ಹಸಿರು ಪಟಾಕಿ, ಪರಿಸರ ಸ್ನೇಹಿ ಮೂರ್ತಿಗಳಿಗಷ್ಟೇ ಅವಕಾಶ: ಸಚಿವ ಈಶ್ವರ್ ಖಂಡ್ರೆ

Update: 2024-02-29 17:48 GMT

ಬೆಂಗಳೂರು: ಪರಿಸರ ಉಳಿಸುವ ನಿಟ್ಟಿನಲ್ಲಿ ಈ ಬಾರಿ ಏಳು ತಿಂಗಳ ಮೊದಲೇ ಪರಿಸರ ಇಲಾಖೆ ಕಾರ್ಯೋನ್ಮುಖವಾಗಿದ್ದು, ಪಿಓಪಿ ಮೂರ್ತಿಗಳ ತಯಾರಕರು ಮತ್ತು ಪಟಾಕಿ ಮಾರಾಟಗಾರರಿಗೆ ಸ್ಪಷ್ಟ ಸೂಚನೆಯೊಂದಿಗೆ ನೋಟಿಸ್ ನೀಡಲು ಆದೇಶ ನೀಡಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಗುರುವಾರ ಈ ಸಂಬಂಧ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿರುವ ಅವರು, ಪ್ರಕೃತಿ ಪರಿಸರ ಉಳಿದರಷ್ಟೇ ನಾವು ಉಳಿಯಲು ಸಾಧ್ಯ ಈ ನಿಟ್ಟಿನಲ್ಲಿ ಜಲ ಮೂಲಗಳನ್ನು ಕಲುಷಿತಗೊಳಿಸುವ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ)ಮೂರ್ತಿಗಳ ತಯಾರಿಕೆ, ಸಾಗಾಟ ಮತ್ತು ಮಾರಾಟ ನಿಷೇಧಿಸಲಾಗಿದ್ದು, ಈ ಬಗ್ಗೆ ತಯಾರಕರಿಗೆ ಹಬ್ಬಕ್ಕೆ ಏಳು ತಿಂಗಳು ಮುಂಚಿತವಾಗಿಯೇ ಸೂಕ್ತ ತಿಳಿವಳಿಕೆಯೊಂದಿಗೆ ನೋಟಿಸ್ ನೀಡಬೇಕೆಂದು ನಿರ್ದೇಶನ ನೀಡಿದ್ದಾರೆ.

ಪ್ರತಿಬಾರಿ ನೀರಿನಲ್ಲಿ ವಿಸರ್ಜನೆ ಮಾಡುವ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಮೂರ್ತಿಗಳ ತಯಾರಕರು ತಮಗೆ ಮೊದಲೇ ನೋಟಿಸ್ ನೀಡಿದ್ದರೆ, ತಾವು ತಯಾರಿಕೆಯನ್ನೇ ಮಾಡುತ್ತಿರಲಿಲ್ಲ. ಈಗ ತಯಾರಿಸುವ ಮೂರ್ತಿ ಏನು ಮಾಡುವುದು, ತಮಗೆ ನಷ್ಟವಾಗುತ್ತದೆ ಎಂದು ಸಬೂಬು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಏಳು ತಿಂಗಳ ಮೊದಲೇ ಎಲ್ಲ ಪಿಓಪಿ ತಯಾರಕರಿಗೆ ಪರಿಸರ ಸ್ನೇಹಿ ಮೂರ್ತಿಗಳ ತಯಾರಿಕೆ ಮಾಡುವಂತೆ ಮತ್ತು ಅದಕ್ಕೆ ರಾಸಾಯನಿಕ ಬಣ್ಣ ಲೇಪನ ಮಾಡದಂತೆ ಸೂಚಿಸಿ ನೋಟಿಸ್ ನೀಡಬೇಕು ಎಂದು ಅವರು ತಿಳಿಸಿದ್ದಾರೆ.

ಹಸಿರು ಪಟಾಕಿಗೆ ಮಾತ್ರ ಅವಕಾಶ: ಅದೇ ರೀತಿ ವಾಯು ಮತ್ತು ಶಬ್ದ ಮಾಲಿನ್ಯ ಉಂಟು ಮಾಡುವ ಸಾಂಪ್ರದಾಯಿಕ ಪಟಾಕಿಗಳು ಪರಿಸರಕ್ಕೆ ಮಾರಕವಾಗಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಸರಣೆಯ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವ ಮಾರಾಟಗಾರರ ಪಟ್ಟಿಯನ್ನು ಸ್ಥಳೀಯ ಸಂಸ್ಥೆಗಳಿಂದ ಪಡೆದು, ಅವರೆಲ್ಲರಿಗೂ ಹಸಿರು ಪಟಾಕಿ ಮಾತ್ರ ದಾಸ್ತಾನು, ಸಾಗಾಟ ಮತ್ತು ಮಾರಾಟ ಮಾಡುವಂತೆ ನೋಟಿಸ್ ನೀಡಬೇಕು ಎಂದು ಅವರು ಆದೇಶಿಸಿದ್ದಾರೆ.

ಈ ಬಾರಿ ದೀಪಾವಳಿಯ ಸಂದರ್ಭದಲ್ಲಿ ಹಸಿರು ಪಟಾಕಿಗಳ ಹೊರತಾಗಿ ಬೇರೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡದಂತೆ ಈಗಿನಿಂದಲೇ ಕಟ್ಟೆಚ್ಚರ ವಹಿಸಬೇಕು ಮತ್ತು ಪಟಾಕಿ ಸಗಟು ದಾಸ್ತಾನುದಾರರಿಗೆ ಮತ್ತು ಮಾರಾಟಗಾರರಿಗೆ ಸೂಕ್ತ ತಿಳಿವಳಿಕೆ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News