‘ಲೋಕಸಭೆ ಚುನಾವಣೆ’ ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ: ಡಿ.ಕೆ. ಶಿವಕುಮಾರ್

Update: 2024-02-14 13:25 GMT

ಬೆಂಗಳೂರು: ‘ಮುಂಬರಲಿರುವ ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮತ್ತೊಂದು ಸುತ್ತಿನ ಸಮೀಕ್ಷೆ ನಡೆಸಿ, ಹೊಸದಿಲ್ಲಿಯಲ್ಲಿ ಸಭೆ ಮಾಡಲಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಚುನಾವಣೆ ಸಮಿತಿ ಸಭೆ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಇಂದಿನ ಸಭೆಯಲ್ಲಿ ಪಕ್ಷದ ವೀಕ್ಷಕರು, ಜಿಲ್ಲಾ ಸಚಿವರು, ಕೆಲ ಕಾರ್ಯಕರ್ತರು ಸಲ್ಲಿಸಿದ್ದ ವರದಿ ಹಾಗೂ ನಮ್ಮ ಸಮೀಕ್ಷೆ ವರದಿಗಳನ್ನು ಪರಾಮರ್ಶೆ ಮಾಡಿದ್ದೇವೆ. ಮತ್ತೊಂದು ಸುತ್ತಿನ ಸಮೀಕ್ಷೆ ಮೂಲಕ ಅಭಿಪ್ರಾಯ ಸಂಗ್ರಹಕ್ಕೆ ಸೂಚಿಸಿದ್ದೇವೆ. ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ, ಮುಂದಿನ ಸುತ್ತಿನ ಸಭೆಯನ್ನು ದಿಲ್ಲಿಯಲ್ಲಿ ನಡೆಸಲಾಗುವುದು. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಈ ಬಾರಿ ಬೆಂಗಳೂರಿನಲ್ಲೇ ಸಭೆ ಮಾಡಲಾಗಿದೆ ಎಂದು ಹೇಳಿದರು.

ಆದಷ್ಟು ಬೇಗ ಅಂತಿಮಗೊಳಿಸಬೇಕು. ಶೇ.50ರಷ್ಟು ಅಭ್ಯರ್ಥಿಗಳಿಗಾದರೂ ಕೆಲಸ ಆರಂಭಿಸಲು ನಾವು ಸೂಚನೆ ನೀಡಬೇಕಿದೆ. ಆಕಾಂಕ್ಷಿಗಳ ವಿಚಾರವಾಗಿ ನಾವೂ ಇನ್ನೂ ಚರ್ಚೆ ಮಾಡಿಲ್ಲ. ನಾವು ಕೇವಲ ನಮಗೆ ಬಂದಿರುವ ವರದಿಗಳು, ಅಭಿಪ್ರಾಯದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಶಿವಕುಮಾರ್ ತಿಳಿಸಿದರು.

ನಾವು ಎಐಸಿಸಿಗೆ ಯಾವುದೇ ಪಟ್ಟಿ ನೀಡಿಲ್ಲ. ಮುಖ್ಯಮಂತ್ರಿಗೆ ವಿವಿಧ ವರದಿಗಳು, ಅಭಿಪ್ರಾಯಗಳ ಕುರಿತ ಅಧಿಕೃತ ಪಟ್ಟಿಯನ್ನು ಇವತ್ತಷ್ಟೇ ನೀಡಿದ್ದೇನೆ. ನಾವು ನಮ್ಮ ಪಟ್ಟಿಯನ್ನು ಗೌಪ್ಯವಾಗಿಡಬೇಕು, ಆ ಕೆಲಸ ಮಾಡುತ್ತೇವೆ. ರಾಜಕೀಯದಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಎಲ್ಲರಿಗೂ ಅವಕಾಶವಿರುತ್ತದೆ. ಪಕ್ಷ ಗೆಲ್ಲುವುದು ಮುಖ್ಯ ಎಂದು ಅವರು ಪ್ರತಿಕ್ರಿಯೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News