ರಾಮಭಕ್ತಿಯನ್ನು ದೇಶಭಕ್ತಿ ಎಂದು ಬಿಂಬಿಸುತ್ತಿರುವುದು ದುರಂತ: ಶಿವಸುಂದರ್
ಬೆಂಗಳೂರು: ರಾಮನನ್ನು ದೇಶಕ್ಕೆ ಸಮೀಕರಿಸುವುದು, ರಾಮಭಕ್ತಿಯನ್ನು ದೇಶಭಕ್ತಿ ಎಂದು ಬಿಂಬಿಸುತ್ತಿರುವುದು ದುರಂತದ ಸಂಗತಿಯಾಗಿದೆ. ಹಾಗಾಗಿ ಚಳುವಳಿಯನ್ನು ಗಟ್ಟಿ ಮಾಡದೆ ಮೋದಿಯನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಅಂಕಣಕಾರ ಶಿವಸುಂದರ್ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಕ್ವೀನ್ಸ್‍ರಸ್ತೆಯಲ್ಲಿರುವ ದಾರುಸ್ಸಾಲಮ್ ಬಿಲ್ಡಿಂಗ್‍ನ ಬಿಫ್ಟ್ ಸಭಾಂಗಣದಲ್ಲಿ ಫೊರಂ ಫಾರ್ ಡೆಮೋಕ್ರಾಸಿ ಅಂಡ್ ಕಮ್ಯುನಲ್ ಅಮಿಟಿ-ಕರ್ನಾಟಕ ಚಾಪ್ಟರ್ ವತಿಯಿಂದ ಆಯೋಜಿಸಿದ್ದ ‘ಲೋಕಸಭಾ ಚುನಾವಣೆ-2024’ ಎಂಬ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಂವಿಧಾನವು ಘನತೆಯ ಬದುಕನ್ನು ನೀಡಿದೆ. ಆದರೂ ಇಂದು ಅಸಮಾನತೆ ತಾಂಡವವಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
1991ರಲ್ಲಿ ಕಾಂಗ್ರೆಸ್ ಸರಕಾರವು ನೂತನ ಆರ್ಥಿಕ ನೀತಿಯನ್ನು ಜಾರಿ ಮಾಡಿದರೆ, ನರೇಂದ್ರ ಮೋದಿ ಸರಕಾರವು ಅದನ್ನು ತೀವ್ರ ಗತಿಯಲ್ಲಿ ತೆಗೆದುಕೊಂಡು ಹೋಗಿದೆ. ಹೀಗಾಗಿ ದೇಶದ ಆರ್ಥಿಕತೆಯನ್ನು ಅದಾನಿ, ಅಂಬಾನಿ ನಿಯಂತ್ರಿಸುತ್ತಿದ್ದಾರೆ. ಯಾವ ಸರಕಾರ ಬಂದರೂ ಈ ಸಮಸ್ಯೆಗಳು ಬದಲಾಗುವುದಿಲ್ಲ. ನೀತಿಗಳನ್ನೇ ಬದಲಾಯಿಸಬೇಕಾಗಿದೆ ಎಂದು ಅವರು ತಿಳಿಸಿದರು.
ವಾಸ್ತವವಾಗಿ 14ನೇ ಶತಮಾನದವರೆಗೂ ಈ ದೇಶದಲ್ಲಿ ಯಾವುದೇ ರಾಮ ಮಂದಿರ ಇರಲಿಲ್ಲ. ಆದರೆ ಉತ್ತರ ಪ್ರದೇಶದ ಚುನಾವಣೆಯ ಸಂದರ್ಭದಲ್ಲಿ ಎಲ್ಲ ಪಕ್ಷಗಳು ರಾಮಮಂದಿರ ನಿರ್ಮಾಣದ ವಿಚಾರವನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಂಡವು ಎಂದು ಅವರು ಪ್ರಸ್ತಾಪಿಸಿದರು.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯ ಸೋಲು ಮತ್ತು ಮೋದಿಯ ಗೆಲುವು ಎಂಬ ಅಂಶಗಳ ಮೇಲೆ ನಡೆಯುತ್ತಿದೆ. ಆದರೆ ಚುನಾವಣೆಯ ನಂತರ ಏನಾಗಬಹುದು ಎಂದು ನಾವು ಅರಿತುಕೊಳ್ಳಬೇಕಾಗಿದೆ. ಮೋದಿ ಸೋತರೆ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆಯೇ? ಅಧಿಕಾರಕ್ಕೆ ಬರುವ ಮುನ್ನವೇ ಮಹಾರಾಷ್ಟ್ರ, ಬಿಹಾರ, ಉತ್ತರ ಪ್ರದೇಶದಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ನಮ್ಮ ಮುಂದಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ ಲೋಕಸಭೆಗಾಗಿ ಮ್ಯಾನಿಫೆಸ್ಟೋ ಅನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಅಧಿಕಾರಿ ಎಂ.ಜಿ.ದೇವಸಹಾಯಂ, ತ್ರಿಲೋಚನಾ ಶಾಸ್ತ್ರಿ, ಅರವಿಂದ್ ನಾರಾಯಣ್, ಬೃಂದಾ ಅಡಿಗ, ಮೊಹಮ್ಮದ್ ತಾಹಾ ಮತೀನ್, ಎಂ.ಎಫ್.ಪಾಷಾ ಸೇರಿದಂತೆ ಮತ್ತಿತತರು ಇದ್ದರು.