್ಣಭೈರೇಗೌಡ ಅವರನ್ನು ಪ್ರಶ್ನಿಸಿದ್ದಾರೆ.
ಇನ್ನೂ, ಅಪಹರಣ ಪ್ರಕರಣದಲ್ಲಿ ರಕ್ಷಣೆ ಮಾಡಿರುವ ಆ ಮಹಿಳೆಯನ್ನು ಎಲ್ಲಿ ಇಟ್ಟಿದ್ದೀರಿ.ಅಪಹರಣ ಆಗಿದ್ದಾರೆನ್ನಲಾದ ಮಹಿಳೆಯನ್ನು ರಕ್ಷಣೆ ಮಾಡಿದ್ದೇವೆ ಎಂದು ಹೇಳಿದ್ದೀರಿ. ಎಲ್ಲಿ ರಕ್ಷಣೆ ಮಾಡಿದಿರಿ ಅವರನ್ನು? ಆ ಮಹಿಳೆಯನ್ನು ಈಗ ಎಲ್ಲಿ ಇರಿಸಿದ್ದೀರಿ? ಇದುವರೆಗೂ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ಕೊಡಿಸಲಿಲ್ಲ ಏಕೆ? ಎಂದು ಕೇಳಿದರು.
ಇವತ್ತು ಕೂಡ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಕರೆದು ಕೊಂಡು ಬಂದಿದ್ದೀರಿ. ಜಾಮೀನು ಪಡೆಯಲು ಹೋದ ವಕೀಲರನ್ನು ಕರೆದುಕೊಂಡು ಬಂದಿದ್ದೀರಾ. ಅಪಹರಣಕ್ಕೆ ಒಳಪಟ್ಟರೆನ್ನಲಾದ ಹೆಣ್ಣುಮಗಳನ್ನೂ ಕರೆದುಕೊಂಡು ಬಂದಿದ್ದೀರಿ. ಅವರಿಂದ ಏನು ಹೇಳಿಕೆ ಪಡೆದಿದ್ದೀರಿ? ಎಲ್ಲಿಂದ ಆಕೆಯನ್ನು ಕರೆದುಕೊಂಡು ಬಂದಿದ್ದೀರಿ? ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಪ್ರಜ್ವಲ್ ರೇವಣ್ಣ ಅವರನ್ನು ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಹಾಗೂ ಪ್ರತಿಯೊಬ್ಬರೂ ಈ ನೆಲದ ಕಾನೂನಿಗೆ ತಲೆ ಬಾಗಲೇಬೇಕು ಎಂದು ಪ್ರಕರಣ ಬೆಳಕಿಗೆ ಬಂದ ಮೊದಲ ದಿನವೇ ಹೇಳಿದ್ದೇನೆ. ಅದನ್ನು ಉಪ ಮುಖ್ಯಮಂತ್ರಿಗಳು ಅದನ್ನೂ ವ್ಯಂಗ್ಯ ಮಾಡಿದ್ದಾರೆ ಎಂದರು.
ದೇವೇಗೌಡರಿಗೆ ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ನಮ್ಮ ನಮ್ಮ ವ್ಯವಹಾರ, ಸಂಸಾರ ನಮ್ಮದು. ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಹಾಸನ ರಾಜಕಾರಣದಲ್ಲಿ ಪ್ರವೇಶ ಮಾಡಿದ್ದೆ. ಒಬ್ಬ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇನೆ ಎಂದಿದ್ದೆ. ಆ ಮಾತಿನ ಪ್ರಕಾರ ನಡೆದುಕೊಂಡೆ. ನಾನು ರೇವಣ್ಣ ಅವರ ಕುಟುಂಬವನ್ನು ರಾಜಕಾರಣದಲ್ಲಿ ಮುಗಿಸಲು ಹೊರಟಿದ್ದೇನೆ ಅಂತೆಲ್ಲಾ ಮಾತನಾಡಿದ್ದಾರೆ ಇವರು. ನಾಚಿಕೆ ಆಗಬೇಕು ಇವರಿಗೆ ಎಂದು ಕುಮಾರಸ್ವಾಮಿ ಅವರು ಟೀಕಿಸಿದರು.