ಕಾಂಗ್ರೆಸ್ ಅಭ್ಯರ್ಥಿಯಿಂದ ಮತದಾರರಿಗೆ ಗಿಫ್ಟ್ ಆರೋಪ : ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
Update: 2024-05-16 16:43 GMT
ಬೆಂಗಳೂರು : ಬೆಂಗಳೂರು ವಿಧಾನ ಪರಿಷತ್ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ರಾಮೋಜಿ ಗೌಡ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಮತದಾರರಿಗೆ ಆಮಿಷ ಒಡ್ಡುವ ಸಲುವಾಗಿ ಗಿಫ್ಟ್ ಗಳನ್ನು ಹಂಚುತ್ತಿದ್ದಾರೆ ಎಂದು ಬಿಜೆಪಿ ನಿಯೋಗವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಗುರುವಾರ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗವು ಆಯೋಗಕ್ಕೆ ದೂರು ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದೆ. ಖಾಸಗಿ ಕೊರಿಯರ್ ಏಜೆನ್ಸಿಯ ಗೋದಾಮಿನಲ್ಲಿ ಈ ಉಡುಗೊರೆಗಳನ್ನು ಶೇಖರಿಸಿ ಇಡಲಾಗಿದೆ. ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಕೋರಿದೆ.
ಈ ವೇಳೆ ಎಸ್.ಸುರೇಶ್ ಕುಮಾರ್, ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ.ರಾಮಮೂರ್ತಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.