2 ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್‌ಡಿಕೆಗೆ ಮಹಿಳೆಯರಿಗೆ ಗೌರವ ನೀಡುವಂತಹ ಕನಿಷ್ಠ ಜ್ಞಾನ ಇಲ್ಲವೇ? : ವಿ.ಎಸ್.ಉಗ್ರಪ್ಪ
ಬೆಂಗಳೂರು : ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಆದರೂ ಮಹಿಳೆಯರಿಗೆ ಗೌರವ ನೀಡುವಂತಹ ಕನಿಷ್ಠ ಜ್ಞಾನ ಅವರಿಗೆ ಇಲ್ಲವೇ?̤ ಮಹಿಳೆಯರಿಗೆ ಗೌರವ ನೀಡಬೇಕು ಎನ್ನುವುದು ಸಂವಿಧಾನದ ಆಶಯ. ಅವರು ಈ ಆಶಯದ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುರುವೇಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವಾಗ ಮಹಿಳೆಯರಿಗೆ ಅವಮಾನ ಆಗುವ ರೀತಿ ಮಾತನಾಡಿದ್ದಾರೆ. ‘ಹಳ್ಳಿಯ ಮಹಿಳೆಯರು ಗ್ಯಾರಂಟಿ ಯೊಜನೆಗಳಿಂದ ದಾರಿ ತಪ್ಪಿದ್ದಾರೆ. ಕೌಟುಂಬಿಕ ಜೀವನ ಏನಾಗಿದೆ ಎಂದು ನೋಡಬೇಕು’ ಎಂದು ಹೇಳಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ತಾಯಂದಿರು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ? . ನಿಮ್ಮ ಕುಟುಂಬದಲ್ಲಿಯೂ ಸಹ ಅನೇಕ ಜನ ಹೆಣ್ಣು ಮಕ್ಕಳಿದ್ದಾರೆ. ಈ ಪದ ಬಳಕೆಯ ಮೂಲಕ ಬಿಜೆಪಿ ಸೇರಿ ಮನುವಾದಿಯಾಗಿದ್ದೀರಿ. ಇದು ಸಂವಿಧಾನಕ್ಕೆ ಮಾಡಿರುವ ಅಪಮಾನ. ಈ ಮಹಿಳಾ ವಿರೋಧಿ ಹೇಳಿಕೆಗೆ ಕೂಡಲೇ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕಷ್ಟದಲ್ಲಿ ಇರುವ ಮಹಿಳೆಯರಿಗೆ ಹಣ ಕೊಡುವುದು ತಪ್ಪೇ? ಉಚಿತವಾಗಿ ಅಕ್ಕಿ ನೀಡುವುದು ತಪ್ಪೇ? ದೇವಸ್ಥಾನ ಗಳಿಗೆ ಹೋಗುವಂತೆ ಮಾಡಿದ್ದು ತಪ್ಪೇ? ಯಾವ ರೀತಿಯಲ್ಲಿ ಮಹಿಳೆಯರು ದಾರಿ ತಪ್ಪಿದ್ದಾರೆ?. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ ಮಹಿಳೆಯರು ಜೆಡಿಎಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಕೆರೆ ನೀಡಿದರು.
ಮಹಿಳಾ ಆಯೋಗಕ್ಕೆ ದೂರು ನೀಡಲಾಗುವುದು :
ಚುನಾವಣಾ ಆಯೋಗ, ಮಹಿಳಾ ಆಯೋಗಕ್ಕೆ ಕುಮಾರಸ್ವಾಮಿ ಅವರ ವಿರುದ್ಧ ಮಹಿಳೆಯರಿಗೆ ಅಪಮಾನ ಮಾಡಲಾಗಿದೆ ಎಂದು ದೂರು ನೀಡಲಾಗುವುದು ಎಂದರು.
ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆ ವೇಳೆ 28 ಬಾರಿ ಬಂದು ಹೋದರು. ಎಷ್ಟು ಸಲ ಬೇಕಾದರೂ ಬರುವ ಸ್ವಾತಂತ್ರ್ಯ ನಿಮಗೆ ಇದೆ. ಕಳೆದ 10 ವರ್ಷಗಳಲ್ಲಿ ರಾಜ್ಯಕ್ಕೆ ಏನು ಕೊಡುಗೆ ಕೊಟ್ಟಿದ್ದೀರಿ?. ಒಂದೇ ಒಂದು ನೀರಾವರಿ ಯೋಜನೆ ಕೊಟ್ಟಿಲ್ಲ. ರೈತರಿಗೆ ಅನುಕೂಲ ಮಾಡಿಲ್ಲ, ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಎಲ್ಲಿ ಹೋಗಿದ್ದೀರಿ? ಎಂದು ಪ್ರಶ್ನಿಸಿದರು.