ಕಾಂಗ್ರೆಸ್‍ಗೆ ಒಕ್ಕಲಿಗರ ಸಮುದಾಯಗಳ ಒಕ್ಕೂಟ ಬೆಂಬಲ
ಬೆಂಗಳೂರು : ಜೆಡಿಎಸ್ ಮತ್ತು ಬಿಜೆಪಿಯಿಂದ ರಾಜ್ಯಕ್ಕೆ ಮತ್ತು ಒಕ್ಕಲಿಗ ಸಮುದಾಯಕ್ಕೆ ಯಾವುದೇ ಲಾಭವಾಗಿಲ್ಲ. ಅದರಿಂದ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದವರು ಕಾಂಗ್ರೆಸ್‍ನ್ನು ಬೆಂಬಲಿಸೇಕು ಎಂದು ರಾಜ್ಯ ಒಕ್ಕಲಿಗರ ಸಮುದಾಯಗಳ ಒಕ್ಕೂಟ ತಿಳಿಸಿದೆ.
ಬುಧವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಡಿ.ಹನುಮಂತಯ್ಯ, ದೇವೆಗೌಡ ಅವರು ಪ್ರಧಾನಿಯಾದರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಆದರೆ ಇಬ್ಬರೂ ಕೂಡ ಒಕ್ಕಲಿಗ ಮೀಸಲಾತಿಯ ಬಗ್ಗೆ ಚಕಾರ ಎತ್ತಲಿಲ್ಲ. ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಒಕ್ಕಲಿಗ ಸಮುದಾಯಕ್ಕೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿವೆ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದ ಸಮರ್ಥನಾಯಕರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಮುಖ್ಯಮಂತ್ರಿಯಾಗುವ ನಂಬಿಕೆ ಇದೆ. ಅವರು ಮುಖ್ಯಮಂತ್ರಿಯಾಗಬೇಕಾದರೆ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಕಾಂಗ್ರೆಸ್‍ಗೆ ಮತ ನೀಡಬೇಕು ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಸಮುದಾಯಗಳ ಒಕ್ಕೂಟದ ಖಜಾಂಚಿ ಪ್ರೊ.ಕೃಷ್ಣೇಗೌಡ ಮಾತನಾಡಿ, ಸರಕಾರಿ ನೌಕರರಾಗಿದ್ದ ಡಾ.ಮಂಜುನಾಥ್ ಅವರಿಗೆ 95ಕೋ ರೂ. ಎಲ್ಲಿಂದ ಬಂತು? ಕುಮಾರಸ್ವಾಮಿ ಅವರು ಮಾತ್ರ ಒಕ್ಕಲಿಗರೇ? ಅವರು ಎಂಎಲ್‍ಎ ಆಗಿದ್ದು ಸಾಕಾಗಲಿಲ್ಲವೇ? ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುತ್ತಾರೆ. ಹಿಂದೆ ದೇವೇಗೌಡರ ಪರ ಹೇಗೆ ನಿಂತಿದ್ದೆವು. ಹಾಗೆ ಡಿ.ಕೆ.ಶಿವಕುಮಾರ್ ಪರ ನಿಲ್ಲುತ್ತೇವೆ. ಒಕ್ಕಲಿಗರು ಹಿಂದೆ ಮೋಸ ಹೋದಹಾಗೆ ಮತ್ತೆ ಮೋಸ ಹೋಗದೆ ಮತ್ತೊಬ್ಬ ನಾಯಕನನ್ನು ಸೃಷ್ಟಿಸೋಣ ಎಂದು ಹೇಳಿದರು.