ʼಉಚಿತ ಬಸ್ ಪಾಸ್ʼ ಸೇರಿದಂತೆ ಪತ್ರಕರ್ತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಸರಕಾರಕ್ಕೆ ಮನವಿ

Update: 2024-02-06 17:23 GMT

ಬೆಂಗಳೂರು: ಗ್ರಾಮಾಂತರ ಪ್ರದೇಶದ ಪತ್ರಕರ್ತರು ಸೇರಿದಂತೆ ಎಲ್ಲಾ ಕಾರ್ಯನಿರತ ಪತ್ರಕರ್ತರಿಗೂ ʼಉಚಿತ ಬಸ್ ಪಾಸ್ʼ ಸೌಲಭ್ಯವನ್ನು ಕಲ್ಪಿಸುವುದು ಪತ್ರಕರ್ತರ ಹಕ್ಕೊತ್ತಾಯಗಳ ನಿರ್ಣಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸರಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಪತ್ರಕರ್ತರಿಗಾಗಿಯೇ ಪ್ರತ್ಯೇಕ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತರಬೇಕು. ಪತ್ರಕರ್ತರ ಕ್ಷೇಮಾಭಿವೃದ್ಧಿಗೆ 100 ಕೋಟಿ ರೂ. ಮೀಸಲಿಡಬೇಕು. ಟೋಲ್‌ಗಳಲ್ಲಿ ಪತ್ರಕರ್ತರ ವಾಹನಗಳಿಗೆ ಉಚಿತ ಪ್ರವೇಶ ನೀಡಬೇಕು. ಪಿಯುಸಿ ಮತ್ತು ಪದವಿ ಓದುತ್ತಿರುವ ಪತ್ರಕರ್ತರ ಮಕ್ಕಳಿಗೆ ಲ್ಯಾಪ್ ಟ್ಯಾಪ್ ನೀಡಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ತಾಲ್ಲೂಕು, ಜಿಲ್ಲೆ ಹಾಗೂ ನಗರ ಮತ್ತು ಮಹಾನಗರಗಳಲ್ಲಿ ಪತ್ರಕರ್ತರಿಗಾಗಿ ರಿಯಾಯಿತಿ ದರದಲ್ಲಿ ನಿವೇಶನ/ಮನೆ ಕೊಡಬೇಕು. ಪತ್ರಕರ್ತರ ಸಮ್ಮೇಳನ ಆಯೋಜನೆಗೆ (ಸಾಹಿತ್ಯ ಸಮ್ಮೇಳನಕ್ಕೆ ನೆರವು ನೀಡುವಂತೆ) ಸರಕಾರದಿಂದ ಕನಿಷ್ಠ 50 ಲಕ್ಷ ರೂ. ನೆರವು ನೀಡಬೇಕು. ಪತ್ರಕರ್ತರ ಭವನಗಳನ್ನು ಕಾರ್ಯ ನಿರತ ಪತ್ರಕರ್ತರ ಸಂಘಟನೆಯಾದ ಕೆಯುಡಬ್ಲೂಜೆ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳೇ ನಿರ್ವಹಣೆ ಮಾಡುವಂತೆ ಸರಕಾರಿ ಆದೇಶ ಹೊರಡಿಸಬೇಕು ಎಂದು ಶಿವಾನಂದ ತಗಡೂರು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News