ನಮ್ಮ ಕುಟುಂಬದವರ ಮೊಬೈಲ್‌ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ : ಎಚ್‌ಡಿಕೆ ಆರೋಪ

Update: 2024-05-20 15:57 GMT

ಬೆಂಗಳೂರು :  ರಾಜ್ಯ ಸರಕಾರದಿಂದ ನನ್ನ ಮತ್ತು ನನ್ನ ಕುಟುಂಬದವರ ಎಲ್ಲ ಸದಸ್ಯರ ಮೊಬೈಲ್ ಫೋನ್‍ಗಳನ್ನು ಕದ್ದಾಲಿಸಲಾಗುತ್ತಿದೆ. ಅಲ್ಲದೇ, ನನ್ನ ಸುತ್ತ ಇರುವ 45 ಜನರ ಮೊಬೈಲ್ ಫೋನ್ ಕದ್ದಾಲಿಸಲಾಗುತ್ತಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದ ಜೆಡಿಎಸ್ ಕಚೇರಿಯ ಜೆಪಿ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಆರ್.ಶಿವರಾಮೇಗೌಡ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿಕೊಂಡು ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ನಡೆಸಿರುವ ಆಡಿಯೋ ತುಣುಕು ಬಹಿರಂಗವಾಗಿದೆ. ಇದೆಲ್ಲವನ್ನೂ ನಮ್ಮ ಡಿಸಿಎಂ ‘ಸೀಡಿ ಶಿವು’ನೇ ಹೇಳಿಸಿರುವುದು,  ಮಾಡಿಸಿರುವುದು. ಶಿವಕುಮಾರ್ ಪಾತ್ರ ಇರುವುದು ಸ್ಪಷ್ಟವಾಗಿದೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಆ ಆಡಿಯೋ ಮತ್ತು ವಿಡಿಯೋ ಅಸಲಿಯತ್ತು ಹೊರ ಬರಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಸೆಕ್ಷನ್ 376ರ ಪ್ರಕಾರ ವಕೀಲ ದೇವರಾಜೇಗೌಡರನ್ನು ಬಂಧಿಸಲಾಗಿದೆ. ಈ ಸರಕಾರದ ಮತ್ತೊಂದು ಸಾಧನೆ ಇದು. ಅದಕ್ಕೆ ಈ ಸರಕಾರವನ್ನು ‘ಸೆಕ್ಷನ್ 376 ಸರಕಾರʼ ಎಂದು ಕರೆಯಬೇಕು. ಸರಕಾರದ ವಿರುದ್ಧ ಮಾತನಾಡಿದರೆ ಸಾಕು 376 ಸೆಕ್ಷನ್ ಅಡಿಯಲ್ಲಿ ಕೇಸು ಹಾಕುತ್ತಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ನೇಮಿಸದ ಕಾರಣ ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಕೂಡಾ ನನ್ನ ಕುಟುಂಬವನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಹಾಸನದ ಸರಕಾರಿ ಕಚೇರಿಗಳಲ್ಲಿ ದೀರ್ಘ ರಜೆ ತೆಗೆದುಕೊಳ್ಳುವುದಕ್ಕೆ ಮಹಿಳಾ ಸಿಬ್ಬಂದಿ ಹಿಂಜರಿಯುತ್ತಿದ್ದಾರೆ ಎನ್ನುವ ಮಾಧ್ಯಮದ ವರದಿ ನನ್ನ ಮನಸ್ಸಿಗೆ ಘಾಸಿ ಉಂಟು ಮಾಡಿದೆ. ಮಾನಸಿಕ ಯಾತನೆ ಅನುಭವಿಸುತ್ತಿರುವ ಮಹಿಳೆಯರಲ್ಲಿ ನಾನು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ. ನೊಂದ ಹೆಣ್ಣು ಮಕ್ಕಳಿಗೆ ದಯಮಾಡಿ ಕುಗ್ಗಬೇಡಿ ಎಂದು ಹೇಳಲು ಬಯಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ಜೆಡಿಎಸ್ ಬೆಂಗಳೂರು ನಗರ ಘಟಕದ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ ಉಪಸ್ಥಿರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News