ಮೋದಿಗೆ ದಮ್ಮು, ತಾಕತ್ತಿದ್ದರೆ ಈಡೇರಿಸಿದ ಭರವಸೆಗಳ ಲೆಕ್ಕವನ್ನು ಮತದಾರರ ಮುಂದಿಡಲಿ: ಸಿದ್ದರಾಮಯ್ಯ ಸವಾಲು
ಬೆಂಗಳೂರು, ಎ.20: ನರೇಂದ್ರ ಮೋದಿ ಮತ್ತು ಅವರ ಪಕ್ಷಕ್ಕೆ ದಮ್ಮು ಮತ್ತು ತಾಕತ್ ಇದ್ದರೆ ಹಿಂದಿನ ಎರಡು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಲಾಗಿದ್ದ ಎಷ್ಟು ಭರವಸೆಗಳನ್ನು ಈಡೇರಿಸಿದ್ದೀರಿ? ಎನ್ನುವ ಲೆಕ್ಕವನ್ನು ಮತದಾರರ ಮುಂದಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬಿಜೆಪಿ ಕಾದು ಕಾದು ಅಳೆದು ತೂಗಿ ಕೊನೆಗೂ ಲೋಕಸಭಾ ಚುನಾವಣೆಯ ಪ್ರಣಾಳಿಕೆ ಪತ್ರವನ್ನು ಬಿಡುಗಡೆ ಮಾಡಿದೆ. ಅದರೊಳಗೇನಿದೆ ಎಂದು ಇಣುಕಿದರೆ ದೊಡ್ಡ ಚೊಂಬು ಎಂದು ವ್ಯಂಗ್ಯವಾಡಿರುವ ಸಿದ್ದರಾಮಯ್ಯ, ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಈ ಜುಮ್ಲಾಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
ನಾನು ನುಡಿದಂತೆ ನಡೆದವನು. ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಮಾಡಿದ ಕೆಲಸದ ಲೆಕ್ಕವನ್ನು ಜನರ ಮುಂದೆ ಇಟ್ಟಿದ್ದೆ. ಈ ಬಾರಿಯೂ ಈ ಕೆಲಸ ಮುಂದುವರಿಸುತ್ತಿದ್ದೇನೆ. ಈ ಕಾರಣಕ್ಕೆ ನರೇಂದ್ರ ಮೋದಿಯವರಲ್ಲಿ ಲೆಕ್ಕ ಕೇಳುವ ನೈತಿಕ ಅಧಿಕಾರ ನನಗಿದೆ ಎಂದು ತಿಳಿದುಕೊಂಡಿದ್ದೇನೆ ಎಂದಿರುವ ಸಿದ್ದರಾಮಯ್ಯ ಪ್ರಧಾನಿ ಮುಂದೆ ಪ್ರಶ್ನೆಗಳ ಸರಣಿಯನ್ನೇ ಮುಂದಿಟ್ಟಿದ್ದಾರೆ.
1. ನರೇಂದ್ರ ಮೋದಿಯವರೇ, ಪ್ರಧಾನಮಂತ್ರಿ "ಸೂರ್ಯ ಘರ್ ಮುಫ್ತ್ ಬಿಜಲಿ" ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಉಚಿತ ವಿದ್ಯುತ್ ಪೂರೈಸುತ್ತೇವೆ ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಏನೆಂದರೆ ಈ ಯೋಜನೆಯನ್ನು ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದು ಸಂಪೂರ್ಣ ಉಚಿತ ಅಲ್ಲ. 1 ಕಿಲೋ ವ್ಯಾಟ್ ಉತ್ಪಾದಿಸುವ ರೂಫ್ ಟಾಪ್ ಸೋಲಾರ್ ಪ್ಯಾನೆಲ್‌ಗೆ 50,000 ರೂ. ವೆಚ್ಚವಾಗುತ್ತದೆ. ಇದರಲ್ಲಿ 40% ಹಣವನ್ನು ಖರೀದಿಸುವ ಕುಟುಂಬವೇ ಭರಿಸಬೇಕಾಗುತ್ತದೆ. ಬ್ಯಾಂಕ್ ಗಳಿಂದ ಸಾಲ ಕೊಡಿಸಲಾಗುತ್ತಿದೆ. ಅಂದರೆ ಸೋಲಾರ್ ಪ್ಯಾನೆಲ್ ಅಳವಡಿಸುವ ವೆಚ್ಚದ ಹೊರೆ ಬಡ ಕುಟುಂಬದ ಮೇಲೆ ಹೊರಿಸಲಾಗಿದೆ. ಇದು ಯಾವ ಸೀಮೆಯ ಉಚಿತ ಹೇಳಿ?
