ʼಯುಜಿಸಿ ನೆಟ್ʼ ಪರೀಕ್ಷೆ ಬರೆಯುವ ವಿದ್ಯಾರ್ಥಿನಿಗೆ ಹಿಜಾಬ್ ತೆಗೆಯಲು ಒತ್ತಡ: ಆರೋಪ
Update: 2024-06-19 15:32 GMT
ಬೆಂಗಳೂರು: ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗುವುದಕ್ಕೂ ಮುನ್ನ ವಿದ್ಯಾರ್ಥಿನಿಯೊಬ್ಬರು ತೊಟ್ಟಿದ್ದ ಹಿಜಾಬ್ ತೆಗೆಯುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಒತ್ತಡ ಹೇರಿದ್ದರು ಎಂಬ ಆರೋಪದ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲನೆ ನಡೆಸುವುದಾಗಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಮಂಗಳವಾರ ಬೆಂಗಳೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಆಯೋಜಿಸಲಾಗಿದ್ದ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗಲು ಬಂದಿದ್ದ ವಿದ್ಯಾರ್ಥಿನಿಯೊಬ್ಬರು ತಾನು ತೊಟ್ಟಿದ್ದ ಹಿಜಾಬ್ ತೆಗೆಯುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಒತ್ತಡ ಹೇರಿದರು. ಅಲ್ಲದೆ, ಪರೀಕ್ಷೆಯ ಲಿಖಿತ ನಿಯಮಕ್ಕೆ ವಿರುದ್ಧವಾಗಿ ವರ್ತಿಸಿದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದರು. ಈ ಬಗ್ಗೆ ವಾರ್ತಾಭಾರತಿ ಸುದ್ದಿ ಪ್ರಕಟಿಸಿತ್ತು.