ನಾವು ಬೀದಿಗಿಳಿದರೆ ವಿಜಯೇಂದ್ರ ಮನೆ ಖಾಲಿ ಮಾಡಬೇಕಾಗುತ್ತದೆ : ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ
ಬೆಂಗಳೂರು: ‘ಬಿಜೆಪಿ ರಾಜ್ಯಾಧ್ಯಕ್ಷ ಎಂಬ ಕಾರಣಕ್ಕೆ ವಿಜಯೇಂದ್ರಗೆ ಗೌರವ ನೀಡಲಾಗುತ್ತದೆ. ಆದರೆ, ಮನಸೋ ಇಚ್ಛೆ ಮಾತನಾಡಿದರೆ ಸಹಿಸಲಾಗುವುದಿಲ್ಲ. ನಾವು ಬೀದಿಗಿಳಿದರೆ ನೀವು ಮನೆ ಖಾಲಿ ಮಾಡಬೇಕಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಚಿನ್ ಕುಟುಂಬದ ಸದಸ್ಯರ ಮೇಲೆ ಬಿಜೆಪಿಯವರು ಒತ್ತಡ ಹೇರುತ್ತಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಈಗಾಗಲೇ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲಾಗುತ್ತಿದೆ. ಸ್ಥಳ ಮಹಜರು ನಡೆದಿದೆ. ಪಾರದರ್ಶಕ ತನಿಖೆ ನಡೆಯಲಿದೆ ಎಂದು ಕುಟುಂಬದ ಸದಸ್ಯರಿಗೆ ತಿಳಿಸಿದ್ದೇನೆ ಎಂದರು.
‘ಹೆಚ್ಚುವರಿ ಪ್ರಕರಣಗಳನ್ನು ನಮ್ಮ ತನಿಖೆಗೆ ವಹಿಸಬೇಡಿ’ ಎಂದು ಸಿಬಿಐ ರಾಜ್ಯಗಳಿಗೆ ಪತ್ರ ಬರೆದಿದೆ. ಸಚಿನ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ. ಬಿಜೆಪಿಯವರು ಕತೆ ಬರೆದಂತೆ ನಾವು ತಾಳ ಹಾಕಲಾಗುವುದಿಲ್ಲ. ಜೀವ ಹೋಗಿದೆ. ನ್ಯಾಯ ಕೊಡಿಸುವುದು ನಮ ಜವಾಬ್ದಾರಿ. ವಿಪಕ್ಷಗಳು ರಾಜಕೀಯ ಮಾಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ಸಲಹೆ ನೀಡಿದರು.
ಬಿಜೆಪಿ ಪ್ರತಿಭಟನೆಗೆ ಬರುವಂತೆ ಸಚಿನ್ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಟುಂಬದವರು ನಮಗೆ ಪ್ರಿಯಾಂಕ್ ಖರ್ಗೆ ಯಾರೆಂಬುದು ಗೊತ್ತಿಲ್ಲ. ನಮಗೂ ಅವರಿಗೂ ಸಂಬಂಧವಿಲ್ಲವೆಂದು ಹೇಳಿದ್ದಾರೆ. ಸಚಿವರಾದ ಈಶ್ವರ್ ಖಂಡ್ರೆ, ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಚಿನ್ ಮನೆಗೆ ಭೇಟಿ ನೀಡಿ ಸಾಂತ್ವಾನ ನೀಡಿದ್ದು, ಸರಕಾರದಿಂದ ನೆರವು ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ಈ ಹಿಂದೆ ಆತಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಬಿಜೆಪಿಯವರು ಅವರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವಾನ ಹೇಳುವ ಪ್ರಯತ್ನ ಮಾಡಿದ್ದರೇ?. ಎಂದು ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ, ಈ ಹಿಂದೆ ಶೇ.40ರಷ್ಟು ಕಮಿಷನ್ ಹಗರಣ, ಪಿಎಸ್ಸೈ ಹಗರಣ, ಗಂಗಕಲ್ಯಾಣ ಯೋಜನೆ ಹಣ ದುರುಪಯೋಗ ಸೇರಿದಂತೆ ಹಲವಾರು ಹಗರಣಗಳಾಗಿವೆ. ಇದ್ಯಾವುದನ್ನೂ ಅವರು ಸಿಬಿಐಗೆ ಕೊಟ್ಟಿರಲಿಲ್ಲ ಎಂದು ಟೀಕಿಸಿದರು.