2. ದಿಲ್ಲಿಯ ಮಾದರಿಯಲ್ಲಿಯೇ ಪ್ರತಿಯೊಂದು ರಾಜ್ಯದಲ್ಲಿಯೂ ಏಮ್ಸ್ ( ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ) ಮಾದರಿಯಲ್ಲಿ ವೈದ್ಯಕೀಯ ಕೇಂದ್ರ ಸ್ಥಾಪಿಸುವುದಾಗಿ 2014ರ ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಏನೆಂದರೆ ದೇಶದಲ್ಲಿ ಇರುವುದೇ 19 ಏಮ್ಸ್ ಗಳು. ಈ ವರೆಗೆ ಕರ್ನಾಟಕದಲ್ಲಿ ಒಂದೇ ಒಂದು ಏಮ್ಸ್ ಸ್ಥಾಪನೆಯಾಗಿಲ್ಲ. ಹೊಸ ಏಮ್ಸ್ ಗಳು ಕೂಡಾ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರಿದೆ. ಸ್ವತಃ ಮೋದಿ ದರ್ಬಾಂಗ್, ಮದುರೈಗಳಲ್ಲಿ ಏಮ್ಸ್ ಸ್ಥಾಪನೆಯಾಗಿವೆ ಎಂದರು. ಆದರೆ ಮಾಧ್ಯಮದ ವರದಿಗಳು ಇದು ಸುಳ್ಳು ಎಂದು ಹೇಳುತ್ತಿವೆ.
3. 70 ವರ್ಷ ಮೇಲ್ಪಟ್ಟವರಿಗೂ ಆಯುಷ್ಮಾನ್ ಸೇವೆ ವಿಸ್ತರಿಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಆಯುಷ್ಮಾನ್ ಯೋಜನೆಯ ಆರೋಗ್ಯ ವಿಮೆಯಲ್ಲಿ ಅಕ್ರಮ ನಡೆದಿರುವುದನ್ನು ಸಿಎಜಿಯೇ ವರದಿ ಮಾಡಿದೆ. 8.2 ಲಕ್ಷ ರೋಗಿಗಳು ಆಧಾರ್, ಬಯೋಮೆಟ್ರಿಕ್ ದಾಖಲೆಗಳಿಲ್ಲದೆ ಎರಡಕ್ಕಿಂತ ಹೆಚ್ಚು ಬಾರಿ ಚಿಕಿತ್ಸೆ ಪಡೆದಿದ್ದನ್ನು ವರದಿ ಗುರುತಿಸಿತ್ತು. ನಕಲಿ ವಿಮೆಗಳಿಗೆ ರೂ.1,697 ಕೋಟಿ ವರೆಗೆ ಸರ್ಕಾರದಿಂದ ಹಣ ನೀಡಲಾಗಿದೆ!
4. ಮೂರು ಕೋಟಿ ಲಖ್ ಪತಿ ದೀದಿಗಳನ್ನು ಮಾಡಲಾಗುವುದು. ಈಗಾಗಲೇ 1 ಕೋಟಿ ಮಹಿಳೆಯರನ್ನು ಲಖ್ ಪತಿ ದೀದಿಗಳನ್ನಾಗಿ ಮಾಡಿದ್ದು, ಮೂರು ಕೋಟಿ ಗ್ರಾಮೀಣ ಮಹಿಳೆಯರನ್ನು ಲಖ್ ಪತಿ ದೀದಿಗಳನ್ನಾಗಿ ಸಬಲೀಕರಿಸಲಾಗುವುದು ಎನ್ನುವುದು ಪ್ರಣಾಳಿಕೆಯ ಇನ್ನೊಂದು ಭರವಸೆ.
ವಾಸ್ತವ ಸಂಗತಿ ಎಂದರೆ ಸ್ವಸಹಾಯ ಗುಂಪುಗಳಲ್ಲಿರುವ ಮಹಿಳೆಯರಿಗೆ ನೀಡಲಾಗಿದೆ ಎಂದು ಹೇಳಲಾದ ಈ ನೆರವನ್ನು ಪಡೆದ ಒಬ್ಬರೇ ಒಬ್ಬ ಕರ್ನಾಟಕದ ಮಹಿಳೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ.
