ರಾಜಾ ವೆಂಕಟಪ್ಪ ನಾಯಕ ಅವರು ಅಜಾತ ಶತ್ರು, ಆದರ್ಶ ವ್ಯಕ್ತಿತ್ವ: ಡಿಸಿಎಂ ಡಿ.ಕೆ. ಶಿವಕುಮಾರ್

Update: 2024-02-26 07:27 GMT

ಬೆಂಗಳೂರು : "ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದ ತಾಲೂಕಿನ ಶಾಸಕರಾಗಿದ್ದ ದಿವಂಗತ ರಾಜಾ ವೆಂಕಟಪ್ಪ ನಾಯಕ ಅವರು ಅಜಾತ ಶತ್ರು ಹಾಗೂ ಆದರ್ಶ ವ್ಯಕ್ತಿತ್ವ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದರು.

ವಿಧಾನಸಭೆಯಲ್ಲಿ ಸಂತಾಪ ಸೂಚಕ ನಿರ್ಣಯದ ವೇಳೆ ಮಾತನಾಡಿದ ಶಿವಕುಮಾರ್ ಅವರು "ರಾಜಾ ವೆಂಕಟಪ್ಪ ನಾಯಕ ಅವರು ನನಗೆ 1987ರಿಂದ ಪರಿಚಯ. ನಾನು ಗ್ರಾನೈಟ್ ವ್ಯವಹಾರ ಮಾಡುತ್ತಿದ್ದಾಗ ಅವರು ತಮ್ಮ ಸ್ನೇಹಿತರೊಂದಿಗೆ ನಮ್ಮ ಊರಿಗೆ ಬಂದಿದ್ದರು. ನಮ್ಮನ್ನು ಅವರ ಊರಿಗೆ ಕರೆದುಕೊಂಡು ಹೋಗಿ ಅಲ್ಲಿನ ಭಾಗದ ಕಲ್ಲಿನ ಬಗ್ಗೆ ತೋರಿಸಿದ್ದರು. ಆ ಸಂದರ್ಭದಲ್ಲಿ ನಾನು ಅವರನ್ನು ಕೇಳಿದೆ. ನಾನು ಈಗಾಗಲೇ ವಿಧಾನಸಭೆಗೆ ಸ್ಪರ್ಧಿಸಿ ಸೋತಿದ್ದೇನೆ. ನೀವು ರಾಜ ಮನೆತನದವರು, ನಿಮ್ಮ ಕುಟುಂಬದವರು ಶಾಸಕರಾಗಿದ್ದಾರೆ. ನೀವು ಯಾಕೆ ಇನ್ನು ಸ್ಪರ್ಧೆ ಮಾಡಿಲ್ಲ ಎಂದು ಕೇಳಿದೆ. ನಂತರ ಅವರು 1994ರಲ್ಲಿ ಸ್ಪರ್ಧಿಸಿ, ನಮ್ಮ ಜತೆ ನಾಲ್ಕು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ " ಎಂದರು.

ಯಾವುದೇ ರಾಜ ಸದಾ ರಾಜನಾಗಿ, ಯಾವುದೇ ಶ್ರೀಮಂತ ಸದಾ ಶ್ರೀಮಂತನಾಗಿ, ಯಾವುದೇ ಬಡವ ಸದಾ ಬಡವನಾಗಿ ಇರಲು ಸಾಧ್ಯವಿಲ್ಲ. ಯಾರು ಯಾವಾಗ ಬೇಕಾದರೂ ಏನು ಬೇಕಾದರೂ ಆಗಬಹುದು. ದೇವರು ನಮಗೆ ಕೊಟ್ಟಿರುವುದು ಶಾಶ್ವತವಲ್ಲ. ನಮ್ಮ ಸಂಬಂಧಗಳು ಮಾತ್ರ ಶಾಶ್ವತ ಎಂದು ಹೇಳಿದರು.

