ರಾಹುಲ್ ಗಾಂಧಿ ಹೇಳಿಕೆ ಖಂಡಿಸಿ ನಾಳೆ ಬಿಜೆಪಿಯಿಂದ ಪ್ರತಿಭಟನೆ
ಬೆಂಗಳೂರು : ವಿಪಕ್ಷ ನಾಯಕ ರಾಹುಲ್ ಗಾಂಧಿ ಅಮೆರಿಕದಲ್ಲಿ ಮೀಸಲಾತಿ ರದ್ದುಪಡಿಸುವುದಾಗಿ ನುಡಿದಿರುವ ಹೇಳಿಕೆಯನ್ನು ಖಂಡಿಸಿ ಎರಡು ದಿನಗಳ ಕಾಲ ರಾಹುಲ್ ಗಾಂಧಿಯವರ ಪ್ರತಿಕೃತಿ ದಹನ ಮಾಡಿ ರಾಜ್ಯಾಧ್ಯಂತ ಪ್ರತಿಭಟನೆ ಮಾಡಲಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದ್ದಾರೆ.
ಬುಧವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಎರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಪಕ್ಷ ಕಾಂಗ್ರೆಸ್. ಈಗ ಮೀಸಲಾತಿ ರದ್ದುಪಡಿಸುವುದಾಗಿ ಹೇಳಿ ಅಂಬೇಡ್ಕರ್ ವಿಚಾರಕ್ಕೆ ತಿಲಾಂಜಲಿ ನೀಡಲು ಹೊರಟಿದ್ದಾರೆ. ಇದೇನಾ ಅವರಿಗೆ ಕೊಡುವ ಗೌರವ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಮೀಸಲಾತಿ ಎಂಬುದು ಎಸ್ಸಿ, ಎಸ್ಟಿಗಳ ಜನ್ಮ ಹಕ್ಕು. ಅದು ಕಾಂಗ್ರೆಸ್ ಪಕ್ಷದ ಭಿಕ್ಷೆಯಲ್ಲ. ದಲಿತರ ಕಲ್ಯಾಣಕ್ಕಾಗಿ, ಬದುಕಿಗೆ ರಕ್ಷಣೆ, ಜೀವನಕ್ಕೆ ಭದ್ರತೆ ನೀಡಲು ಮತ್ತು ಅವರೂ ಮನುಷ್ಯರ ರೀತಿ ಬದುಕಬೇಕೆಂಬ ಹಿನ್ನಲೆಯಲ್ಲಿ ಡಾ.ಅಂಬೇಡ್ಕರ್ ಮೀಸಲಾತಿಯನ್ನು ಸಂವಿಧಾನದಲ್ಲೇ ಬರೆದರು. 1955ರಲ್ಲಿ ಕಾಕಾ ಕಾಲೇಕರ್ ಸಮಿತಿ ವರದಿ ನೀಡುವ ಸಂದರ್ಭದಲ್ಲಿ ನೆಹರೂ ಮೀಸಲಾತಿಯನ್ನು ವಿರೋಧಿಸಿದ್ದರು ಎಂದು ರವಿಕುಮಾರ್ ಮಾಹಿತಿ ನೀಡಿದರು.