5. ನಮ್ಮ ಮಹಿಳೆಯರು ಕ್ರೀಡೆಯಲ್ಲಿ ದೇಶಕ್ಕೆ ಗೌರವ ತಂದಿದ್ದಾರೆ. ಮಹಿಳಾ ಕೇಂದ್ರಿತ ಕ್ರೀಡಾ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಕ್ರೀಡೆಯಲ್ಲಿ ಮಹಿಳೆಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಕುಸ್ತಿ ಫೆಡರೇಷನ್ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಲೈಂಗಿಕ ಶೋಷಣೆಯ ಆರೋಪ ಮಾಡಿದಾಗ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವರ್ಷಗಳ ಶ್ರಮದ ಫಲವಾದ ಪದಕವನ್ನು ಗಂಗಾ ನದಿಗೆ ಅರ್ಪಿಸಲು ಮುಂದಾಗುವಷ್ಟು ನೊಂದಿದ್ದ ಯುವತಿಯರಿಗೆ ಸರ್ಕಾರ ಸಾಂತ್ವನ ಹೇಳಲಿಲ್ಲ.
6. ಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ವಾರ್ಷಿಕ ರೂ.6,000 ಸಹಾಯಧನವನ್ನು ನೀಡುತ್ತಿದ್ದು, ರೈತರಿಗೆ ಆರ್ಥಿಕ ಬೆಂಬಲ ನೀಡುವುದಕ್ಕೆ ಬದ್ಧರಾಗಿದ್ದೇವೆ ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಕಳೆದ ಐದು ವರ್ಷಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ 11 ಕೋಟಿ ರೈತರಿಗೆ ಸಹಾಯ ಧನ ನೀಡಲಾಗಿದೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ. ಆದರೆ, ಕೃಷಿ ಸಚಿವರೇ ರಾಜ್ಯಸಭೆಯಲ್ಲಿ 4 ಲಕ್ಷ ಅನರ್ಹ ರೈತರಿಗೆ ರೂ. 3,000 ಕೋಟಿ ಸಹಾಯ ಧನ ವಿತರಣೆಯಾಗಿದ್ದು, ಮರಳಿ ವಸೂಲಿ ಮಾಡಲಾಗುತ್ತಿದೆ ಎಂದು ಹೇಳಿದ್ದರು. ದೇಶದಲ್ಲಿ 55% ಭೂ ರಹಿತ ರೈತರಿದ್ದು, ಅವರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ ಎನ್ನುವುದು ಮತ್ತೊಂದು ದುರಂತ!
7. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ತಂತ್ರಜ್ಞಾನದ ಬಳಕೆಯ ಮೂಲಕ ಮತ್ತಷ್ಟು ಬಲಪಡಿಸಿ ನಿಖರ ಪರಿಶೀಲನೆ ನಡೆಸಿ ಪರಿಹಾರದ ಹಣವನ್ನು ವೇಗವಾಗಿ ಪಾವತಿಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಹಿಂದಿನ ಅವಧಿಯಲ್ಲಿ 5 ವರ್ಷಗಳಲ್ಲಿ ಈ ಯೋಜನೆಯಿಂದ ರೈತರಿಗೆ ಆದ ಲಾಭಕ್ಕಿಂತ ವಿಮಾ ಕಂಪನಿಗಳಿಗೆ ಆದ ಲಾಭವೇ ಹೆಚ್ಚು. ಕೃಷಿ ಸಚಿವ ತೋಮರ್ ಅವರು ರಾಜ್ಯಸಭೆಯಲ್ಲಿ ಉತ್ತರಿಸಿರುವಂತೆ, 2016-17ರಿಂದ 2021-22ರ ಅವಧಿಯಲ್ಲಿ ರೈತರು ರೂ. 1.59 ಲಕ್ಷ ಕೋಟಿ ಪ್ರೀಮಿಯಂ ಹಣ ಪಾವತಿಸಿದ್ದರು. ಈ ಪೈಕಿ ವಿಮಾ ಕಂಪನಿಗಳು ರೂ. 1.19 ಲಕ್ಷ ಕೋಟಿ ಹಣವನ್ನು ರೈತರಿಗೆ ಪಾವತಿಸಿದ್ದವು. ಅಂದರೆ ರೂ.40,000 ಕೋಟಿಗಳಷ್ಟು ಲಾಭಗಳಿಸಿದ್ದವು ಎಂದು ಅಂಕಿ ಅಂಶ ಹಂಚಿಕೊಂಡಿದ್ದರು.
