ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಹುಸಿ ಬಾಂಬ್ ಬೆದರಿಕೆ: ಪೊಲೀಸರ ಸ್ಪಷ್ಟನೆ
ಬೆಂಗಳೂರು: ನಗರದ ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಇ-ಮೇಲ್ ಮುಖಾಂತರ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಪೊಲೀಸರ ಪರಿಶೀಲನೆಯಲ್ಲಿ ಇದೊಂದು ಹುಸಿ ಬಾಂಬ್ ಸಂದೇಶ ಎಂಬುದಾಗಿ ಗೊತ್ತಾಗಿದೆ.
ಈ ಬಾಂಬ್ ಬೆದರಿಕೆ ಸಂದೇಶದಿಂದಾಗಿ ಶುಕ್ರವಾರ ಮ್ಯೂಸಿಯಂನಲ್ಲಿ ಕೆಲ ಗಂಟೆಗಳ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ನಿಷೇಧಿತ ಉಗ್ರಸಂಘಟನೆ ಹೆಸರನ್ನು ಉಲ್ಲೇಖಿಸಿ ದುಷ್ಕರ್ಮಿಗಳು, ‘ಮ್ಯೂಸಿಯಂ ಒಳಗೆ ಹಲವು ಸ್ಪೋಟಕಗಳನ್ನು ಗೌಪ್ಯ ಸ್ಥಳದಲ್ಲಿ ಇಡಲಾಗಿದೆ. ಈ ಬಾಂಬ್ ಒಮ್ಮೆಲೆ ಸ್ಪೋಟವಾಗಲಿದೆ. ನಮ್ಮ ಗ್ರೂಪ್ ಹೆಸರನ್ನು ಮಾಧ್ಯಮದವರಿಗೆ ನೀಡಿ’ ಎಂದು ಬೆದರಿಕೆ ಮೇಲ್ ಸಂದೇಶ ಕಳುಹಿಸಿದ್ದಾರೆ. ಇದರಿಂದ ಭೀತಿಗೊಂಡ ಮ್ಯೂಸಿಯಂ ಆಡಳಿತ ಮಂಡಳಿ ಕೂಡಲೇ ನಗರದ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಮ್ಯೂಸಿಯಂನ ಸುತ್ತಮುತ್ತಲೂ ಪೊಲೀಸ್ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ವೇಳೆ ಯಾವುದೇ ಸ್ಪೋಟಕ ವಸ್ತುಗಳು ಕಂಡುಬಂದಿಲ್ಲ. ಬಳಿಕ ಇದೊಂದು ಹುಸಿ ಬಾಂಬ್ ಸಂದೇಶ ಎಂದು ತಿಳಿದುಬಂದಿದೆ. ಅಲ್ಲದೇ, ಈ ರೀತಿಯ ಸಂದೇಶ ರವಾನಿಸಿರುವ ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