ಜೈವಿಕ ತಂತ್ರಜ್ಞಾನ ಹೂಡಿಕೆಗಳಲ್ಲಿ ಕರ್ನಾಟಕದ್ದು ಶೇ.21ರಷ್ಟು ಕೊಡುಗೆ : ಪ್ರಿಯಾಂಕ್ ಖರ್ಗೆ

Update: 2024-07-31 16:06 GMT

PC :x/@PriyankKharge

ಬೆಂಗಳೂರು : ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ರಾಜ್ಯಗಳಲ್ಲಿ ಒಂದಾದ ಕರ್ನಾಟಕವು 2023ನೆ ಸಾಲಿನಲ್ಲಿ ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಹೂಡಿಕೆಗಳಲ್ಲಿ ಶೇ.30ಕ್ಕಿಂತ ಹೆಚ್ಚು ಆಕರ್ಷಿಸಿದ್ದು, ಇದು ಭಾರತದ ಜೈವಿಕ ಆರ್ಥಿಕತೆಗೆ ಶೇ.21ರಷ್ಟು ಕೊಡುಗೆ ನೀಡುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಬುಧವಾರ ನಗರದಲ್ಲಿ ‘ಕರ್ನಾಟಕ ಜೈವಿಕ ಆರ್ಥಿಕ ವರದಿ-2024’ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಜೈವಿಕ ಆರ್ಥಿಕತೆಯು 2020-22ರಲ್ಲಿ 28 ಬಿಲಿಯನ್ ಡಾಲರ್ ಇದ್ದುದು 2023ರಲ್ಲಿ 31 ಬಿಲಿಯನ್ ಡಾಲರ್ ತಲುಪಿದ್ದು ಸುಮಾರು ಶೇ. 10.7ರಷ್ಟು  ಹೆಚ್ಚಳವಾಗಿದೆ ಎಂದು ಹೇಳಿದರು.

2030ರ ವೇಳೆಗೆ ಜೈವಿಕ ಆರ್ಥಿಕತೆಯನ್ನು ಮೂರು ಪಟ್ಟು ಹೆಚ್ಚಿಸುವ ಗುರಿಯೊಂದಿಗೆ ಜೈವಿಕ ಆರ್ಥಿಕತೆಯನ್ನು 100 ಶತಕೋಟಿ ಡಾಲರ್‍ಗಳಿಗೆ ಏರಿಸುವುದು, 30 ಶತಕೋಟಿ ಡಾಲರ್ ಗಳಿಗೆ ಬಯೋಫಾರ್ಮಾ ಕೊಡುಗೆಗಳನ್ನು ಕೇಂದ್ರೀಕರಿಸುವುದು, ಜೈವಿಕ ಕೃಷಿ ಯನ್ನು 15 ಶತಕೋಟಿ ಡಾಲರ್ ಗಳಿಗೆ ವಿಸ್ತರಿಸುವುದು ಮತ್ತು 30 ಶತಕೋಟಿ ಡಾಲರ್‌ ಗಳಿಗೆ ಜೈವಿಕ ಕೈಗಾರಿಕಾ ಕೊಡುಗೆಗಳನ್ನು ಏರಿಸುವುದರೊಂದಿಗೆ ನಾಲ್ಕು ಪಟ್ಟು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ನವೋದ್ಯಮಗಳ ಒಟ್ಟು ನೆಲೆ 1000 ಗಡಿ ದಾಟಿದ್ದು, ಇದು ಕರ್ನಾಟಕ ರಾಜ್ಯಕ್ಕೆ ಗಮನಾರ್ಹ ಮೈಲಿಗಲ್ಲಾಗಿದೆ. ರಾಜ್ಯವು ಪ್ರತಿ ತಿಂಗಳು 17 ಜೈವಿಕ ತಂತ್ರಜ್ಞಾನ ನವೋದ್ಯಮಗಳ ನೋಂದಣಿಗೆ ಸಾಕ್ಷಿಯಾಗಿದೆ. ಈ ಪಟ್ಟಿಗೆ 2023ರ ಒಟ್ಟು 202 ಹೊಸ ನವೋದ್ಯಮಗಳು ಸೇರಿವೆ ಎಂದು ಅವರು ತಿಳಿಸಿದರು.

