ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಶೀಘ್ರ ಚಾಲನೆ: ಗೃಹ ಸಚಿವ ಡಾ.ಪರಮೇಶ್ವರ

Update: 2024-06-09 10:14 GMT

ಬೆಂಗಳೂರು, ಜೂನ್ 9: ಪೊಲೀಸರ ಅಂತರ್ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.

ಬೆಂಗಳೂರಿನ ಸದಾಶಿವ ನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಕಾರಣ ಕಳೆದ ಎರಡು ತಿಂಗಳು ಸರಕಾರದ ಯಾವುದೇ ರೀತಿಯ ಕೆಲಸ ಕಾರ್ಯಗಳು ಸಾಧ್ಯವಾಗಿಲ್ಲ. ಈಗ ಪೊಲೀಸರ ಅಂತರ ಜಿಲ್ಲಾ ವರ್ಗಾವಣೆಗೆ ಚಾಲನೆ ನೀಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಹಿರಿಯರನ್ನು ಪರಿಗಣಿಸುತ್ತಿಲ್ಲ ಎಂಬ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಏನು ಇಲ್ಲ. ಸಂದರ್ಭ ಅನುಸಾರ ಅಂತಹ ಮಾತುಗಳನ್ನು ಹೇಳಿರುತ್ತೀವಿ. ನಮ್ಮಲ್ಲಿ ಒಳ ಜಗಳಗಳು ಆಗಿಲ್ಲ. ತುಮಕೂರಿನ ಶಾಸಕ ಸುರೇಶ್ಗೌಡ ನಮ್ಮ ಪಕ್ಷದಲ್ಲಿನ ಒಳ ಜಗಳವನ್ನು ಎಲ್ಲಿ ನೋಡಿದ್ದಾರೋ, ಎಲ್ಲಿ ಆಗಿದೆಯೋ ಅವರಿಗೆ ಗೊತ್ತು. ಯಾವುದಾದರು ವಿಚಾರಗಳು ಬಂದಾಗ ಒಬ್ಬೊಬ್ಬರು ಅಭಿಪ್ರಾಯಗಳನ್ನು ಹಂಚಿಕೊಂಡಿರುವುದು ಸಹಜ. ಅಂತಹ ಸಂದರ್ಭದಲ್ಲಿ ಬಿಟ್ಟರೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಒಳ ಜಗಳಗಳಿಲ್ಲ ಎಂದು ಸ್ಪಷ್ಟಪಡಿಸಿದರು.

ಸರಕಾರಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಹಂಚಿಕೊಳ್ಳಲು ಕ್ಯಾಬಿನೆಟ್ ಇದೆ. ಪಕ್ಷಕ್ಕೆ ಸಂಬಂಧಪಟ್ಟ ತೀರ್ಮಾನಗಳನ್ನು ಕೈಗೊಳ್ಳಲು ಕೋರ್ ಕಮಿಟಿ ಸಭೆ ಮಾಡಬಹುದು. ಇದಕ್ಕೆ ಅವಕಾಶಗಳನ್ನು ಪಕ್ಷದ ಅಧ್ಯಕ್ಷರು ಕೊಡಬೇಕಾಗುತ್ತದೆ. ಸಂದರ್ಭ ಬಂದಾಗ ಅವರು ಮಾಡುತ್ತಾರೆ ಎಂದರು.

ಪ್ರಬಲ ಸಚಿವರ ಕ್ಷೇತ್ರಗಳಲ್ಲಿ ನಿರೀಕ್ಷಿತ ಫಲಿತಾಂಶ ಬಾರದಿರುವುದಕ್ಕೆ ಸಮಿತಿ ರಚನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ಜಿಲ್ಲೆ ಸೇರಿದಂತೆ 17 ಜಿಲ್ಲೆಗಳಲ್ಲಿ ಸೋತಿದ್ದೇವೆ. ಈ ಬಗ್ಗೆ ಪರಿಶೀಲನೆ ಮಾಡುವ, ಆತ್ಮಾವಲೋಕನಾ ಮಾಡಿಕೊಳ್ಳುವ ಅಗತ್ಯವಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ನಾವೆಲ್ಲ ಅದನ್ನು ಒಪ್ಪುತ್ತೇವೆ. ಮುಂದೆ ನಮಗೆ ಏನು ಸಲಹೆ ಮಾಡುತ್ತಾರೆ. ಅದನ್ನು ಪಾಲನೆ ಮಾಡುವ ಪದ್ಧತಿ ನಮ್ಮ ಪಕ್ಷದಲ್ಲಿದೆ ಎಂದು ಹೇಳಿದರು.

