ಬಿಜೆಪಿ ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು: ಸಿದ್ದರಾಮಯ್ಯ ವ್ಯಂಗ್ಯ

Update: 2024-02-20 09:26 GMT

ಬೆಂಗಳೂರು ಫೆ 20: ಬಿಜೆಪಿ ಸರಕಾರದ್ದು 2019ರಿಂದ 2023ರವರೆಗೆ ದ್ವೇಷ ತುಂಬಿದ, ತುಕ್ಕು ಹಿಡಿದ ಬಸ್ಸು ಮುಂದಕ್ಕೆ ಹೋಗಲೇ ಇಲ್ಲ. ವಿಷದ ಹೊಗೆ ಬಿಡುತ್ತದೆ ಎಂದು ಜನ ಪಕ್ಕಕ್ಕೆ ತಳ್ಳಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ನೀಡಿದ್ದ ಗಾಳಿ ಇಲ್ಲದೆ ಕೆಟ್ಟು ನಿಂತಿರುವ ಬಸ್ ಎಂಬ ಹೇಳಿಕೆಗೆ ಇಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಬಿಜೆಪಿ ಸರ್ಕಾರ ಕ್ಕಿಂತಲೂ ಹೆಚ್ಚಿನ ಹಾಲು ಉತ್ಪಾದನೆಯಾಗಿದೆ. 2023- 24ರಲ್ಲಿ 84.41 ಲಕ್ಷ ಲೀಟರ್ ಹಾಲು ಹೆಚ್ಚು ಉತ್ಪಾದನೆಯಾಗಿದೆ ಎಂದು ಕೆ.ಎಂ.ಎಫ್. ವ್ಯವಸ್ಥಾಪಕ ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ವಿವರಿಸಿದರು.

ರೈತರಿಗೆ ನೀಡಬೇಕಿದ್ದ ಪ್ರೋತ್ಸಾಹಧನಕ್ಕಾಗಿ 2019ರಿಂದ ಇಲ್ಲಿಯವರೆಗೆ 1,178 ಕೋಟಿ ರೂ. ಬಿಡುಗಡೆಯಾಗಿವೆ. ಈ ವರ್ಷ 1,172 ಕೋಟಿ ರೂ.ಗಳಲ್ಲಿ 971 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ರೈತರಿಗೆ 3.00 ರೂ.ಗಳಿಂದ 5. ರೂ.ಗಳಿಗೆ ಪ್ರೋತ್ಸಾಹ ಧನ ಹೆಚ್ಚಿಸಿದ್ದು ನಮ್ಮ ಸರ್ಕಾರ ಎಂದರು.

ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ನಿಲುವು, ನೀತಿ, ಮುನ್ನೋಟ ಹಾಗೂ ಕಾರ್ಯಕ್ರಮ ಗಳನ್ನು ಸ್ಪಷ್ಟವಾಗಿ ರಾಜ್ಯದ ಜನತೆ ಮುಂದಿಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯಪಾಲರಿಗೆ ಮುಖ್ಯಮಂತ್ರಿ ಅಭಿನಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News