ಕಬ್ಬಿಣದ ಗೋಡೆಯಾಚೆಗಿರುವ ಘನಘೋರ ಸತ್ಯಗಳನ್ನು ಅರಿಯುವ ಮುನ್ನ
ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಆಳ-ಅಗಲಗಳು ಅತ್ಯಂತ ಸರಳವಾಗಿ ‘ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?’ ಪುಸ್ತಕದಲ್ಲಿ ಓದುಗರಿಗೆ ದಕ್ಕುತ್ತವೆ. ಪುಸ್ತಕದುದ್ದಕ್ಕೂ ಹರಿದಿರುವ ವಸ್ತುನಿಷ್ಠ, ನಿಷ್ಪಕ್ಷಪಾತಿ ಹಾಗೂ ನ್ಯಾಯಪ್ರಜ್ಞೆಯ ನೋಟಗಳು ಕನ್ನಡದ ಓದುಗರಿಗೆ ಕಾರ್ಪೊರೇಟ್ ಮಾಧ್ಯಮಗಳ ಹಾಗೂ ಬಲಪಂಥೀಯರ ಪ್ರಚಾರಗಳ ಟೊಳ್ಳುತನವನ್ನು ಹಾಗೂ ಪೂರ್ವಗ್ರಹವನ್ನು ಅರಿಯಲು ಸುಲಭವಾಗಿ ಸಹಾಯ ಮಾಡುತ್ತದೆ.
ಈ ಪುಸ್ತಕ ನಿಮ್ಮ ಕೈ ಸೇರುವ ವೇಳೆಗೆ ‘‘ಇಸ್ರೇಲ್ ಹಮಾಸ್ ಭಯೋತ್ಪಾದನೆಯಿಂದ ತನ್ನ ದೇಶವನ್ನು ರಕ್ಷಿಸಿಕೊಳ್ಳಲು’’ 8,000ಕ್ಕೂ ಹೆಚ್ಚು ಫೆಲೆಸ್ತೀನ್ ಕಂದಮ್ಮಗಳನ್ನು ಬಾಂಬು ಹಾಕಿ ಕೊಂದಿರುತ್ತದೆ. ಒಟ್ಟಾರೆ ಗಾಝಾಪ್ರದೇಶದಲ್ಲಿ ಇಸ್ರೇಲಿನ ದಾಳಿಯಿಂದ 15,000ಕ್ಕೂ ಹೆಚ್ಚು ನಿಶ್ಯಸ್ತ್ರ ಜನರು ಕೊಲ್ಲಲ್ಪಟ್ಟಿರುತ್ತಾರೆ.
ಇದರ ಜೊತೆಗೆ ಈಗಾಗಲೇ ಅಲ್ಲಿ 26,000 ಫೆಲೆಸ್ತೀನ್ ನಾಗರಿಕರು ಮಾರಣಾಂತಿಕವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ 10,000 ಮಕ್ಕಳು. ಇದಲ್ಲದೆ ಇಡೀ ಗಾಝಾ ಪ್ರದೇಶಕ್ಕೆ ಆಹಾರ, ಇಂಧನ, ಔಷಧಿ ಸರಬರಾಜನ್ನು ನಿಲ್ಲಿಸಿ ಗಾಝಾ ಪ್ರದೇಶದಲ್ಲಿ ವಾಸಿಸುವ ಇಡೀ 23 ಲಕ್ಷ ಫೆಲೆಸ್ತೀನ್ ನಾಗರಿಕರಿಗೂ ಇಸ್ರೇಲ್ ಸಾಮೂಹಿಕ ಶಿಕ್ಷೆ ವಿಧಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಪ್ರತೀ ಹತ್ತು ನಿಮಿಷಕ್ಕೆ ಒಂದು ಮಗುವನ್ನು ಬಲಿತೆಗೆದುಕೊಳ್ಳುತ್ತಿದೆ. ಪ್ರತೀ ಗಂಟೆಗೆ 16 ಜನ ಫೆಲೆಸ್ತೀನಿಯರನ್ನು ಕೊಂದುಹಾಕುತ್ತಿದೆ. ಪ್ರತೀ ಗಂಟೆಗೆ 45 ಬಾಂಬುಗಳನ್ನು ಗಾಝಾದ ಮೇಲೆ ಹಾಕುತ್ತಿದೆ. ಆ ಮೂಲಕ ಪ್ರತಿ ಗಂಟೆಗೆ ಗಾಝಾದ 12 ಕಟ್ಟಡಗಳನ್ನು ಧ್ವಂಸಗೊಳಿಸುತ್ತಿದೆ.
ಒಂದು ಸಂಘಟನೆ ಇಸ್ರೇಲಿನ ನಿರಾಯುಧ ನಾಗರಿಕರ ಮೇಲೆ ಮಾಡಿದ ಖಂಡನೀಯ ದಾಳಿಯ ವಿರುದ್ಧ ಕ್ರಮ ತೆಗೆದುಕೊಳ್ಳುವ ನೆಪದಲ್ಲಿ ಒಂದು ನಾಗರಿಕ ದೇಶ ತಾನು ಆಕ್ರಮಿಸಿರುವ ಪ್ರದೇಶದ ಇಡೀ ಜನತೆಗೆ ಸಾಮೂಹಿಕ ಶಿಕ್ಷೆ ವಿಧಿಸಬಹುದೇ? ಇದು ವಸಾಹತುಶಾಹಿ ಕ್ರೌರ್ಯವಲ್ಲವೇ?
