ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ : ಪುನೀತ್ ಕೆರೆಹಳ್ಳಿಗೆ ಷರತ್ತುಬದ್ಧ ಜಾಮೀನು
Update: 2024-07-30 16:57 GMT
ಬೆಂಗಳೂರು: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಸಂಘಪರಿವಾರದ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ನಗರದ 5ನೇ ಎಸಿಎಂಎಂ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜೈಪುರದಿಂದ ಬೆಂಗಳೂರಿಗೆ ಆಮದಾಗುತ್ತಿದ್ದ ಕುರಿ ಮಾಂಸದಲ್ಲಿ ನಾಯಿ ಮಾಂಸ ಮಿಶ್ರಿತವಾಗಿದೆ ಎಂದು ಆರೋಪಿಸಿದ್ದ ಪುನೀತ್ ಕೆರೆಹಳ್ಳಿ ಮತ್ತು ಸಹಚರು ಜು.26ರಂದು ಮೆಜೆಸ್ಟಿಕ್‍ನ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಮಾಂಸದ ಬಾಕ್ಸ್ ಗಳನ್ನು ತಡೆದು ಗಲಾಟೆ ನಡೆಸಿದ್ದರು.
ಈ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ಯತ್ನಿಸಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುನೀತ್ ಕೆರೆಹಳ್ಳಿಯನ್ನು ನಗರದ ಕಾಟನ್‍ಪೇಟೆ ಠಾಣಾ ಪೊಲೀಸರು ಬಂಧಿಸಿದ್ದರು. ಸದ್ಯ ಪುನೀತ್ ಕೆರೆಹಳ್ಳಿಗೆ ಜಾಮೀನು ನೀಡಿರುವ ನ್ಯಾಯಾಲಯ ಪ್ರತಿ ತಿಂಗಳ ಮೊದಲ ರವಿವಾರ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು, ವಿದೇಶ ಪ್ರಯಾಣ ಮಾಡಬಾರದು ಎಂಬ ಷರತ್ತುಗಳನ್ನು ವಿಧಿಸಿ ಆದೇಶ ಹೊರಿಡಿಸಿದೆ.