ಬ್ಯಾರಿ ಸಮುದಾಯದ ಸೌಹಾರ್ದತೆ ನಾಡಿಗೆ ಮಾದರಿಯಾಗಲಿ: ಸಚಿವ ಮಧು ಬಂಗಾರಪ್ಪ

Update: 2024-06-10 04:26 GMT

ಬೆಂಗಳೂರು: ಶಿಕ್ಷಣ ಮತ್ತು ಸಾಂಸ್ಕೃತಿಕವಾಗಿ ಬ್ಯಾರಿ ಭಾಷಿಕ ಸಮುದಾಯವು ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡುತ್ತಿದ್ದು, ಎಲ್ಲರೊಂದಿಗೆ ಜೊತೆಗೂಡಿ ಸೌಹಾರ್ದತೆಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಬ್ಯಾರಿ ಸಮುದಾಯದ ಸೌಹಾರ್ದತೆಯು ಜಗತ್ತಿಗೆ ಪಸರಿಸಲಿ ಮತ್ತು ನಾಡಿಗೆ ಮಾದರಿಯಾಗಲಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ಎಚ್‌ಬಿಆರ್ ಲೇಔಟ್‌ನಲ್ಲಿರುವ ಬ್ಯಾರಿ ಸೌಹಾರ್ದ ಭವನದಲ್ಲಿ ರವಿವಾರ ನಡೆದ 2023-24ನೆ ಶೈಕ್ಷಣಿಕ ಸಾಲಿನ ಬ್ಯಾರಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಬ್ಯಾರಿ-ಬ್ಯಾರ್ದಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಎಲ್ಲಾ ಭಾಷೆಯ, ಧರ್ಮೀಯರ ಜೊತೆ ಸ್ನೇಹದಿಂದ ಇರುವ ಹಾಗೂ ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಸೌಹಾರ್ದಯುತ ಗುಣವು ಬ್ಯಾರಿ ಸಮುದಾಯಕ್ಕೆ ಇದೆ. ಅದಲ್ಲದೆ ಶಿಕ್ಷಣಕ್ಕೆ ಒತ್ತು ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳ ಸಮೂಹವನ್ನೇ ಸೃಷ್ಟಿ ಮಾಡುತ್ತಿರುವ ಕಾರ್ಯವೂ ಹೆಮ್ಮೆ ತಂದಿದೆ ಎಂದು ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.

ಒಬ್ಬ ವ್ಯಕ್ತಿಯು ದೇಶದ ಒಳ್ಳೆಯ ಪ್ರಜೆಯಾಗಿ ರೂಪಗೊಳ್ಳಲು ಶಿಕ್ಷಣವೇ ಮೂಲವಾಗಿದೆ. ಹೀಗಾಗಿ ನಾನು ಎಲ್ಲಿ ಹೋದರೂ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಶಿಕ್ಷಣವು ದೇಶದ ಆಸ್ತಿಯೂ ಆಗಿದೆ. ಮುಸ್ಲಿಮ್ ಸಮುದಾಯ ಇತ್ತೀಚಿನ ಕೆಲವು ವರ್ಷಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಇದು ನಾಡಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.

ಎಲ್ಲರೂ ಶಿಕ್ಷಣ ಪಡೆಯಬೇಕೆಂಬುದು ಸರಕಾರದ ಆಶಯವಾಗಿದೆ. ಹಾಗಾಗಿ ರಾಜ್ಯ ಕಾಂಗ್ರೆಸ್ ಸರಕಾರವು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು, ಹಲವು ಕಾರ್ಯಕ್ರಮಗಳನ್ನು ಒಂದೇ ವರ್ಷದಲ್ಲಿ ಜಾರಿಗೆ ತಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ರೀತಿಯಲ್ಲಿ ಸಾಧನೆಗೈಯುತ್ತಿರುವ ಮುಸ್ಲಿಮ್ ಸಮುದಾಯವು ಸರಕಾರದ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಸದುಪಯೋಗಪಡಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್.ಎ.ಹಾರೀಸ್ ಮಾತನಾಡಿ ಹಲವು ವರ್ಷಗಳಿಂದ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳು ನಡೆಯತ್ತಿವೆ. ಈ ಸಮುದಾಯ ಎಲ್ಲರನ್ನು ಒಗ್ಗೂಡಿಸಿ ಶಿಕ್ಷಣ ಚಟುವಟಿಕೆಗಳನ್ನು ತೊಡಗಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.

ಒಂದು ಸಮುದಾಯವನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ. ಆದರೆ ಅದು ಒಂದು ಜಾತಿಗೆ ಸೀಮಿತವಾದರೆ ಯಾವುದೇ ಪ್ರಯೋಜನವಿಲ್ಲ. ಅದರಲ್ಲೂ ವೇಷಭೂಷಣದಲ್ಲಿ ಮಾತ್ರ ಮುಸ್ಲಿಮರಾಗಿ ಉಳಿದರೆ ಸಮುದಾಯಕ್ಕೆ ದೊಡ್ಡ ನಷ್ಟವಾಗಲಿದೆ. ಕುರ್‌ಆನ್ ಸಹಿತ ಒಳ್ಳೆಯ ಸಂದೇಶಗಳನ್ನು ಇತರೆ ಜನಾಂಗಗಕ್ಕೂ ಮುಟ್ಟಿಸಬೇಕಾಗಿದೆ ಎಂದು ಅವರು ಕರೆ ನೀಡಿದರು.

ಬಿಡಿಎ ಜಾಗ ಸಂಬಂಧ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಸಲ್ಲಿಸಿರುವ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಡಿಎ ಅಧ್ಯಕ್ಷ ಎನ್.ಎ. ಹಾರೀಸ್ ಭರವಸೆ ನೀಡಿದರು.

 ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಬಿ.ಎಂ.ಫಾರೂಕ್ ಮಾತನಾಡಿದರು.

130 ಮಕ್ಕಳಿಗೆ ವಿದ್ಯಾರ್ಥಿ ಪುರಸ್ಕಾರ: ಸೆಯ್ಯದ್ ಮುಹಮ್ಮದ್ ಬ್ಯಾರಿ

‘ಬ್ಯಾರಿ ಸಂಸ್ಥೆ ವತಿಯಿಂದ ಇದೊಂದು ಕಿರುಪ್ರಯತ್ನ ಎಂದೇ ಆರಂಭಿಸಲಾಗಿತ್ತು. ಆದರೆ, ಇಂದು ನೇರವಾಗಿ ಸಾಕಷ್ಟು ಮಕ್ಕಳಿಗೆ ಅನುಕೂಲವಾಗುತ್ತಿದೆ. ಜತೆಗೆ, ಪೋಷಕರ ಮತ್ತು ಸಮುದಾಯದ ಪ್ರಯತ್ನವೂ ಇದರಲ್ಲಿ ಇದೆ. ಹೀಗಾಗಿಯೇ ಈ ಬಾರಿಯ ಶೈಕ್ಷಣಿಕ ಸಾಲಿನಲ್ಲಿ 130 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ನೈತಿಕತೆ, ಗುಣಮಟ್ಟ ಮುಖ್ಯವಾಗಿದ್ದು, ಯಶಸ್ವಿಯಾದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಕೊಡುಗೆ ನೀಡುವಂತೆ ಆಗಬೇಕು’

-ಸೆಯ್ಯದ್ ಮುಹಮ್ಮದ್ ಬ್ಯಾರಿ, ಅಧ್ಯಕ್ಷ, ಬ್ಯಾರಿ ಸೌಹಾರ್ದ ಭವನ ಸಮಿತಿ

ಪ್ರಶಸ್ತಿ ಪ್ರದಾನ: ರಾಜ್ಯದ ನವಸಾಕ್ಷರ ಆಂದೋಲನದಲ್ಲಿ ಸಕ್ರಿಯ ಪಾತ್ರ ವಹಿಸಿರುವ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ಬಡಿಲ ಹುಸೈನ್ 2024ನೆ ಸಾಲಿನ ವರ್ಷದ ಬ್ಯಾರಿ ಹಾಗೂ ಒಬ್ಬಂಟಿಯಾದರೂ ಮಗಳ ಜೊತೆಗೂಡಿ 75ಕ್ಕೂ ಹೆಚ್ಚು ಹಸು, ಕರುಗಳನ್ನು ಸಾಕಿ ಯಶಸ್ವಿ ಹೈನೋದ್ಯಮಿಯಾಗಿರುವ ಹರೇಕಳದ ಮೈಮುನಾ-ಮರ್ಜೀನಾ ಅವರಿಗೆ ವರ್ಷದ ಬ್ಯಾರ್ದಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿಯ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ, ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿಯ ಸದಸ್ಯ ಉಮರ್ ಟೀಕೆ, ಇಕ್ಬಾಲ್‌ ಅಹ್ಮದ್‌, ಜಿ.ಎ. ಬಾವ, ಬ್ಯಾರಿ ಸೌಹಾರ್ದ ಭವನದ ಮುಖ್ಯ ಆಡಳಿತಾಧಿಕಾರಿ ಅತ್ತೂರು ಚೆಯ್ಯಬ್ಬ ಮತ್ತಿತರರು ಉಪಸ್ಥಿತರಿದ್ದರು.

ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಡಾ. ಮಕ್ಸೂದ್ ಅಹ್ಮದ್ ಸ್ವಾಗತಿಸಿದರು. ಬ್ಯಾರೀಸ್ ವೆಲ್ಫೇರ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ಟೀಕೆ ವಂದಿಸಿದರು. ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News