ಹಾಗಿದ್ದಲ್ಲಿ ಎರಡನೇ ಮಹಾಯುದ್ಧದ ನಂತರ ವಸಾಹತುಶಾಹಿ ವಿರೋಧಿ ವಿಮೋಚನಾ ಹೋರಾಟಗಳು ಎಲ್ಲಾ ರಾಷ್ಟ್ರೀಯತೆಗಳ ಹಕ್ಕು ಎಂಬ ನೆಲೆಯ ಮೇಲೆ ಅಸ್ತಿತ್ವಕ್ಕೆ ಬಂದ ವಿಶ್ವಸಂಸ್ಥೆ ಏಕೆ ಇಸ್ರೇಲಿನ ಈ ವಸಾಹತುಶಾಹಿ ಕ್ರೌರ್ಯವನ್ನು, ಆಕ್ರಮಣವನ್ನು ನಿಲ್ಲಿಸುತ್ತಿಲ್ಲ.? ಏಕೆ ಅಮೆರಿಕ ನೇತೃತ್ವದ ಪಶ್ಚಿಮದ ‘ಪ್ರಜಾತಾಂತ್ರಿಕ ಜಗತ್ತು’ ಇಸ್ರೇಲ್ ನಡೆಸುತ್ತಿರುವ ಹತ್ಯಾಕಾಂಡವನ್ನು ನಿಲ್ಲಿಸುವ ಬದಲು ಅದಕ್ಕೆ ಮದ್ದುಗುಂಡುಗಳನ್ನು ಸರಬರಾಜು ಮಾಡುತ್ತಿದೆ?
ಏಕೆ ತನ್ನ ದೇಶ ಪ್ರಜಾತಂತ್ರದ ಜನನಿ ಎಂದು ಕೊಚ್ಚಿಕೊಳ್ಳುವ ಭಾರತದ ಮೋದಿ ಸರಕಾರ ಕನಿಷ್ಠ ಮಾನವೀಯತೆಯ ದೃಷ್ಟಿಯಿಂದ ಕದನ ವಿರಾಮ ಘೋಷಿಸಿ ಗಾಝಾದ ನಿರಪರಾಧಿ ನಾಗರಿಕರಿಗೆ ಆಹಾರ-ಔಷಧಿಗಳನ್ನು ಸರಬರಾಜು ಮಾಡಬೇಕೆಂಬ ಗೊತ್ತುವಳಿಯನ್ನು ಬೆಂಬಲಿಸುವುದಿಲ್ಲ? ಒಂದು ಕಡೆ ‘‘ಮಾನವೀಯತೆಯೇ ಕಟಕಟೆಯಲ್ಲಿರುವಾಗ, ಫೆಲೆಸ್ತೀನ್‌ನಲ್ಲಿ ನ್ಯಾಯ ಮತ್ತು ಶಾಂತಿಯನ್ನು ಆಗ್ರಹಿಸಿ ಗಟ್ಟಿಯಾದ ಧ್ವನಿಗಳು ಹುಟ್ಟಿ ಬರಬೇಕು’’ ಎಂದು ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಹೇಳುತ್ತಿದ್ದರೂ ಮತ್ತೊಂದು ಕಡೆ ಕರ್ನಾಟಕದ ಕಾಂಗ್ರೆಸ್ ಸರಕಾರ ನ್ಯಾಯದ ಪರವಾದ ಗಟ್ಟಿ ಧ್ವನಿಗಳಿರಲಿ, ಪಿಸುಮಾತುಗಳೂ ಕೇಳಿಸದಂತೆ ನಿರ್ಬಂಧಗಳನ್ನು ವಿಧಿಸಿ, ಮತ್ತೊಂದೆಡೆ ಇಸ್ರೇಲಿನ ಅನ್ಯಾಯದ ಧ್ವನಿಗಳು ಮೊಳಗಲು ಅವಕಾಶ ಕಲ್ಪಿಸುತ್ತಿರುವುದು ಏಕೆ?
ಕನ್ನಡದ ಬಹುಪಾಲು ಮಾಧ್ಯಮಗಳು ಫೆಲೆಸ್ತೀನ್ ಕಂದಮ್ಮಗಳ ನರಮೇಧವನ್ನು ಭಾವಿ ಉಗ್ರರ ನಿರ್ನಾಮವೆಂದು ಸಂಭ್ರಮಿಸುವಷ್ಟು ಹಾಗೂ ಬಹುಪಾಲು ಜನರು ಅದನ್ನೇ ಸತ್ಯವೆಂದು ನಂಬುವಷ್ಟು ಸಂವೇದನಾ ಶೂನ್ಯರಾಗಿರುವುದೇಕೆ?
