ರೈತರಿಗೆ ಎಂ.ಎಸ್.ಪಿ ಶಾಸನಬದ್ಧಗೊಳಿಸುವಂತೆ ಆಗ್ರಹಿಸಿ ಬಿ.ಆರ್.ಪಾಟೀಲ್ ಧರಣಿ
ಬೆಂಗಳೂರು: ಉಪವಾಸ ಮುಷ್ಕರ ಹಮ್ಮಿಕೊಂಡಿರುವ ರಾಷ್ಟ್ರೀಯ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾರನ್ನು ಉಳಿಸಿ ಮತ್ತು ರೈತರ ಬೆಳೆಗಳಿಗೆ ಎಂ.ಎಸ್.ಪಿ ಶಾಸನಬದ್ಧಗೊಳಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಯ ಸಲಹೆಗಾರ ಹಾಗೂ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಶನಿವಾರ ವಿಧಾನಸೌಧ ಹಾಗೂ ವಿಕಾಸಸೌಧ ಮಧ್ಯದಲ್ಲಿರುವ ಗಾಂಧಿ ಪ್ರತಿಮೆ ಬಳಿ ಒಂದು ದಿನದ ಧರಣಿ ಹಮ್ಮಿಕೊಂಡಿದ್ದರು.
ಪ್ರೊ.ಎಂ.ಎಸ್.ಸ್ವಾಮಿನಾಥನ್ ವರದಿಯ ಅನ್ವಯ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡಬೇಕೆಂದು ರೈತರ ಹಕ್ಕೋತ್ತಾಯವನ್ನು ಬೆಂಬಲಿಸಿ ಜಗತ್ ಸಿಂಗ್ ದಲೈವಾಲಾ ನ.26ರಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು. ಇತ್ತೀಚೆಗೆ ಅವರ ಆರೋಗ್ಯ ತೀವ್ರಹದಗೆಟ್ಟಿದ್ದರಿಂದ ಸರ್ವೋಚ್ಛ ನ್ಯಾಯಾಲಯದ ಆದೇಶದ ಮೇರೆಗೆ ಅವರನ್ನು ಪಂಜಾಬ್ ಪಕ್ಕದ ಖನೌರಿ ಬಾರ್ಡರ್ ಆಸ್ಪ್ರತ್ರೆಗೆ ದಾಖಲಿಸಲಾಗಿದೆ.
ದಲೈವಾಲಾ ಹಾಗೂ ರೈತರ ಹೋರಾಟವನ್ನು ಬೆಂಬಲಿಸಿ ಬಿ.ಆರ್.ಪಾಟೀಲ್ ಹಮ್ಮಿಕೊಂಡಿದ್ದ ಒಂದು ದಿನದ ಶಾಂತಿಯುತ ಧರಣಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ್ ಕುಮಾರ್ ಕೊಂಡಜ್ಜಿ, ರೈತ ಹೋರಾಟಗಾರ ವೀರಸಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಮೂರು ಅವಧಿಯ ಲೋಕಸಭಾ ಚುನಾವಣೆಗಳಿಗೂ ಮುನ್ನ ರೈತರ ಬೆಳೆಗಳಿಗೆ ಎಂ.ಎಸ್.ಪಿ ನೀಡುವುದಾಗಿ ಆಶ್ವಾಸನೆ ನೀಡಿದ್ದ ಆಗಿನ ಮತ್ತು ಈಗಿನ ಪ್ರಧಾನಿ ಎಂ.ಎಸ್.ಪಿ ಶಾಸನ ಬದ್ಧಗೊಳಿಸಿಲ್ಲ. ಹಿಂದೊಮ್ಮೆ ಎಂ.ಎಸ್.ಪಿ ಕೊಂಚ ಹೆಚ್ಚಿಸಿ ಅದನ್ನೇ ‘ಸಿ2 + ಶೇ.50’ರಷ್ಟು ಎಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡುವ ದುಸ್ಸಾಹಸಕ್ಕೂ ಕೇಂದ್ರ ಕೃಷಿ ಸಚಿವಾಲಯ ಮುಂದಾಗಿತ್ತು. ಆಗ ಖುದ್ದು ಸ್ವಾಮಿನಾಥನ್ ಇದು ತಾವು ಸೂಚಿಸಿದ್ದ ಸೂತ್ರ ಅಲ್ಲ ಪತ್ರಿಕಾ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.