ಜನೌಷಧಿ ಕೇಂದ್ರದಲ್ಲಿ ಸಾರ್ವಜನಿಕರೊಂದಿಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸಂವಾದ

Update: 2023-11-30 16:12 GMT

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಂಜೆ ಯಶವಂತಪುರದ ಸುಬೇದಾರ್ ಛತ್ರಂ ರಸ್ತೆಯಲ್ಲಿರುವ ‘ಪ್ರಧಾನಮಂತ್ರಿಗಳ ಜನೌಷಧಿ ಕೇಂದ್ರ’ಕ್ಕೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಇಂದು ಜಾರ್ಖಂಡ್ ದಿಯೋಘರ್ ನ ಏ‌ಮ್ಸ್ ನಲ್ಲಿ 10 ಸಾವಿರ ಜನೌಷಧಿ ಕೇಂದ್ರವನ್ನು ಜನತೆಗೆ ಸಮರ್ಪಿಸಿದ್ದಾರೆ. ಮಧ್ಯಮ ವರ್ಗ ಮತ್ತು ಬಡಜನರಲ್ಲಿ ಜನೌಷಧಿ ಕೇಂದ್ರಗಳ ಜನಪ್ರಿಯತೆ ಹೆಚ್ಚುತ್ತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೆಲವು ಔಷಧಿಗಳು ಶೇ.70ರಷ್ಟು ಕಡಿಮೆ ದರಕ್ಕೆ ಲಭಿಸುತ್ತವೆ. ಕಳೆದ 9 ವರ್ಷಗಳಲ್ಲಿ, ದೇಶಾದ್ಯಂತ ಜನೌಷಧಿ ಕೇಂದ್ರಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ. ಪ್ರಧಾನಿಯವರು ವಿಕಸಿತ ಭಾರತ್ ಸಂಕಲ್ಪ ಯಾತ್ರಾದ ವೇಳೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದನ್ನೂ ನಿರ್ಮಲಾ ಸೀತಾರಾಮನ್ ಗಮನಕ್ಕೆ ತಂದರು.

ದೇಶಾದ್ಯಂತ ಇರುವ ಜನೌಷಧಿ ಕೇಂದ್ರಗಳಲ್ಲಿ 1,800ಕ್ಕೂ ಹೆಚ್ಚು ಔಷಧಗಳು, 285 ಶಸ್ತ್ರಚಿಕಿತ್ಸಾ ಉಪಕರಣಗಳು ಮತ್ತು ಔಷಧಿ ಕ್ಷೇತ್ರಕ್ಕೆ ಪೂರಕ ವಸ್ತುಗಳು ಲಭ್ಯವಿವೆ. ಆರೋಗ್ಯ ಸೇವೆಯನ್ನು ಕೈಗೆಟಕುವ ದರದಲ್ಲಿ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಪ್ರಧಾನಿಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಕೈಗೆಟಕುವ ದರದಲ್ಲಿ ಔಷಧಿಗಳನ್ನು ಲಭ್ಯವಾಗುವಂತೆ ಮಾಡಲು ಜನೌಷಧಿ ಕೇಂದ್ರಗಳ ಸ್ಥಾಪನೆ ಈ ದಿಸೆಯಲ್ಲಿನ ಪ್ರಮುಖ ಉಪಕ್ರಮಗಳಲ್ಲಿ ಒಂದು. ಸಾಮಾನ್ಯ ಕಾಯಿಲೆಗಳಾದ ಜ್ವರ, ಕೆಮ್ಮು ಮತ್ತು ನೆಗಡಿ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಔಷಧಿಗಳು ಇಲ್ಲಿ ಲಭಿಸುತ್ತವೆ. ಕ್ಯಾನ್ಸರ್ ಮತ್ತು ಹೃದ್ರೋಗದಂಥ ಮಾರಣಾಂತಿಕ ಕಾಯಿಲೆಗಳಿಗೆ ಔಷಧಿಗಳು ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಲಭ್ಯವಿವೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News