ಹಾಗೆ ನೋಡಿದರೆ ಇಸ್ರೇಲ್-ಫೆಲೆಸ್ತೀನ್‌ನ ಸತ್ಯಗಳು ಅರ್ಥಮಾಡಿಕೊಳ್ಳಲು ಹೆಚ್ಚು ಕಷ್ಟಪಡಬೇಕಿಲ್ಲ. ಮುಕ್ತ ಹಾಗೂ ನ್ಯಾಯಪರ ಮನಸ್ಸಿರಬೇಕು ಅಷ್ಟೆ. ಇದಕ್ಕೆ ಜಗತ್ತಿನ ಪ್ರಖ್ಯಾತ ಯಹೂದಿ ಮತ್ತು ಇಸ್ರೇಲಿ ಇತಿಹಾಸಕಾರ ಇಲನ್ ಪಪ್ಪೆಯವರ ವಿದ್ವತ್ತಿನ ಪ್ರಯಾಣವೇ ಒಂದು ಉದಾಹರಣೆ. ಅವರು ತಮಗೆ ಈ ಸತ್ಯವು ಅರ್ಥವಾದ ಬಗೆಯನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಅವರು ಕೂಡ ಯಹೂದಿಗಳು ಫೆಲೆಸ್ತೀನ್‌ಗೆ ಬರುವ ಮುಂಚೆ ಅಲ್ಲಿ ಯಾರು ವಾಸಿಸುತ್ತಿರಲಿಲ್ಲ. ಹೀಗಾಗಿ ನಾಡಿಲ್ಲದ ಜನರಾದ ಯಹೂದಿಗಳು, ಜನರಿಲ್ಲದ ನಾಡಾಗಿದ್ದ ಫೆಲೆಸ್ತೀನ್‌ನಲ್ಲಿ ಇಸ್ರೇಲನ್ನು ಕಟ್ಟಿಕೊಂಡರು ಎಂಬ ಇಸ್ರೇಲಿನ ಅಧಿಕೃತ ಇತಿಹಾಸವನ್ನೇ ನಿಜವೆಂದು ನಂಬಿಕೊಂಡಿದ್ದರು. ಆದರೆ ಅವರು ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಇಸ್ರೇಲ್ ಬಹಿರಂಗಪಡಿಸಿದ ಅಧಿಕೃತ ದಾಖಲೆಗಳನ್ನು ಅಧ್ಯಯನ ಮಾಡುತ್ತಿರುವಾಗ ವಿಶ್ವಸಂಸ್ಥೆಯ ದಾಖಲೆಗಳ ಪ್ರಕಾರವೇ 1948ರಲ್ಲಿ ಮೂಲ ಫೆಲೆಸ್ತೀನ್‌ನ ಒಟ್ಟಾರೆ ಜನಸಂಖ್ಯೆ 18 ಲಕ್ಷ ಮತ್ತು ಅದರಲ್ಲಿ 12 ಲಕ್ಷ ಅರಬ್ ಫೆಲೆಸ್ತೀನಿಯನ್ನರು ಮತ್ತು 6 ಲಕ್ಷ ಮಾತ್ರ ಯಹೂದಿಗಳು ಎಂದಿದ್ದನ್ನು ಗಮನಿಸಿದರು ಹಾಗೂ ಇಸ್ರೇಲಿನ ಎಲ್ಲಾ ಅಧಿಕೃತ ದಾಖಲೆಗಳಲ್ಲೂ ಅದನ್ನೇ ಸ್ಪಷ್ಟಪಡಿಸಲಾಗಿತ್ತು.
ಆಗ ಪಪ್ಪೆ ಅವರಿಗೆ ಸಹಜವಾದ ಮತ್ತು ನ್ಯಾಯಯುತವಾದ ಒಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಹಾಗಿದ್ದಲ್ಲಿ ಯಹೂದಿಗಳು ಬಂದಾಗ ಫೆಲೆಸ್ತೀನ್ ಜನರಿಲ್ಲದ ನಾಡಾಗಿರಲಿಲ್ಲ ಎಂಬುದು ಸುಳ್ಳು. ಅಲ್ಲಿ ಫೆಲೆಸ್ತೀನಿಯರಿದ್ದರು. ಹಾಗಾದರೆ ಅವರೇನಾದರು? ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಅಧ್ಯಯನ ಪ್ರಾರಂಭಿಸುತ್ತಾರೆ ಹಾಗೂ ಹೇಗೆ 1947ರಿಂದಲೇ ಯಹೂದಿಗಳು ಫೆಲೆಸ್ತೀನಿಯರನ್ನು ಹೊಡೆದೋಡಿಸಿ ಸಂಪೂರ್ಣ ಯಹೂದಿಗಳ ರಾಷ್ಟ್ರ ಕಟ್ಟುವ ನೆಲಸಿಗ ವಸಾಹತುಶಾಹಿ ಧೋರಣೆಯನ್ನು ಹೊಂದಿದ್ದರು ಎಂಬುದನ್ನು ಮನಗಾಣುತ್ತಾರೆ. ಹಾಗೂ 2005ರಲ್ಲಿ ಅದರ ಬಗ್ಗೆ ‘ಖಿhe ಇಣhಟಿiಛಿ ಅಟeಚಿಟಿsiಟಿg oಜಿ Pಚಿಟesಣiಟಿe’ ಎಂಬ ಅತ್ಯಂತ ಮಹತ್ವದ ಪುಸ್ತಕವನ್ನು ಬರೆಯುತ್ತಾರೆ. ಮಾತ್ರವಲ್ಲ ಇಸ್ರೇಲಿನ ವಿಶ್ವವಿದ್ಯಾನಿಲಯದಿಂದ ಹೊರಹಾಕಲ್ಪಟ್ಟರೂ, ಈಗ ಬ್ರಿಟನ್‌ನ ಎಕ್ಸಿಟರ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಆಗಿರುವುದಲ್ಲದೆ ಫೆಲೆಸ್ತೀನ್ ಸಾಲಿಡಾರಿಟಿ ಸಮಿತಿಯ ಅತ್ಯಂತ ಸಕ್ರಿಯ ಸದಸ್ಯರೂ ಆಗಿದ್ದಾರೆ. ಜಗತ್ತಿನ ಪ್ರಖ್ಯಾತ ಯಹೂದಿ ವಿದ್ವಾಂಸ ನೋಮ್ ಚಾಮ್ಸ್ಕಿ ಮತ್ತೊಂದು ಪ್ರಖ್ಯಾತ ಉದಾಹರಣೆ. ಇಂಥ ಹಲವಾರು ಉದಾಹರಣೆಗಳಿವೆ.
ಆದರೂ ಬಹುಪಾಲು ಜಗತ್ತು ತನ್ನ ಕಣ್ಣೆದುರಿಗೇ ಸ್ಪಷ್ಟವಾಗಿ ಕಾಣುವ ಸತ್ಯ ಮತ್ತು ನ್ಯಾಯಗಳನ್ನು ನಿರಾಕರಿಸುತ್ತಿರುವುದೇಕೆ? ಇದಕ್ಕೆ ಕೆಲವು ಗಂಭೀರವಾದ ಕಾರಣಗಳಿವೆ.
ಕಳೆದ ಕೆಲವು ದಶಕಗಳಿಂದ ಒಟ್ಟಾರೆ ಜಗತ್ತು ದ್ವೇಷ ರಾಜಕಾರಣದ ಬಲಪಂಥೀಯತೆಯ ಕಡೆಗೆ ಸರಿಯುತ್ತಾ ನ್ಯಾಯಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವುದು ಅದರಲ್ಲಿ ತುಂಬಾ ಮುಖ್ಯವಾದದ್ದು. ಅಸತ್ಯಗಳು ಸತ್ಯದ ರೂಪವನ್ನು ಧರಿಸಿ, ಅನ್ಯಾಯಗಳು ನ್ಯಾಯದ ವೇಷವನ್ನು ಧರಿಸಿ, ಬೇಟೆಗಾರರೇ ಬಲಿಪಶುಗಳ ಮುಖವಾಡ ಹಾಕಿಕೊಂಡಿರುವುದು ಕೂಡ ಇದಕ್ಕೆ ಮುಖ್ಯ ಕಾರಣ. ಇದು ದುರ್ಬಲರ ಬಗ್ಗೆ, ಅಸಹಾಯಕರ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಸಹಾನುಭೂತಿಯ ಬದಲಿಗೆ ಅಸಹನೆ ಹಾಗೂಪೂರ್ವಗ್ರಹಗಳನ್ನು ಬೆಳೆಸುತ್ತಿದೆ. ಇದರ ಜೊತೆಗೆ ವಿಷಯದ ಬಗ್ಗೆ ಜನರ ಅಜ್ಞಾನ ಮತ್ತು ಪೂರ್ವಗ್ರಹಗಳನ್ನು ಬಳಸಿಕೊಂಡು ಬಲಿಪಶುಗಳನ್ನೇ ಬೇಟೆಗಾರರೆಂದು ಬಣ್ಣಿಸುವ ಪ್ರಚಾರವನ್ನು ಕಾರ್ಪೊರೇಟ್ ಮಾಧ್ಯಮಗಳು ಬಹಳ ಯಶಸ್ವಿಯಾಗಿ ಮಾಡುತ್ತಾ ಬಂದಿವೆ. ಇದು ಕೂಡ ಕ್ರೌರ್ಯವನ್ನು ಸಮರ್ಥಿಸುವ ಮನಸ್ಸತ್ವವನ್ನು ಹುಟ್ಟಿಹಾಕಿದೆ.
ಇಸ್ರೇಲ್-ಫೆಲೆಸ್ತೀನ್ ವಿಷಯದಲ್ಲೂ ಸಂಘರ್ಷದ ಇತಿಹಾಸ ಪ್ರಾರಂಭವಾಗಿದ್ದೇ ಅಕ್ಟೋಬರ್ 7ರಂದು ಫೆಲೆಸ್ತೀನ್‌ನ ಹಮಾಸ್ ಎಂಬ ಸಂಘಟನೆ ಇಸ್ರೇಲಿನ ನಿರಾಯುಧ ನಾಗರಿಕರ ಮೇಲೆ ಮಾಡಿದ ಬರ್ಬರ ದಾಳಿಯಿಂದ ಎಂಬಂತೆ ಮಾಧ್ಯಮಗಳು ಹಾಗೂ ಬಹುಪಾಲು ಬಲಪಂಥೀಯ ಸರಕಾರಗಳು ಚಿತ್ರಿಸುತ್ತಿವೆ.
