ಜಾಗತಿಕ ಹೂಡಿಕೆದಾರರ ಸಮಾವೇಶ: ಸಿದ್ಧತೆ ಪರಿಶೀಲನೆ
ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.11ರಿಂದ 14ರವರೆಗೆ ಜರುಗುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ನಡೆಯುತ್ತಿರುವ ಸಿದ್ಧತೆಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಶನಿವಾರ ಸಮಗ್ರವಾಗಿ ಪರಿಶೀಲಿಸಿದರು.
ಉನ್ನತ ಮಟ್ಟದ ಅಧಿಕಾರಿಗಳ ಜತೆ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಉದ್ಯೋಗ ಮಿತ್ರ ಕಚೇರಿಯಲ್ಲಿ ಸಮಾಲೋಚಿಸಿದ ಅವರು, ಸೂಕ್ತ ಸಲಹೆಗಳನ್ನು ನೀಡಿ, ಮುಂದಿನ ವಾರ ಮತ್ತೊಂದು ಸುತ್ತಿನ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶವು ಫೆ.11ರ ಸಂಜೆಯೇ ಉದ್ಘಾಟನೆ ಆಗಲಿದೆ. ಈ ಸಮಾವೇಶವು ಅಭೂತಪೂರ್ವ ರೀತಿಯಲ್ಲಿ ಯಶಸ್ಸು ಗಳಿಸುವ ಸಂಬಂಧ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಎಂ.ಬಿ.ಪಾಟೀಲ್ ತಿಳಿಸಿದರು.
ಸಮಾವೇಶದಲ್ಲಿ ಯಾವ ಯಾವ ಗೋಷ್ಠಿಗಳಲ್ಲಿ ಯಾರು ಯಾರು ಮಾತನಾಡಬೇಕು ಎನ್ನುವುದನ್ನು ಅಂತಿಮ ಮಾಡಲಾಗುತ್ತಿದೆ. ಜತೆಗೆ ಅತಿಥಿಗಳಿಗೆ ಕರ್ನಾಟಕದ ಅಸ್ಮಿತೆ ಸಾರುವಂತಹ ರೇಷ್ಮೆ ಸ್ಕಾರ್ಫ್, ಮೈಸೂರು ಸ್ಯಾಂಡಲ್ ಸೋಪ್ ಮುಂತಾದ ವಿಶಿಷ್ಟ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಬಗ್ಗೆಯೂ ಅವರು ಚರ್ಚಿಸಿದರು.
ಫೆ.12, 13 ಮತ್ತು 14ರಂದು ಮೂರು ದಿನಗಳ ಕಾಲ ಪೂರ್ಣ ಪ್ರಮಾಣದಲ್ಲಿ ಹಲವು ವಿಚಾರಗಳ ಕುರಿತು ಗೋಷ್ಠಿಗಳು ಮತ್ತು ಹೂಡಿಕೆ ಒಡಂಬಡಿಕೆಗಳು ನಡೆಯಲಿವೆ. ಪ್ರತಿಯೊಂದು ವಿಭಾಗಕ್ಕೂ ಸೂಕ್ತ ಆದ್ಯತೆ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಎಂ.ಬಿ.ಪಾಟೀಲ್ ಹೇಳಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಮಹೇಶ್, ಸಚಿವರ ತಾಂತ್ರಿಕ ಸಲಹೆಗಾರ ಅರವಿಂದ ಗಲಗಲಿ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.