ಗಡ್ಡ, ಮೀಸೆ ಟ್ರಿಮ್‌ ಮಾಡದ್ದಕ್ಕೆ ಜೂನಿಯರ್ ಮೇಲೆ ಹಿರಿಯ ವಿದ್ಯಾರ್ಥಿಗಳಿಂದ ಹಲ್ಲೆ; ಪ್ರಕರಣ ದಾಖಲು

Update: 2024-09-04 09:52 GMT

ಬೆಂಗಳೂರು: ಗಡ್ಡ, ಮೀಸೆ ಟ್ರಿಮ್‌  ಮಾಡಿಲ್ಲ ಎಂಬ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳ್ಳಂದೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಕೇರಳ ಮೂಲದ ಧ್ರುವ ಎಂದು ಗುರುತಿಸಲಾಗಿದೆ. ದೊಡ್ಡ ಸಿದ್ದಾಪುರದಲ್ಲಿ ಸ್ನೇಹಿತರ ಜತೆ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಈತ ಚಿಕ್ಕ ಬೆಳ್ಳಂದೂರಿನ ಖಾಸಗಿ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾನೆ. ಘಟನೆಯ ಬಗ್ಗೆ ಸಂತ್ರಸ್ತ ವಿದ್ಯಾರ್ಥಿಯ ತಂದೆ ನೀಡಿದ ದೂರಿನ ಮೇರೆಗೆ ಬೆಳ್ಳಂದೂರು ಪೊಲೀಸರು 10 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್‌ ದಾಖಲಿಸಿದ್ದಾರೆ. ಈ ಸಂಬಂಧ ವಿಷ್ಣು, ಶರತ್‌ ಸಹಿತ ಮೂವರು ವಿದ್ಯಾರ್ಥಿಗಳನ್ನು ಗುರುತಿಸಲಾಗಿದೆ.

ಹಲ್ಲೆ ನಡೆಸಿದವರು ವಿದ್ಯಾರ್ಥಿಗಳಾದರಿಂದ ನೋಟಿಸ್‌ ಕೊಡಲಾಗಿದ್ದು, ಅವರ ಹೇಳಿಕೆ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.  

 ಕೆಲ ತಿಂಗಳ ಹಿಂದೆ ಕಾಲೇಜಿಗೆ ಹೋದಾಗ, ಕೆಲವು ಹಿರಿಯ ವಿದ್ಯಾರ್ಥಿಗಳು ಕಾಲೇಜಿಗೆ ಶೇವ್‌ ಮಾಡಿಕೊಂಡು ಬರಬೇಕು ಎಂದು ತಾಕೀತು ಮಾಡಿದ್ದರು. ಆಗ ಧ್ರುವ ಸಾಧ್ಯವಿಲ್ಲ ಎಂದು ಹೇಳಿದ್ದ. ಇದೇ ವಿಚಾರಕ್ಕೆ ಆರೋಪಿತ ವಿದ್ಯಾರ್ಥಿಗಳು ಧ್ರುವಗೆ ನಾಲ್ಕೈದು ಬಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಧ್ರುವ ಯಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ ಎನ್ನಲಾಗಿದೆ.

ಇದರಿಂದ ಕೋಪಗೊಂಡಿದ್ದ ಹಿರಿಯ ವಿದ್ಯಾರ್ಥಿಗಳು, ಆ.30 ರಂದು ಕರೆ ಮಾಡಿ ಸಿದ್ದಾಪುರದ ಚರ್ಚ್‌ ಬಳಿ ಬರುವಂತೆ ಕರೆಸಿಕೊಂಡಿದ್ದಾರೆ. ಬರುವಾಗಲೇ ಗಡ್ಡ ಹಾಗೂ ಮೀಸೆ ಟ್ರಿಮ್‌ ಮಾಡಿ ಕೊಂಡು ಬರಬೇಕು ಎಂದು ಸೂಚಿಸಿದ್ದರು. ಆದರೂ ಯಾಕೆ ಹಾಗೆಯೇ ಬಂದಿರುವೆ ಎಂದು ಸೀನಿಯರ್‌ ವಿದ್ಯಾರ್ಥಿಗಳು ಪ್ರಶ್ನಿಸಿದ್ದನ್ನು ಕ್ಯಾರೇ ಅನ್ನದ ಧ್ರುವನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿಯ ತಂದೆ ನೀಡಿರುವ ದೂರಿನನ್ವಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News