ವಾಲ್ಮೀಕಿ ನಿಗಮದಲ್ಲಿ ಅಕ್ರಮ | ಸೋನಿಯಾ ಗಾಂಧಿಗೂ ಹಣ ಪಾವತಿಯ ಅನುಮಾನ : ಆರ್.ಅಶೋಕ್

Update: 2024-06-01 13:29 GMT

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಣಕಾಸು ಸಚಿವರಾಗಿದ್ದರೂ ಅವರ ಕಣ್ಣಿನ ಕೆಳಗೆಯೇ ಕೋಟ್ಯಂತರ ರೂ.ಹಗರಣ ನಡೆದರೂ ಅವರಿಗೆ ತಿಳಿದಿಲ್ಲ. ಕೂಡಲೇ ಸಿಎಂ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿ ಪಿ.ಚಂದ್ರಶೇಖರನ್ ಕುಟುಂಬ ಕಷ್ಟದಲ್ಲಿದೆ. ಭ್ರಷ್ಟಾಚಾರ ನಡೆದಿದ್ದರೂ, ತಮ್ಮ ಬಳಿಯೇ ಇರುವ ಹಣಕಾಸು ಇಲಾಖೆಯಿಂದ ಎಲ್ಲ ಮಾಹಿತಿ ಪಡೆದಿದ್ದರೂ ಸಚಿವ ಬಿ.ನಾಗೇಂದ್ರ ರಾಜೀನಾಮೆ ಮಾತ್ರ ಪಡೆಯುತ್ತಿಲ್ಲ ಎಂದು ದೂರಿದರು.

ರಾಜ್ಯ ಸರಕಾರದ ಹಣವನ್ನು ಯಾರು ಹೇಗೆ ಬೇಕಾದರೂ ವರ್ಗಾವಣೆ ಮಾಡಬಹುದು ಎಂಬುದು ಇದರ ಅರ್ಥ. ಈ ಹಣದಲ್ಲಿ ಎಐಸಿಸಿ ಮುಖಂಡರೂ ಆಗಿರುವ ಸೋನಿಯಾ ಗಾಂಧಿ ಅವರಿಗೂ ಪಾಲು ಸಿಕ್ಕಿದೆ ಎನ್ನುವುದು ನನ್ನ ಅನುಮಾನ. ಆಂಧ್ರದ ಜ್ಯುಬಿಲಿ ಹಿಲ್ಸ್ ಬ್ಯಾಂಕ್‍ಗೆ ಹಣ ವರ್ಗಾವಣೆ ಮಾಡಲಾಗಿದೆ. ಜೊತೆಗೆ 9 ಐಟಿ ಕಂಪೆನಿಗಳಿಗೆ ವರ್ಗಾಯಿಸಲಾಗಿದೆ’ ಎಂದು ಅಶೋಕ್ ಹೇಳಿದರು.

ಸಿದ್ದರಾಮಯ್ಯ ಸರಕಾರದಲ್ಲಿ ಲೂಟಿಯನ್ನು ತಡೆದವರು ನಿವೃತ್ತರಾಗಬೇಕು ಅಥವಾ ಆತ್ಮಹತ್ಯೆ ಮಾಡಿಕೊಳ್ಳಬೇಕು. ಈ ಹಗರಣ ದಿಲ್ಲಿಯನ್ನು ತಲುಪಿದ್ದು, ಮುಂದೆ ದಿಲ್ಲಿ ನಾಯಕರ ವಿಚಾರವೂ ಬಹಿರಂಗವಾಗಲಿದೆ. ದಲಿತರಿಗೆ ಮೀಸಲಿಟ್ಟ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ಇನ್ನೂ ಪತ್ತೆ ಮಾಡಬೇಕಿದೆ ಎಂದು ಅವರು ಹೇಳಿದರು.

ತಪ್ಪಿಸಿಕೊಳ್ಳಲು ಸಿಟ್ ತನಿಖೆ: ಈ ಹಗರಣದ ತನಿಖೆ ಮಾಡುವ ಉದ್ದೇಶ ಸರಕಾರಕ್ಕಿಲ್ಲ. ಸಿಐಡಿ ಬದಲು ಎಸ್‍ಐಟಿ ರಚಿಸಿದರೆ ಈ ಪ್ರಕರಣ ಮುಚ್ಚಿಹಾಕಬಹುದೆಂಬ ಉಪಾಯವನ್ನು ಸರಕಾರ ಮಾಡಿದೆ. ಪದೇ ಪದೆ ತನಿಖಾ ಏಜೆನ್ಸಿ ಬದಲಿಸಲಾಗುತ್ತಿದೆ. ಆದ್ದರಿಂದ ಇದನ್ನು ಸಿಬಿಐಗೆ ವಹಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News