ಆದರೆ ವಿಶ್ವಸಂಸ್ಥೆಯ ಕಾರ್ಯದರ್ಶಿ ಗುಟೆರಸ್ ಅವರೇ ಹೇಳಿದಂತೆ ದಾಳಿ ಎಷ್ಟೇ ಖಂಡನೀಯವಾದರೂ, ಯಾವ ಕಾರಣಕ್ಕೂ ಸಮರ್ಥನೀಯವಲ್ಲ ವಾದರೂ ದಿಢೀರನೇ ನಡೆದಿದ್ದಲ್ಲ. ಅದರ ಹಿಂದೆ ಕಳೆದ 75 ವರ್ಷಗಳಿಂದ ಇಸ್ರೇಲ್ ಫೆಲೆಸ್ತೀನಿಯನ್ನರ ಮೇಲೆ ನಡೆಸುತ್ತಿರುವ ಹಾಗೂ ಈಗಲೂ ಮುಂದುವರಿದಿರುವ ವಸಾಹತುಶಾಹಿ ದಬ್ಬಾಳಿಕೆ, ದೌರ್ಜನ್ಯ, ನರಮೇಧ ಹಾಗೂ ಜನಾಂಗೀಯ ನಿರ್ಮೂಲನೆಯ ಇತಿಹಾಸವಿದೆ. ಫೆಲೆಸ್ತೀನಿಯನ್ನರ ಜೊತೆ ಕೂಡಿ ಬಾಳುವ ಯಾವ ಒಪ್ಪಂದಗಳಿಗೂ ತಯಾರಿರದ, ಇಡೀ ಫೆಲೆಸ್ತೀನಿ ಜನರನ್ನು ಅವರ ನೆಲೆಯಿಂದ ಹೊರಹಾಕಿ ಇಡೀ ಭೂಭಾಗವನ್ನು ಇಸ್ರೇಲೀಕರಿಸುವ ಅತ್ಯುಗ್ರ ಜಿಯೋನಿಸ್ಟ್ ಜನಾಂಗೀಯವಾದಿ ಕುತಂತ್ರವಿದೆ.
ಅದು ಗಾಝಾದ ಮೇಲೆ ಈಗ ನಡೆಸುತ್ತಿರುವ ವಿಧ್ವಂಸಕ ದಾಳಿಯ ಹಿಂದೆಯೂ ಗಾಝಾ ಪ್ರದೇಶದಲ್ಲಿ ವಾಸಿಸುತ್ತಿರುವ 23 ಲಕ್ಷ ಫೆಲೆಸ್ತೀನಿಯರನ್ನು ದಕ್ಷಿಣಕ್ಕೆ ದೂಡುತ್ತಾ ಅಂತಿಮವಾಗಿ ಈಜಿಪ್ಟಿಗೆ ಹೊರದಬ್ಬುವ ವ್ಯೆಹತಂತ್ರ ಇರುವುದನ್ನು ಸ್ವತಃ ಇಸ್ರೇಲಿನ ಬೇಹುಗಾರಿಕಾ ಮಂತ್ರಿಯೇ ಬಹಿರಂಗಪಡಿಸಿದ್ದಾರೆ. ಹೀಗಾಗಿ ಇಸ್ರೇಲ್ ನಡೆಸುತ್ತಿರುವುದು ಆತ್ಮರಕ್ಷಣಾ ಯುದ್ಧವಲ್ಲ.
ಅಸಲಿಗೆ ಇದು ಯುದ್ಧವೇ ಅಲ್ಲ. ಏಕೆಂದರೆ ಯುದ್ಧ ನಡೆಯುವುದು ಎರಡು ದೇಶಗಳ ನಡುವೆ. ಆದರೆ ಇಸ್ರೇಲ್ ಫೆಲೆಸ್ತೀನಿಯರನ್ನು ತಮ್ಮ ದೇಶದಲ್ಲೇ ನಿರಾಶ್ರಿತರನ್ನಾಗಿಸಿ ಈಗ ಆ ನಿರಾಯುಧ, ನಿಸ್ಸಹಾಯಕ ಜನತೆಯ ಮೇಲೆ ನಿರಂತರ ದಾಳಿ ನಡೆಸುತ್ತಾ ಅದನ್ನು ಆತ್ಮ ರಕ್ಷಣಾ ಯುದ್ಧವೆಂದು ಸಮರ್ಥಿಸಿಕೊಳ್ಳುತ್ತಿದೆ.
