ದೇವನಹಳ್ಳಿ‌ ವಿಮಾನ ನಿಲ್ದಾಣದ ಬಳಿ ‘ವಿಜ್ಞಾನ ನಗರಕ್ಕೆ ಜಾಗ’: ಸಚಿವ ಬೋಸರಾಜು

Update: 2024-03-06 15:43 GMT

ಬೆಂಗಳೂರು: ದಕ್ಷಿಣ ಭಾರತದ ಮೊದಲ ವಿಜ್ಞಾನ ನಗರಕ್ಕೆ ಅಗತ್ಯವಿದ್ದ 25 ಏಕರೆ ಜಾಗವನ್ನು ದೇವನಹಳ್ಳಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಆದಿನಾರಾಯಣ ಹೊಸಹಳ್ಳಿ 2ನೇ ಹಂತದ ಕೈಗಾರಿಕಾ ಪ್ರದೇಶದಲ್ಲಿ ಮಂಜೂರು ಮಾಡಲಾಗಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ತಿಳಿಸಿದ್ದಾರೆ.

ಬುಧವಾರ ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ದೇಶದಲ್ಲಿ ಪ್ರಸ್ತುತ 3 ವಿಜ್ಞಾನ ನಗರಗಳಿವೆ. ಅದರಲ್ಲಿ ಪ್ರಮುಖವಾಗಿರುವುದು ಕೋಲ್ಕತ್ತಾ ನಗರದಲ್ಲಿದೆ. ದಕ್ಷಿಣ ಭಾರತದಲ್ಲಿ ಬೆಂಗಳೂರು ಪ್ರಮುಖ ನಗರವಾಗಿದ್ದು, ಭಾರತೀಯ ವಿಜ್ಞಾನ ಮಂದಿರ, ಜೆ.ಎನ್.ಸಿ.ಎ.ಎಸ್.ಆರ್, ರಾಮನ್ ಸಂಶೋಧನಾ ಸಂಸ್ಥೆ, 400ಕ್ಕೂ ಅಧಿಕ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ಐಟಿ-ಬಿಟಿ ಪಾರ್ಕ್ ಗಳಿವೆ ಎಂದು ತಿಳಿಸಿದ್ದಾರೆ.

ವಿಜ್ಞಾನ ನಗರ ಸ್ಥಾಪನೆಗೆ ಬೆಂಗಳೂರು ಸೂಕ್ತ ಎನ್ನುವ ಪ್ರಸ್ತಾವನೆಯನ್ನು 2023ರ ಆ.3ರಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಜಿ.ಕಿಶನ್ ರೆಡ್ಡಿ ಅವರನ್ನು ಭೇಟಿ ಮಾಡಿ ಸಲ್ಲಿಸಲಾಗಿತ್ತು ಎಂದು ಬೋಸರಾಜು ಹೇಳಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಕೇಂದ್ರ ಸಚಿವರು, ವಿಜ್ಞಾನ ನಗರ ಸ್ಥಾಪನೆಗೆ ಮೂಲಭೂತವಾಗಿ 25 ಏಕರೆ ಜಾಗದ ಅಗತ್ಯತೆಯನ್ನು ತಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೆ ಸಾಲಿನ ಆಯವ್ಯಯದಲ್ಲಿ ಈ ಬಗ್ಗೆ ಘೋಷಣೆ ಮಾಡಿ ಅಗತ್ಯ ಭೂಮಿಯನ್ನು ಒದಗಿಸುವುದಾಗಿ ಭರವಸೆಯನ್ನು ನೀಡಿದ್ದರು ಎಂದು ಅವರು ತಿಳಿಸಿದ್ದಾರೆ.

ಇಲಾಖೆಯ ಕಾರ್ಯದರ್ಶಿಗಳು ಹಾಗೂ ಅಧಿಕಾರಿಗಳ ಪ್ರಯತ್ನದಿಂದಾಗಿ ದೇವನಹಳ್ಳಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜಾಗವನ್ನು ಗುರುತಿಸಲಾಗಿದೆ. ಜಾಗದ ಲಭ್ಯತೆಯ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ದಕ್ಷಿಣ ಭಾರತದಲ್ಲೆ ಮೊದಲ ಹಾಗೂ ಅತ್ಯುತ್ತಮ ವಿಜ್ಞಾನ ನಗರ ಸ್ಥಾಪನೆ ಆಗಿಲಿದೆ ಎಂದು ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News