ಪ್ರಧಾನಿ ಮೋದಿ ಹೇಳಿಕೆ ಸಾಂವಿಧಾನಿಕ ಹುದ್ದೆಗೆ ಕಳಂಕ : ʼಜಾಗೃತ ನಾಗರಿಕರು–ಕರ್ನಾಟಕʼ ಖಂಡನೆ

Update: 2024-04-22 18:27 GMT

Photo : PTI

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ರಾಜಸ್ಥಾನದ ಚುನಾವಣಾ ಭಾಷಣದಲ್ಲಿ ತಮ್ಮ ಸಾಂವಿಧಾನಿಕ ಹುದ್ದೆಗೆ ಕಳಂಕ ತರುವಂತಹ ಮಾತನ್ನಾಡಿದ್ದಾರೆ ಎಂದು ಪ್ರೊ.ಕೆ. ಮರುಳಸಿದ್ದಪ್ಪ, ಡಾ. ಜಿ.ರಾಮಕೃಷ್ಣ, ಡಾ. ವಿಜಯಾ, ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಡಾ. ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ. ಶ್ರೀಪಾದ ಭಟ್, ಡಾ.ಕೆ.ಶರೀಫಾ, ವಿಮಲಾ‌.ಕೆ.ಎಸ್, ದಿನೇಶ್ ಅಮಿನ್ ಮಟ್ಟು ಸೇರಿದಂತೆ ಮತ್ತಿತರರು ಖಂಡಿಸಿದ್ದಾರೆ.

ಜಾಗೃತ ನಾಗರಿಕರು ಕರ್ನಾಟಕ ಹೆಸರಿನಲ್ಲಿ ಪ್ರಕಟನೆ ಹೊರಡಿಸಿರುವ ಅವರು, ಕಾಂಗ್ರೆಸ್ ಪಕ್ಷವು ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚಲಿದೆ, ಭೂಮಿ, ಒಡವೆ-ವಸ್ತು, ಕಡೆಗೆ ಹೆಣ್ಣು ಮಕ್ಕಳ ಮಂಗಳ ಸೂತ್ರವನ್ನು ಸಹ ಅವರಿಗೇ ಕೊಟ್ಟುಬಿಡಲಾಗುತ್ತದೆ ಎಂದು ಬಹು ಸಂಖ್ಯಾತ ಸಮುದಾಯವನ್ನು ಹೆದರಿಸಿದ್ದಾರೆ ಎಂದು ಹೇಳಿದ್ದಾರೆ.

ಅಲ್ಲದೆ ಮುಸ್ಲಿಮರು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂಥವರು ಎಂದು ಚುಚ್ಚಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತುಗಳು ಮಾತ್ರವಲ್ಲ. ಇದು ದ್ವೇಷ ಭಾಷಣವೊಂದರ ಅತ್ಯಂತ ಕೆಟ್ಟ, ಉಗ್ರವಾದ ಮಾದರಿ. ಇಂತಹ ಭಾಷಣಗಳು ಉಂಟು ಮಾಡುವ ಪರಿಣಾಮಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂದಿದ್ದಾರೆ.

ಚುನಾವಣೆ ಮುಗಿದ ಮೇಲೂ ಇದರ ಗಾಯಗಳು ದಶಕಗಳ ಕಾಲ ಉಳಿಯುತ್ತವೆ. ಮೋದಿಯವರು ಅನೇಕ ದ್ವೇಷ ಭಾಷಣಗಳನ್ನು ಹಿಂದೆಯೂ ಮಾಡಿದ್ದಾರೆ. ಆದರೆ ಅವರು ಈ ಬಾರಿ ತಮ್ಮ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ದ್ವೇಷ ಭಾಷಣದ ಪಾತಾಳಕ್ಕೆ ಇಳಿದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಈಗಲೂ ಅವರಿಗೆ ಲಗಾಮನ್ನು ತೊಡಿಸುವಲ್ಲಿ ಹಾಗೂ ಶಿಕ್ಷೆ ವಿಧಿಸುವಲ್ಲಿ ಚುನಾವಣಾ ಆಯೋಗ ಮತ್ತು ನ್ಯಾಯಾಂಗ ವಿಫಲವಾದರೆ ಅಲ್ಲಿಗೆ ಭಾರತದಲ್ಲಿ ಧರ್ಮ ನಿರಪೇಕ್ಷ ಜನತಂತ್ರ ಮರಣಶಯ್ಯೆಯಲ್ಲಿದೆ ಎಂದೇ ಅರ್ಥ. ಕೂಡಲೇ ಆಯೋಗವು ದೂರನ್ನು ದಾಖಲಿಸಿಕೊಂಡು ಕಾರ್ಯ ಪ್ರವೃತ್ತವಾಗದಿದ್ದರೆ ಚುನಾವಣಾ ಆಯೋಗವು ಅತ್ಯಂತ ಪಕ್ಷಪಾತಿಯು ಬೆನ್ನುಮೂಳೆ ಇಲ್ಲದಿರುವ ಸಂಸ್ಥೆ ಎಂಬದು ಜಗಜ್ಜಾಹೀರಾಗುತ್ತದೆ ಎಂದು ಎಚ್ಚರಿಕೆ ನಿಡಿದ್ದಾರೆ.

ಈ ಚುನಾವಣೆಯಲ್ಲಿ, ಹೆಚ್ಚಿದ ಜನರ ಬಡತನ, ನಿರುದ್ಯೋಗ ಬೆಲೆ ಏರಿಕೆಗಳ ಕುರಿತು ಆಗುತ್ತಿರುವ ಚರ್ಚೆಯ ದಾರಿ ತಪ್ಪಿಸಿ ಭಾವನಾತ್ಮಕವಾಗಿ ಸೆಳೆಯುವ ಮತ್ತು ಮುಸ್ಲಿಂ ದ್ವೇಷವನ್ನು ಬೆಳೆಸುವ ಉದ್ದೇಶದಿಂದಲೇ ಈ ಮಾತುಗಳನ್ನಾಡಿರುವುದು ಸುಸ್ಪಷ್ಟವಾಗಿ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕ್ರಮಕ್ಕೆ ಮುಂದಾಗಿ ದೇಶದ ಸಾಮರಸ್ಯ ಪರಂಪರೆಯನ್ನು ಕಾಯುವ ಕರ್ತವ್ಯವನ್ನು ನಿಭಾಯಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News