ಆದರೆ ಇದು ವಸಾಹತುಶಾಹಿ ದೇಶವೊಂದು ನಿರಾಶ್ರಿತ ಜನರ ಮೇಲೆ ನಡೆಸುತ್ತಿರುವ ಬರ್ಬರ ಆಕ್ರಮಣ. ಅದಕ್ಕೆ ಹಮಾಸ್ ಮಾಡಿದ ದಾಳಿ ಕೇವಲ ಒಂದು ನೆಪ. ಏಕೆಂದರೆ ಹಮಾಸ್ ಸಂಘಟನೆ ಅಸ್ತಿತ್ವಕ್ಕೆ ಬಂದಿದ್ದೇ 1987ರಲ್ಲಿ. ಆದರೆ 1948ರಲ್ಲಿ ಇಸ್ರೇಲ್ ರಾಷ್ಟ್ರ ಘೋಷಣೆಯಾದಾಗಿನಿಂದಲೂ ಇಸ್ರೇಲ್ ಫೆಲೆಸ್ತೀನಿಯರನ್ನು ತಮ್ಮ ನಾಡಿನಿಂದ ಹೊರದೂಡಲು ಒಂದಲ್ಲ ಒಂದು ನೆಪಹೂಡಿ ಜನಾಂಗೀಯ ನಿರ್ಮೂಲನ ನರಮೇಧ ನಡೆಸುತ್ತಾ ಬಂದಿದೆ. ಹೀಗಾಗಿ ಫೆಲೆಸ್ತೀನಿಯರು ನಡೆಸುತ್ತಿರುವುದು ವಸಾಹತುಶಾಹಿ ವಿರೋಧಿ ಸ್ವಾತಂತ್ರ್ಯ ಹೋರಾಟವೇ ಆಗಿದೆ.
ವಿಪರ್ಯಾಸವೆಂದರೆ ಇಂದು ಇಸ್ರೇಲಿನ ಯಹೂದಿ ಜಿಯೋನಿಸ್ಟ್ ಸರಕಾರ ಫೆಲೆಸ್ತೀನಿಯರ ಮೇಲೆ ಯಾವ ನರಮೇಧವನ್ನು ಮಾಡುತ್ತಿದೆಯೋ, ಅದೇ ಬಗೆಯ ನರಮೇಧ ಮತ್ತು ದೌರ್ಜನ್ಯಗಳಿಗೆ ಯಹೂದಿಗಳು 19 ಮತ್ತು 20ನೇ ಶತಮಾನದಲ್ಲಿ ಗುರಿಯಾಗಿದ್ದರು. ಅದರಿಂದ ಬಚಾವಾಗಬೇಕೆಂಬ ಉದ್ದೇಶದಿಂದಲೇ ಒಂದು ಇಸ್ರೇಲನ್ನು ಕಟ್ಟಿಕೊಳ್ಳಬೇಕೆಂಬ ತೀರ್ಮಾನಕ್ಕೆ ಬಂದರು. ಮೊದಲು ಉಗಾಂಡಾ, ಅಮೆರಿಕ ಅಥವಾ ಮೆಡಗಾಸ್ಕರ್ ಅವರ ಆಯ್ಕೆಯಾಗಿತ್ತು. ಆದರೆ ಐತಿಹಾಸಿಕ ಹಾಗೂ ಧಾರ್ಮಿಕ ಕಾರಣಗಳಿಗೆ ಜೆರುಸುಲೇಮ್ ಮತ್ತು ಬೆತ್ಲೆೆಹೇಮ್‌ಗಳಿರುವ ಫೆಲೆಸ್ತೀನ್ ಅನ್ನು ಆಯ್ಕೆ ಮಾಡಿಕೊಂಡರು. ಆದರೆ ಇಲ್ಲಿ ಈಗಾಗಲೇ ವಾಸವಾಗಿದ್ದ ಫೆಲೆಸ್ತೀನಿಯನ್ನರ ಜೊತೆ ಹಂಚಿಕೊಂಡು ಬಾಳುವ ಇರಾದೆ ತೋರದೆ ಮೊದಲು ಬ್ರಿಟಿಷ್ ವಸಾಹತುಶಾಹಿಗಳ ಹಾಗೂ ಆ ನಂತರ ಅಮೆರಿಕ ನವ ವಸಾಹತುಶಾಹಿಯ ಬೆಂಬಲದೊಂದಿಗೆ ಮೂಲನಿವಾಸಿ ಫೆಲೆಸ್ತೀನಿಯರನ್ನು ಹೊರಹಾಕಿ ನೆಲಸುವ ನೆಲಸಿಗ ವಸಾಹತುಶಾಹಿಗಳಾಗಿಬಿಟ್ಟರು.