ಜೈವಿಕ ತಂತ್ರಜ್ಞಾನ ಆರ್ಥಿಕ ವರದಿಯಲ್ಲಿ ಮೊದಲ ಬಾರಿಗೆ ಜಿಲ್ಲಾವಾರು ಮಾಹಿತಿಯನ್ನು ಕ್ರೋಢೀಕರಿಸಲಾಗಿದೆ. ಬಳ್ಳಾರಿ, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗಳು ಬಿಟಿ ಹತ್ತಿ, ಜೈವಿಕ ಇಂಧನಗಳು ಮತ್ತು ಫಾರ್ಮಾದಂತಹ ವಿವಿಧ ವಲಯಗಳಲ್ಲಿ ಗಮನಾರ್ಹ ಕೊಡುಗೆಗಳನ್ನು ನೀಡಿದೆ ಎಂಬ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

ಜೈವಿಕ ಆರ್ಥಿಕತೆಗೆ ಕೊಡುಗೆ ನೀಡುವ ಬೆಂಗಳೂರು ಹೊರವಲಯದ ಮೈಸೂರು ಜಿಲ್ಲೆ ಪ್ರಾದೇಶಿಕ ಕೇಂದ್ರ ಒಟ್ಟು ಶೇ.9.04ರಷ್ಟು ಕೊಡುಗೆ ನೀಡುತ್ತದೆ. ಬೆಳಗಾವಿ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವಾರು ಜಿಲ್ಲೆಗಳು ಶೇ.4ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ ಎಂದು ಅವರು ಹೇಳಿದರು.

ಜೈವಿಕ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಜೈವಿಕ ಕೃಷಿ ಮತ್ತು ವೈದ್ಯಕೀಯ ಸಾಧನಗಳಂತಹ ಉದಯೋನ್ಮುಖ ಕ್ಷೇತ್ರಗಳಿಗೆ ಆದ್ಯತೆ ನೀಡಲು ಬಲವಾದ ಒತ್ತು ನೀಡುವ ಮೂಲಕ ಕರ್ನಾಟಕ ಜೈವಿಕ ತಂತ್ರಜ್ಞಾನ ಹೊಸ ನೀತಿಯನ್ನು ರೂಪಿಸುವಲ್ಲಿ ಜೈವಿಕ ಆರ್ಥಿಕ ವರದಿ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.

ಈ ನೀತಿಯು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಏಕ್ರೂಪ್ ಕೌರ್ ಹೇಳಿದರು.

ಅಸೋಸಿಯೇಷನ್ ಆಫ್ ಬಯೋಟೆಕ್ನಾಲಜಿ ಲೆಡ್ ಎಂಟರ್‍ಪ್ರೈಸಸ್ ಸಂಸ್ಥೆಯ ಅಧ್ಯಕ್ಷ ಜಿ.ಎಸ್.ಕೃಷ್ಣನ್ ಮಾತನಾಡಿ, ಕರ್ನಾಟಕ ಜೈವಿಕ ಆರ್ಥಿಕ ವರದಿಯು ಜೈವಿಕ ತಂತ್ರಜ್ಞಾನ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ರಾಜ್ಯದ ಕಾರ್ಯಕ್ಷಮತೆ ಮತ್ತು ಭಾರತದ ಜೈವಿಕ ಆರ್ಥಿಕತೆಗೆ ನೀಡಿದ ಮಹತ್ವದ ಕೊಡುಗೆಯ ಕುರಿತು ಅಮೂಲ್ಯವಾದ ಮಾಹಿತಿಯನ್ನು ಒಳಗೊಂಡಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News