ಎಸ್.ಎಂ.ಕೃಷ್ಣ ಗುಣಮುಖ ; ವಿಶ್ರಾಂತಿ ಪಡೆಯುವಂತೆ ವೈದ್ಯರ ಸಲಹೆ
ಬೆಂಗಳೂರು: ಶ್ವಾಸಕೋಶ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರ ಆರೋಗ್ಯ ಸುಧಾರಿಸಿದ್ದು ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮರಳಿ ಮನೆಗೆ ಆಗಮಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ.
ಎಸ್.ಎಂ.ಕೃಷ್ಣ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದ್ದು ಶ್ವಾಸಕೋಶದ ಸೊಂಕು ನಿವಾರಣೆ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಭಗವಂತನ ಕೃಪೆ ಮತ್ತು ವೈದ್ಯರ ಪರಿಶ್ರಮದಿಂದ ಎಸ್.ಎಂ.ಕೃಷ್ಣ ಗುಣಮುಖರಾಗಿದ್ದಾರೆ. ಆದರೆ ಎರಡು ವಾರಗಳ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದು ಯಾವುದೆ ಸಾರ್ವಜನಿಕ ಭೇಟಿ ಮತ್ತು ಕಾರ್ಯಕ್ರಮಗಳಿಗೆ ಪಾಲ್ಗೊಳ್ಳದಂತೆ ವೈದ್ಯರು ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಹಿತೈಷಿಗಳು, ಅಭಿಮಾನಿಗಳು ಕೆಲವು ದಿನಗಳ ಕಾಲ ಅವರನ್ನು ಭೇಟಿ ಮಾಡದಂತೆ ಕುಟುಂಬ ವರ್ಗದವರಿಗೆ ವೈದ್ಯರು ತಿಳಿಸಿದ್ದಾರೆ. ಹೀಗಾಗಿ ಯಾರೂ ಸಹ ಅನ್ಯತಃ ಭಾವಿಸದೇ ಹಿರಿಯ ಮುತ್ಸುದ್ದಿ ಎಸ್.ಎಂ.ಕೃಷ್ಣ ಅವರು ವಿಶ್ರಾಂತಿ ಪಡೆಯಲು ಸಹಕರಿಸಬೇಕಾಗಿದೆ ಹಾಗೂ ಸಂಪೂರ್ಣವಾಗಿ ಗುಣಮುಖರಾದ ನಂತರ ಅವರೇ ಎಲ್ಲರನ್ನೂ ಭೇಟಿ ಮಾಡಲಿದ್ದಾರೆ ಎಂದು ದಿನೇಶ್ ಗೂಳಿಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.