ನಮ್ಮದು ಜನಸಾಮಾನ್ಯರ, ರೈತ ಪರ ಸರಕಾರ : ಕೃಷಿ ಸಚಿವ ಚಲುವರಾಯಸ್ವಾಮಿ
ಮೈಸೂರು : ನಮ್ಮದು ಜನಸಾಮಾನ್ಯರ, ರೈತರ ಪರ ಸರಕಾರ. ಕೃಷಿ ಕ್ಷೇತ್ರದ ಸುಧಾರಣೆಗೆ ಅತೀ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಶನಿವಾರ ಮೈಸೂರಿನ ಜೆ.ಕೆ ಮೈದಾನದಲ್ಲಿ ಏರ್ಪಡಿಸಿರುವ ರೈತ ದಸರಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೃಷಿ ಲಾಭದಾಯಕವಾಗಿಸುವುದೇ ರಾಜ್ಯ ಸರಕಾರದ ಧ್ಯೇಯ. ಅದಕ್ಕಾಗಿ ಕೃಷಿ, ಪಶುಸಂಗೋಪನೆ, ತೋಟಗಾರಿಕೆ ಹಾಗೂ ರೇಷ್ಮೆ ಎಲ್ಲವನ್ನೂ ಒಟ್ಟುಗೂಡಿಸಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಕೃಷಿಕರ ಆದಾಯದಲ್ಲಿ ವೃದ್ಧಿಯಾಗಬೇಕು. ವೈಜ್ಞಾನಿಕ ಬೆಲೆ ದೊರೆಯುವ ಜೊತೆಗೆ ಸರ್ವ ಋತು ವರಮಾನ ಬರುವಂತೆ ಬೇಸಾಯ ಪದ್ಧತಿ ಅಳವಡಿಕೆಯಾಗಬೇಕು ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕೃಷಿಕರು ಸಮಗ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು :
ಹೈನುಗಾರಿಕೆ, ಕುರಿ, ಕೋಳಿ, ಹಂದಿ, ಮೀನು, ಜೇನು ಸಾಕಾಣಿಕೆಗಳ ಬಗ್ಗೆಯೂ ಗಮನ ಹರಿಸಬೇಕು. ಆಗ ಹೆಚ್ಚಿನ ಆದಾಯ ಪಡೆಯಲು ಸಾಧ್ಯವಿದೆ ಎಂದು ಅವರು ಹೇಳಿದರು.
ಕೃಷಿ ಯಾಂತ್ರೀಕರಣದ ಪರಿಣಾಮಕಾರಿ ಅಳವಡಿಕೆ ಅಗತ್ಯ:
ಕೃಷಿ ಇಲಾಖೆ ವತಿಯಿಂದ ಕಳೆದ ಸಾಲಿನಲ್ಲಿ 1000 ಕೋಟಿ ರೂ. ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಣೆ ಮಾಡಲಾಗಿದೆ. ಕೃಷಿಕರು ಸಾಂಪ್ರಾದಾಯಿಕ ಕೃಷಿ ಜೊತೆಗೆ ಸಮಗ್ರ ಬೇಸಾಯಕ್ಕೆ ಒತ್ತು ನೀಡಬೇಕು. ಬದಲಾಗುತ್ತಿರುವ ತಂತ್ರಜ್ಞಾನ ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಉತ್ಪಾದನೆಯ ಮೌಲ್ಯವರ್ಧನೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬೇಕು ಎಂದು ಕಿವಿ ಮಾತು ಹೇಳಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಸಚಿವರಾದ ವೆಂಕಟೇಶ್ , ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಹರೀಶ್ ಗೌಡ ಮತ್ತಿತರರು ಹಾಜರಿದ್ದರು.