ವಾಲ್ಮೀಕಿ ನಿಗಮದಲ್ಲಿ ನಡೆದ ಅವ್ಯವಹಾರದಲ್ಲಿ ಸರಕಾರ ಭಾಗಿಯಾಗಿದೆ, ಸಿಎಂ ಸಿದ್ದರಾಮಯ್ಯ, ನಿಗಮದ ಅಧ್ಯಕ್ಷ ದದ್ದಲ್ ಬಸನಗೌಡ ರಾಜೀನಾಮೆ ನೀಡಬೇಕು ಎಂದು ಬಿಜೆಪಿಯವರ ಒತ್ತಾಯದ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಹೇಳಿದ್ದಕ್ಕೆಲ್ಲ ಎಸ್. ಅನ್ನೋದಿಕ್ಕೆ ಆಗಲ್ಲ. ತನಿಖೆಯನ್ನು ಪ್ರಾರಂಭ ಮಾಡಿದ್ದೇವೆ. ಬ್ಯಾಂಕ್ ನಲ್ಲಿ ವಂಚನೆ ಆಗಿದೆ ಅಂತ ಸಿಬಿಐನವರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಆಗಲಿ. ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಎಸ್ ಐಟಿಗೆ ಸೂಚಿಸಿದ್ದೇವೆ. ತನಿಖೆ ವಿಚಾರದಲ್ಲಿ ಅಧಿಕಾರಿಗಳಿಗೆ ಒತ್ತಾಯ ಮಾಡಲು ಆಗುವುದಿಲ್ಲ. ಅವರ ತನಿಖೆಗೆ ಸಮಯ ಕೊಡಬೇಕಾಗುತ್ತದೆ. ಏನೆಲ್ಲ ಹೇಳಿಕೆಗಳು ಬರುತ್ತವೆ ಪರಿಶೀಲಿಸುತ್ತಾರೆ. ಸಿಬಿಐನವರು ಅಧಿಕೃತವಾಗಿ ಯಾವುದೇ ಪತ್ರ ಬರೆದಿಲ್ಲ ಎಂದು ತಿಳಿಸಿದರು.

ನರೇಂದ್ರ ಮೋದಿ ಅವರಿಗೆ ಅಭಿನಂದನೆ:

ದೇಶದಲ್ಲಿ ಮೂರನೇ ಬಾರಿಗೆ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜನ ಸಮುದಾಯ ಅನೇಕ ತೊಂದರೆಗಳಿಗೆ ಒಳಗಾಗಿದ್ದಾರೆ. ಕೇಂದ್ರ ಸರ್ಕಾರ ಅನೇಕ ನೀತಿಗಳನ್ನು ಮಾಡುವ ಸಂದರ್ಭದಲ್ಲಿ ಜನರ ದೃಷ್ಟಿಯಿಂದ ರೂಪಿಸಬೇಕು ಎಂಬುದು ಪ್ರಜಾಪ್ರಭುತ್ವದಲ್ಲಿದೆ. ಜನರಿಗೆ ವಿರುದ್ಧವಾದ ತೀರ್ಮಾನಗಳನ್ನು, ಕಾನೂನುಗಳನ್ನು ಕಳೆದ ಹತ್ತು ವರ್ಷದಲ್ಲಿ ಮಾಡಿದ್ದಾರೆ. ಏನೆಲ್ಲ ತಪ್ಪುಗಳಾಗಿದೆಯೋ ಅದೆಲ್ಲವನ್ನು ಸರಿಪಡಿಸಿಕೊಂಡು ಜನಪರ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.

ರಾಜ್ಯಕ್ಕೆ ಹೆಚ್ಚು ಸಚಿವ ಸ್ಥಾನಗಳನ್ನು ಸಿಗಲಿ ಎಂದು ಆಪೇಕ್ಷೆ ಪಡುತ್ತೇನೆ. ಇಲ್ಲಿವರೆಗೂ ನೇಮಕವಾದ ರಾಜ್ಯವನ್ನು ಪ್ರತಿನಿಧಿಸಿದ ಕೇಂದ್ರ ಸಚಿವರು ರಾಜ್ಯದ ಹಿತ ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹೋರಾಟ ಮಾಡುವಲ್ಲಿ ನಿರ್ಮಲಾ ಸೀತಾರಾಮನ್ ಸೇರಿದಂತೆ ಇನ್ನುಳಿದ ಸಚಿವರು ವಿಫಲರಾಗಿದ್ದಾರೆ. ನಮಗೆ ಉಪಯೋಗವಾಗುವಂತಹ ಖಾತೆಗಳನ್ನು ನೀಡಲಿ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News