ವಿಧಾನಪರಿಷತ್ ಚುನಾವಣೆ | ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಮುಖಂಡರ ಮನವಿ

Update: 2024-05-24 16:06 GMT

ಬೆಂಗಳೂರು : ರಾಜ್ಯ ವಿಧಾನಸಭೆಯಿಂದ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಜೂ.13ರಂದು ನಡೆಯಲಿರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ, ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

ಶುಕ್ರವಾರ ನಗರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಅಲ್ಪಸಂಖ್ಯಾತ ಸಮುದಾಯದ ಮುಖಂಡರ ನಿಯೋಗವು, 11 ಸ್ಥಾನಗಳಲ್ಲಿ ಕನಿಷ್ಠ 2 ಸ್ಥಾನಗಳನ್ನು ಮುಸ್ಲಿಮರಿಗೆ ಹಾಗೂ ಒಂದು ಸ್ಥಾನವನ್ನು ಕ್ರೈಸ್ತರಿಗೆ ಒದಗಿಸುವ ಮೂಲಕ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಅಲ್ಪಸಂಖ್ಯಾತ ಸಮುದಾಯಗಳಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಟಿಕೆಟ್‍ಗಳನ್ನು ನೀಡುವುದಿಲ್ಲ. ಆದುದರಿಂದ, ವಿಧಾನಪರಿಷತ್ತಿನ ಚುನಾವಣೆಯಲ್ಲಾದರೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯಗಳಿಗೆ ನ್ಯಾಯ ಒದಗಿಸುವಂತೆ ಮುಖಂಡರು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಖಂಡರ ಮನವಿಯನ್ನು ಆಲಿಸಿದ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ತಿನ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಅಲ್ಲದೆ, ಹೆಚ್ಚಿನ ಒತ್ತಡವು ಇದೆ. ನಿಮ್ಮ ಮನವಿಯನ್ನು ಹೈಕಮಾಂಡ್ ಗಮನಕ್ಕೆ ತಂದು, ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ನಿಯೋಗಕ್ಕೆ ಭರವಸೆ ನೀಡಿದರು ಎನ್ನಲಾಗಿದೆ.

ನಿಯೋಗದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್, ಪೌರಾಡಳಿತ ಸಚಿವ ರಹೀಮ್ ಖಾನ್, ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕಿ ಕನೀಝ್ ಫಾತಿಮಾ, ಆಸೀಫ್ ಸೇಠ್, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News