ನಾಲ್ಕು ದಿನಗಳ ಹಿಂದೆ ನಾನು, ಜಿ.ಸಿ ಚಂದ್ರಶೇಖರ್, ಎಸ್ ಟಿ ಸೋಮಶೇಖರ್, ಶ್ರೀನಿವಾಸ್ ಅವರ ಜತೆ ಆಸ್ಪತ್ರೆಗೆ ಹೋಗಿ ರಾಜಾ ವೆಂಕಟಪ್ಪ ನಾಯಕ ಅವರ ಆರೋಗ್ಯ ವಿಚಾರಿಸಿ ಬಂದಿದ್ದೆ. ಅವರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಕರೆತಂದಿದ್ದರು. ನಾನು ಖಾಸಗಿಯಾಗಿ ಅವರ ಜೊತೆ ಮಾತನಾಡಿದೆ. ಅವರು ಕಾಗದ ಮೇಲೆ ಬರೆದು ನನ್ನ ಜೊತೆ ಮಾತನಾಡಲು ಪ್ರಯತ್ನಿಸಿದರು. ರಾಜ್ಯಸಭೆ ಚುನಾವಣೆ ಬಗ್ಗೆ ಮಾತನಾಡಿದಾಗ, ಮತದಾನದ ವೇಳೆಗೆ ಬರುತ್ತೇನೆ ಎಂದು ಸನ್ನೆ ಮೂಲಕ ಹೇಳಿದರು. ಅವರಿಂದ ಸಹಿ ಹಾಕಿಸಲು ಹೋದಾಗ ಅವರ ಸಹಿ ಸರಿಯಾಗಿ ಬರಲಿಲ್ಲ. ಆಗ ವೈದ್ಯರು ನಾವು ಪ್ರಮಾಣ ಪತ್ರ ನೀಡುತ್ತೇವೆ ಎಂದು ತಿಳಿಸಿದರು. ನಾನು ಅವರ ಕುಟುಂಬದ ಸದಸ್ಯರ ಜೊತೆ ಮಾತನಾಡಿದೆ ಎಂದು ತಿಳಿಸಿದರು.

ನಾನು ನಿನ್ನೆ ಕಾರ್ಯಕ್ರಮದಲ್ಲಿ ಇದ್ದಾಗ ಅವರು ವಿಧಿವಶರಾದ ಬಗ್ಗೆ ಮಾಹಿತಿ ತಿಳಿಯಿತು. ಆಗ ನಾನು ತಕ್ಷಣ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದೆ. ರಾಜಕಾರಣ ಏನೇ ಇರಲಿ, ರಾಜಾ ವೆಂಕಟಪ್ಪ ನಾಯಕ ಅವರು ನಮಗೆ ತೊಂದರೆ ಕೊಟ್ಟಿದ್ದಾರೆ ಎಂದು ಯಾರೊಬ್ಬರೂ ಹೇಳುವುದಿಲ್ಲ.

ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂಬ ವಿವೇಕಾನಂದರ ಮಾತಿನಂತೆ ಅವರು ಯಾವುದೇ ವೈರತ್ವ ಇಲ್ಲದೆ ಜೀವನ ಮಾಡಿದ್ದಾರೆ. ರಾಜಾ ವೆಂಕಟಪ್ಪ ಅವರ ನಿಧನದ ಸುದ್ದಿ ಕೇಳಿ ಅವರ ಅಭಿಮಾನಿ ಕೂಡ ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಆ ಕ್ಷೇತ್ರದಿಂದ ಬೇರೆ ಪಕ್ಷದವರು ಪಕ್ಷ ಸೇರುವ ಸನ್ನಿವೇಶ ಇತ್ತು. ಆಗ ಖರ್ಗೆ ಅವರು, ರಾಜಾ ವೆಂಕಟಪ್ಪ ನಾಯಕ ಅವರು ಉತ್ತಮ ವ್ಯಕ್ತಿತ್ವ ಹೊಂದಿದ್ದು ಅವರು ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಿದರು. ಖರ್ಗೆ ಅವರು ರಾಜಾ ವೆಂಕಟಪ್ಪ ಅವರಿಗೆ ರಾಜ್ಯ ಮಟ್ಟದ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ನೀಡುವಂತೆ ಸೂಚಿಸಿದರು.

ರಾಜಾ ವೆಂಕಟಪ್ಪ ನಾಯಕ ಅವರು ನಮ್ಮಿಂದ ದೂರವಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News