ನೆಲಸಿಗ ವಸಾಹತುಶಾಹಿಯ (Seಣಣಟeಡಿ ಛಿoಟoಟಿiಚಿಟism) ಅಸ್ತಿತ್ವದ ತರ್ಕವೇ ಮೂಲನಿವಾಸಿಗಳ ಸಂಪೂರ್ಣ ನಿರ್ಮೂಲನೆಯನ್ನು ಆಧರಿಸಿರುತ್ತದೆ. ಅದಕ್ಕೆ ಪೂರಕವಾಗಿ ಮೂಲನಿವಾಸಿಗಳ ಅಸ್ತಿತ್ವವನ್ನೇ ನಿರಾಕರಿಸುವ, ನಗಣ್ಯಗೊಳಿಸುವ ಮಾರ್ಗಗಳನ್ನು ಅನುಸರಿಸುತ್ತದೆ. ಯುರೋಪಿನ ಬಿಳಿಯರು ಅಮೆರಿಕ, ಕೆನಡಾ, ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್‌ಗಳಲ್ಲಿ ಸ್ಥಳೀಯ ಮೂಲನಿವಾಸಿಗಳ ನಿರ್ಮೂಲನ ಮಾಡಿದಂತೆ ಇಂದು ಇಸ್ರೇಲ್ ಅದೇ ರಾಷ್ಟ್ರಗಳ ಬೆಂಬಲದೊಂದಿಗೆ ಫೆಲೆಸ್ತೀನಿಯನ್ನರ ಅಸ್ತಿತ್ವ, ಇತಿಹಾಸಗಳನ್ನು ಭೌತಿಕವಾಗಿಯೇ ನಿರ್ಮೂಲನ ಮಾಡುತ್ತಿದೆ.
ಇಸ್ರೇಲಿನ ಈ ನೆಲಸಿಗ ವಸಾಹತುಶಾಹಿ ಅನ್ಯಾಯಗಳು, ನರಮೇಧಗಳು, ಅದರ ಜನಾಂಗೀಯ ನಿರ್ಮೂಲನ ಆಕ್ರಮಣಗಳು ಜನಮಾನಸದ ಹಾಗೂ ಜಗತ್ತಿನ ಕಣ್ಣಿಗೆ ಕಾಣದಂತೆ ಕಬ್ಬಿಣದ ಗೋಡೆಯನ್ನು ಕಟ್ಟಿದೆ.
ಎಲ್ಲಿಯತನಕ ಈ ಕಬ್ಬಿಣದ ಗೋಡೆಯನ್ನು ಕೆಡವಿ, ಅಲ್ಲಿ ನಡೆಯುತ್ತಿರುವ ನರಮೇಧ, ಜನಾಂಗೀಯ ನಿರ್ಮೂಲನವು ಜನರ ಅರಿವಿಗೆ ಬರುವುದಿಲ್ಲವೋ ಅಲ್ಲಿಯತನಕ ಈ ಅನ್ಯಾಯಕ್ಕೆ ಜಾಗತಿಕ ಮನ್ನಣೆ ಮುಂದುವರಿಯುತ್ತದೆ. ಆದ್ದರಿಂದ ಇಂದು ಈ ಅನ್ಯಾಯ ನಿಲ್ಲಬೇಕೆಂದರೆ ಅಸತ್ಯದ ಕಬ್ಬಿಣದ ಗೋಡೆಯನ್ನು ಕೆಡವಿ ಜಗತ್ತಿಗೆ ಸತ್ಯದರ್ಶನವನ್ನು ಮಾಡಿಸಬೇಕಿದೆ.
ಕರ್ನಾಟಕದಲ್ಲಂತೂ ಅದರ ಅಗತ್ಯ ಹಿಂದೆಂದಿಗಿಂತ ಹೆಚ್ಚಿನದಾಗಿದೆ.ಕನ್ನಡದಲ್ಲಿ ಫೆಲೆಸ್ತೀನಿನ ನೈಜ ಇತಿಹಾಸವನ್ನು, ಸಮಸ್ಯೆ ಮತ್ತು ಪರಿಹಾರಗಳನ್ನು ಒಂದು ಜನಪರ ಐತಿಹಾಸಿಕ ದೃಷ್ಟಿಕೋನದಲ್ಲಿ ಪರಿಚಯಿಸುವ ಪುಸ್ತಕಗಳು ತುಂಬಾ ಕಡಿಮೆ.
ಆದರೆ ಈ ಪುಸ್ತಕ ಆ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡುತ್ತದೆ. ನಾಡಿನ ಹಿರಿಯ ಸತ್ಯವಾದಿ ಮತ್ತು ಸಮತಾವಾದಿ ಚಿಂತಕರು ಹಾಗೂ ಮಾಧ್ಯಮ ಪ್ರಮುಖರೂ ಆಗಿರುವ ಎ.ಎಸ್.ಪುತ್ತಿಗೆಯವರು ಬರೆದಿರುವ ‘ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?’ ಎಂಬ ಈ ಅತ್ಯಂತ ಮಹತ್ವದ ಪುಸ್ತಕ ತುಂಬಾ ಹಿಂದೆಯೇ ಕನ್ನಡ ಓದುಗರಿಗೆ ಸಿಗಬೇಕಿತ್ತು.
