ಯುಜಿಸಿ ನೆಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಗೆ ಹಿಜಾಬ್ ತೆಗೆಯಲು ಒತ್ತಡ : ಆರೋಪ

Update: 2024-06-18 16:49 GMT

ಸಾಂಕೇತಿಕ ಚಿತ್ರ

ಬೆಂಗಳೂರು: ಮಂಗಳವಾರ ನಗರದ ಪರೀಕ್ಷಾ ಕೇಂದ್ರವೊಂದರಲ್ಲಿ ಆಯೋಜಿಸಲಾಗಿದ್ದ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುವುದಕ್ಕೂ ಮುನ್ನ ತಾನು ತೊಟ್ಟಿದ್ದ ಹಿಜಾಬ್ ಅನ್ನು ತೆಗೆಯುವಂತೆ ಒತ್ತಡ ಹೇರಲಾಯಿತು ಎಂದು ವಿದ್ಯಾರ್ಥಿನಿಯೊಬ್ಬರು ಆರೋಪಿಸಿರುವ ಘಟನೆ ಮಂಗಳವಾರ ವರದಿಯಾಗಿದೆ.

ವಾರ್ತಾಭಾರತಿ ಜೊತೆ ಮಾತಾಡಿರುವ ಆ ವಿದ್ಯಾರ್ಥಿನಿ, " ಇದಕ್ಕೂ ಮುನ್ನ, ಯುಪಿಎಸ್‌ಸಿ-ಸಿಎಸ್‌ಇ, ಯುಪಿಎಸ್‌ಸಿ-ಇಪಿಎಫ್ಒ, ಎಸ್ಎಸ್‌ಸಿ-ಸಿಜಿಎಲ್, ಸಿಎಸ್‌ಐಆರ್-ಎಒ, ಐಬಿ-ಎಸಿಐಒ ಹಾಗೂ ಆರ್‌ಆರ್‌ಬಿ ಗಳಂಥ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದೇನೆ. ನಾನು ಇದೇ ಮೊದಲ ಬಾರಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹಿಜಾಬ್ ಅನ್ನು ತೆಗೆದು ಪರೀಕ್ಷೆ ಬರೆಯಬೇಕಾಯಿತು ಎಂದು ದೂರಿದ್ದಾರೆ. ನಾನು ಈ ಹಿಂದೆ ಬರೆದಿದ್ದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಹಿಬಾಬ್ ಧರಿಸಲು ಅವಕಾಶ ನೀಡಲಾಗಿತ್ತು" ಎಂದು ಹೇಳಿದ್ದಾರೆ.

ಯುಜಿಸಿ-ನೆಟ್ ಪರೀಕ್ಷೆಯನ್ನು ಆಯೋಜಿಸುವ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ( ಎನ್ ಟಿ ಎ), "ಒಂದು ವೇಳೆ ನಿಮ್ಮ ಧರ್ಮ/ಸಂಪ್ರದಾಯದ ಪ್ರಕಾರ ನಿರ್ದಿಷ್ಟ ದಿರಿಸನ್ನು ಧರಿಸಬೇಕು ಎಂದು ಬಯಸಿದರೆ, ಸೂಕ್ತ ತಪಾಸಣೆ ಹಾಗೂ ಕಡ್ಡಾಯ ಶೋಧನೆಗಾಗಿ ನೀವು ಪರೀಕ್ಷಾ ಕೇಂದ್ರಕ್ಕೆ ಸಾಕಷ್ಟು ಮುಂಚಿತವಾಗಿ ಭೇಟಿ ನೀಡಿ" ಎಂದು ಪರೀಕ್ಷೆಯ ಅಡ್ಮಿಟ್ ಕಾರ್ಡ್ ನಲ್ಲಿ ಸೂಚನೆ ನೀಡಿತ್ತು. ಈ ಸೂಚನೆಯಂತೆ ನಾನು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರೂ, ನನಗೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಿಲ್ಲ. ನಾನು ನನ್ನ ಹಿಜಾಬ್ ತೆಗೆದ ನಂತರವಷ್ಟೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಯಿತು ಎಂದು ಆ ವಿದ್ಯಾರ್ಥಿನಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಆದರೆ ಯಾವುದೇ ರೀತಿಯ ಆಭರಣ ಧರಿಸುವುದಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೂ ಅಲ್ಲಿ ಸಾಕಷ್ಟು ಮಂದಿ ಅಭ್ಯರ್ಥಿಗಳು ಮಂಗಳಸೂತ್ರ, ಕಾಲಿನ ಉಂಗುರ ಸಹಿತ ಇತರ ಆಭರಣ ಧರಿಸಿಕೊಂಡೇ ಮಂಗಳವಾರ ಪರೀಕ್ಷೆ ಬರೆದಿದ್ದಾರೆ. ಅವರನ್ನು ಯಾರೂ ತಡೆದಿಲ್ಲ. ಆ ಬಗ್ಗೆ ನಾನು ಪ್ರಶ್ನಿಸಿದ್ದಕ್ಕೆ ಅದನ್ನು ನಿರ್ಲಕ್ಷಿಸಿ ನೀವು ಪರೀಕ್ಷೆ ಬರೆಯಬೇಕಾದರೆ ಹಿಜಾಬ್ ತೆಗೆದಿಟ್ಟು ಒಳಗೆ ಹೋಗಿ ಎಂದು ಹೇಳಿದರು ಎಂದು ವಿದ್ಯಾರ್ಥಿನಿ ದೂರಿದ್ದಾರೆ.

ಡಿಸೆಂಬರ್ 2023 ರಲ್ಲಿ ಪಾಟ್ನಾದಲ್ಲೂ ಯುಜಿಸಿ ನೆಟ್ ಪರೀಕ್ಷೆ ಬರೆಯಲು ಹೋಗಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಇದೇ ರೀತಿ ತಡೆಯೊಡ್ಡಲಾಗಿದ್ದು ಸುದ್ದಿಯಾಗಿತ್ತು.

ಪರೀಕ್ಷೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎಂತಹ ಧಾರ್ಮಿಕ ದಿರಿಸುಗಳನ್ನು ಧರಿಸಬಹುದು ಅಥವಾ ಧರಿಸಬಾರದು ಎಂಬುದರ ಕುರಿತು ಸ್ಪಷ್ಟೀಕರಣ ನೀಡುವಂತೆ ಮತ್ತು ತನ್ನ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ವಿದ್ಯಾರ್ಥಿನಿ ಮತ್ತು ಆಕೆಯ ಪೋಷಕರು ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ( ಎನ್ ಟಿ ಎ) ಯನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News