8. ರಾಷ್ಟ್ರೀಯ ಕನಿಷ್ಠ ವೇತನವನ್ನು ಕಾಲದಿಂದ ಕಾಲಕ್ಕೆ ಪರಿಷ್ಕರಣೆ ಮಾಡಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಹತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ಸರ್ಕಾರ ಕನಿಷ್ಠ ವೇತನವನ್ನು ಹೆಚ್ಚಿಸಿದ್ದು ಕೇವಲ 41 ರೂಪಾಯಿಗಳು ಮಾತ್ರ. 2004ರಿಂದ 2014ರ ಅವಧಿಯಲ್ಲಿ ಯುಪಿಎ ಸರ್ಕಾರ ಕನಿಷ್ಠ ವೇತನದ ಮಿತಿಯನ್ನು ರೂ.66 ರಿಂದ ರೂ.137ಕ್ಕೆ ಹೆಚ್ಚಿಸಿತ್ತು. ಬಿಜೆಪಿ ಈ ಮಿತಿಯನ್ನು 2017ರಲ್ಲಿ ರೂ.176 ಕ್ಕೆ ಏರಿಸಿತು. ಮುಂದುವರೆದು 2019ರಲ್ಲಿ ರೂ. 178ಕ್ಕೆ ಹೆಚ್ಚಿಸಿತು. ಆ ನಂತರದ ಐದು ವರ್ಷಗಳಲ್ಲಿ ಒಂದೇ ಒಂದು ರೂಪಾಯಿಯನ್ನೂ ಏರಿಕೆ ಮಾಡಲಿಲ್ಲ.
9. ಭಯೋತ್ಪಾದನೆಯನ್ನು ಸಹಿಸುವುದಿಲ್ಲ. 2016ರ ಸರ್ಜಿಕಲ್ ದಾಳಿ ಮತ್ತು 2019ರ ಉಗ್ರರ ಮೇಲಿನ ದಾಳಿ ಭಯೋತ್ಪಾದನೆ ನಿಯಂತ್ರಣದ ನಿಟ್ಟಿನಲ್ಲಿ ನಡೆದ ಪ್ರಯತ್ನಗಳಿಗೆ ಉದಾಹರಣೆಗಳು. ಎಲ್ಲ ರೀತಿ ಉಗ್ರವಾದದಿಂದ ಭಾರತವನ್ನು ರಕ್ಷಿಸುವುದಕ್ಕೆ ನಾವು ಬದ್ಧರಾಗಿದ್ದೇವೆ ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಕಾಶ್ಮೀರದ ಉರಿ ಕಣಿವೆಯಲ್ಲಿ 2016ರಲ್ಲಿ ನಡೆದ ದಾಳಿಯ ರೀತಿಯ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾದವು. 2019ರಲ್ಲಿ ನಡೆದ ಬಾಲಾಕೋಟ್ ಪ್ರಕರಣ ತೀವ್ರವಾದ ವಿವಾದಕ್ಕೆ ಕಾರಣವಾಯಿತು. ಈ ದಾಳಿಗಳ ಹಿಂದೆ ರಾಜಕೀಯ ಉದ್ದೇಶಗಳು ಕೆಲಸ ಮಾಡಿರುವುದು ವಿವಾದಕ್ಕೆ ಕಾರಣವಾಯಿತು. ಪುಲ್ವಾಮಾ ದಾಳಿ ಕುರಿತು ಸತ್ಯಪಾಲ್ ಮಲಿಕ್ ನೀಡಿದ ಹೇಳಿಕೆಯು ಕೇಂದ್ರ ಸರ್ಕಾರದ ಶಂಕಾಸ್ಪದ ನಡೆಗೆ ಕನ್ನಡಿ ಹಿಡಿಯಿತು. ಇದಲ್ಲದೆ, 2017ರಲ್ಲಿ ಕಾಶ್ಮೀರದಲ್ಲಿ 370ನೇ ವಿಧಿ ಹಿಂಪಡೆದ ನಂತರ ಉಗ್ರರ ಚಟುವಟಿಕೆಗಳು ಕಡಿಮೆಯಾಯಿತು ಎಂದು ಸರ್ಕಾರ ಹೇಳಿಕೊಂಡರೂ ಉಗ್ರರ ದಾಳಿಗಳು ಮುಂದುವರಿದಿವೆ.
