ವಿಧಾನ ಪರಿಷತ್ತಿನ ವಿವಿಧ ಕ್ಷೇತ್ರಗಳ ಸಮಸ್ಯೆಗಳು ಶೀಘ್ರವೇ ಪರಿಹಾರ : ಬಿ.ವೈ.ವಿಜಯೇಂದ್ರ

Update: 2024-05-18 13:46 GMT

ಬಿ.ವೈ.ವಿಜಯೇಂದ್ರ

ಬೆಂಗಳೂರು : ವಿಧಾನ ಪರಿಷತ್ತಿನ ವಿವಿಧ ಕ್ಷೇತ್ರಗಳಲ್ಲಿ ಇದ್ದ ಸಮಸ್ಯೆಗಳು ಶೀಘ್ರವೇ ಪರಿಹಾರಗೊಳ್ಳಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಶನಿವಾರ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕ್ಷೇತ್ರದ 6 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಬಿಜೆಪಿ 4 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಎರಡು ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು ಕೊಟ್ಟಿದ್ದೇವೆ" ಎಂದು ತಿಳಿಸಿದರು.

ನಿನ್ನೆ 6 ಕ್ಷೇತ್ರಗಳಿಗೆ ಬಿಜೆಪಿಯಿಂದ ಉಸ್ತುವಾರಿಗಳನ್ನೂ ನೇಮಿಸಿದ್ದೇವೆ. ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಅಮರನಾಥ ಪಾಟೀಲ್ ಮೊನ್ನೆ ನಾಮಪತ್ರ ಸಲ್ಲಿಸಿದ್ದಾರೆ. ನಮ್ಮ ಪಕ್ಷದ ಹಿರಿಯ ಮುಖಂಡ ಸುರೇಶ್ ಸಜ್ಜನ್ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಈ ಕ್ಷೇತ್ರದಲ್ಲಿ ಪ್ರವಾಸ ಮಾಡಿ, ಸಂಘಟನೆ ಮಾಡಿ ಆಕಾಂಕ್ಷಿಯಾಗಿದ್ದು, ನಾಮಪತ್ರ ಸಲ್ಲಿಸಿದ್ದರು ಎಂದು ಅವರು ಹೇಳಿದರು.

ಸುರೇಶ್ ಸಜ್ಜನ್ ಅವರು ಯಡಿಯೂರಪ್ಪರನ್ನು ಭೇಟಿ ಮಾಡಿ, ಚುನಾವಣಾ ಅಖಾಡದಿಂದ ಹಿಂದೆ ಸರಿದು ಬಿಜೆಪಿ ಬೆಂಬಲಿಸಲು ಮುಂದಾಗಿರುವುದು ಸಂತಸದ ವಿಚಾರ. ಇದರ ಪರಿಣಾಮವಾಗಿ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲು ಅನುಕೂಲವಾಗಿದೆ ಎಂದು ಅವರು ಹೇಳಿದರು.

ಅದೇ ರೀತಿ ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲಿಂಗರಾಜ್ ಹೆಸರನ್ನು ಘೋಷಿಸಲಾಗಿತ್ತು. ನಂತರ ಜೆಡಿಎಸ್ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಡಲಾಗಿತ್ತು. ನಾಮಪತ್ರ ಸಲ್ಲಿಸಿದ್ದ ಲಿಂಗರಾಜ್ ಮನವೊಲಿಕೆ ಮಾಡಿ ನಾಮಪತ್ರ ಹಿಂದಕ್ಕೆ ಪಡೆಯುವುದಾಗಿ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಎರಡೂ ಕ್ಷೇತ್ರದಲ್ಲೂ ಸಮಸ್ಯೆಗಳು ಇತ್ಯರ್ಥವಾಗಿವೆ. ಬೇರೆ ಕ್ಷೇತ್ರಗಳ ಸಮಸ್ಯೆ ಬಗೆಹರಿಸುವ ಕೆಲಸವನ್ನು ಎರಡು ದಿನಗಳಲ್ಲಿ ಮಾಡಲಿದ್ದು, ಅವು ಪರಿಹಾರ ಕಾಣಲಿದೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಸಿಬಿಐ ತನಿಖೆಗೆ ಒತ್ತಾಯ: ಹಾಸನದ ಪೆನ್ ಡ್ರೈವ್ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಕೊಡಲು ಒತ್ತಾಯಿಸುತ್ತಿದ್ದೇವೆ. ದಿನನಿತ್ಯ ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ತಡ ಮಾಡದೆ ಈ ಪೆನ್‍ಡ್ರೈವ್, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು ಎಂದು ಅವರು ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News