10. ಸಮಾಜಕ್ಕೆ, ವಿಶೇಷವಾಗಿ ಯುವಜನರಿಗೆ ಕಂಟಕವಾಗಿರುವ ಮಾದಕ ವಸ್ತುಗಳನ್ನು ನಿರ್ನಾಮ ಮಾಡುವ ಗುರಿ ಹೊಂದಿದ್ದು, ಸೂಕ್ತ ತಾಂತ್ರಿಕ, ಕಾನೂನಾತ್ಮಕ ಹಾಗೂ ಗುಪ್ತಚರ ಕಾರ್ಯಕ್ರಮಗಳನ್ನು ರೂಪಿಸಲಾಗುವುದು. ಮಾದಕ ವಸ್ತುಗಳ ಜಾಲವನ್ನು ಗುರುತಿಸಲು ಉಪಗ್ರಹ, ಡ್ರೋನ್ ಬಳಸಲಾಗುವುದು ಎನ್ನುವುದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ 2021ರ ಸೆಪ್ಟೆಂಬರ್‌ನಲ್ಲಿ ಅದಾನಿ ಮಾಲೀಕತ್ವದ ಮುಂದ್ರಾ ಬಂದರಿನಲ್ಲಿ ರೂ. 21 ಸಾವಿರ ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಯಿತು. 2022ರ ಜುಲೈನಲ್ಲಿ 75 ಕೆಜಿ, 2024ರ ಫೆಬ್ರವರಿಯಲ್ಲಿ 3,300 ಕೆಜಿ ಮಾದಕವಸ್ತು ವಶಪಡಿಸಿಕೊಳ್ಳಲಾಯಿತು. ಇಷ್ಟು ಪ್ರಮಾಣದಲ್ಲಿ ಮಾದಕ ವಸ್ತು ದೇಶದೊಳಗೆ ಎಲ್ಲಿಂದ ಬರುತ್ತಿದೆ? ಇದನ್ನು ತಡೆಯಲು ಯಾಕಾಗುತ್ತಿಲ್ಲ?
11. ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪನೆ ಮಾಡಲಾಗುವುದು. ಅಲ್ಲಿನ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆ ತೆರವು ಮಾಡಿ, ಈಶಾನ್ಯ ರಾಜ್ಯಗಳಲ್ಲಿರುವ ಅಂತರರಾಜ್ಯ ಸಂಘರ್ಷಗಳನ್ನು ಪರಿಹರಿಸುವುದಕ್ಕೆ ಸತತ ಪ್ರಯತ್ನ ಮಾಡುವೆವು ಎನ್ನುವದು ಪ್ರಣಾಳಿಕೆಯಲ್ಲಿನ ಭರವಸೆ.
ವಾಸ್ತವ ಸಂಗತಿ ಎಂದರೆ ಮಣಿಪುರದಲ್ಲಿ 8 ತಿಂಗಳ ಕಾಲ ಕುಕಿ ಮತ್ತು ಮೈತೇಯಿ ಸಮುದಾಯಗಳ ನಡುವೆ ಸಂಘರ್ಷ ನಡೆದು 175ಕ್ಕೂ ಹೆಚ್ಚು ಮಂದಿ ಹತ್ಯೆಗೀಡಾದರು, 60 ಸಾವಿರ ಮಂದಿ ನಿರಾಶ್ರಿತರಾದರು. ಈ ಸಂದರ್ಭದಲ್ಲಿ ಜಗತ್ತಿನೆಲ್ಲೆಡೆಯಿಂದ ತೀವ್ರವಾದ ಸ್ಪಂದನೆ ವ್ಯಕ್ತವಾದರೂ, ದೇಶದ ಪ್ರಧಾನಿ ಮಣಿಪುರದ ಬಗ್ಗೆ ಒಂದು ನಿಮಿಷವೂ ಮಾತನಾಡಲಿಲ್ಲ. ಅತ್ತ ಕಡೆ ಮುಖ ಹಾಕಲಿಲ್ಲ.