ಈ ಪುಸ್ತಕವನ್ನು ಪುತ್ತಿಗೆಯವರು ತಮ್ಮ ಅಪಾರ ಓದು, ಗ್ರಹಿಕೆ ಹಾಗೂ ಸತ್ಯಗಳನ್ನು ಆಧರಿಸಿ, ವಿಶ್ಲೇಷಣೆ ಮತ್ತು ನ್ಯಾಯಪ್ರಜ್ಞೆಯಿಂದ ಬರೆದಿದ್ದಾರೆ. ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ ಆಳ-ಅಗಲಗಳು ಅತ್ಯಂತ ಸರಳವಾಗಿ ಈ ಪುಸ್ತಕದಲ್ಲಿ ಓದುಗರಿಗೆ ದಕ್ಕುತ್ತವೆ. ಪುಸ್ತಕದುದ್ದಕ್ಕೂ ಹರಿದಿರುವ ವಸ್ತುನಿಷ್ಠ, ನಿಷ್ಪಕ್ಷಪಾತಿ ಹಾಗೂ ನ್ಯಾಯಪ್ರಜ್ಞೆಯ ನೋಟಗಳು ಕನ್ನಡದ ಓದುಗರಿಗೆ ಕಾರ್ಪೊರೇಟ್ ಮಾಧ್ಯಮಗಳ ಹಾಗೂ ಬಲಪಂಥೀಯರ ಪ್ರಚಾರಗಳ ಟೊಳ್ಳುತನವನ್ನು ಹಾಗೂ ಪೂರ್ವಗ್ರಹವನ್ನು ಅರಿಯಲು ಸುಲಭವಾಗಿ ಸಹಾಯ ಮಾಡುತ್ತದೆ.
ಇದು 2021ರಲ್ಲಿ ಪುತ್ತಿಗೆಯವರು ‘ವಾರ್ತಾಭಾರತಿ’ ದಿನಪತ್ರಿಕೆಗೆ ‘ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?’ ಎಂದು ಬರೆದ 25 ಕಂತುಗಳ ಸರಣಿ ಬರಹದ ಪುಸ್ತಕ ರೂಪ. ಪ್ರತಿಯೊಂದು ಕಂತುಗಳು ಸಮಸ್ಯೆಯ ಒಂದೊಂದು ಆಯಾಮವನ್ನು ಆಳವಾಗಿ ವಿಶ್ಲೇಷಿಸುತ್ತದೆ. ಹಾಗೂ ಐತಿಹಾಸಿಕ ಅನುಕ್ರಮಣಿಕೆಯಲ್ಲಿರುವುದರಿಂದ ಆ 25 ಕಂತುಗಳು ಈ ಪುಸ್ತಕದ ಸಹಜ 25 ಅಧ್ಯಾಯಗಳಾಗಿವೆ.
ಇಸ್ರೇಲಿನ ಸೃಷ್ಟಿಯ ಹಿಂದಿನ ಜಾಗತಿಕ ನೇಪಥ್ಯ, ಅದರ ಹಿಂದಿನ ಶಕ್ತ ರಾಷ್ಟ್ರಗಳ ಕೈವಾಡ, 1948ರಲ್ಲಿ ಇಸ್ರೇಲ್ ಸೃಷ್ಟಿಯಾದಾಗಿನಿಂದ ಪ್ರಾರಂಭವಾದ ನಕ್ಬಾ-ಜನಾಂಗೀಯ ಎತ್ತಂಗಡಿ, 1967ರ ಯುದ್ಧದ ನಂತರ ಇಸ್ರೇಲ್‌ನ ಆಕ್ರಮಣದಡಿಯಲ್ಲಿರುವ ಫೆಲೆಸ್ತೀನ್‌ನ ಬದುಕು, ಇಸ್ರೇಲ್ ಬೆಂಬಲಕ್ಕೆ ನಿಂತಿರುವ ಶಕ್ತ ರಾಷ್ಟ್ರಗಳ ಜಿಯೋ-ಪೊಲಿಟಿಕಲ್ ರಾಜಕಾರಣ, ಸ್ವಾರ್ಥ ಹಿತಾಸಕ್ತಿ ಮತ್ತು ದಾಯಾದಿ ದ್ವೇಷಗಳಿಂದ ಫೆಲೆಸ್ತೀನನ್ನು ಕೈಬಿಟ್ಟ ಅರಬ್ ದೇಶಗಳ ಸರ್ವಾಧಿಕಾರಿ ಸರಕಾರಗಳು, ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ವರ್ಣಭೇದ ಮತ್ತು ನರಮೇಧದ ವಿರುದ್ಧ ಹುಟ್ಟಿಕೊಂಡ ಪಿಎಲ್‌ಒ, ಹಮಾಸ್‌ನಂತಹ ಸಂಘಟನೆಗಳ ಏಳುಬೀಳುಗಳು ಮತ್ತು ಮಿತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ಓದುಗರ ಮುಂದಿಡುವ ಪುತ್ತಿಗೆಯವರು ಅಂತಿಮವಾಗಿ ಇಂದು ಫೆಲೆಸ್ತೀನಿನ ಜನರ ಪರಿಸ್ಥಿತಿ ಹಾಗೂ ಸಮಸ್ಯೆಯ ಪರಿಹಾರಕ್ಕೆ ಇರುವ ಆಶಾವಾದಗಳ ನೆಲೆಗಳನ್ನು ಸ್ಪಷ್ಟವಾಗಿ ಗುರುತಿಸುತ್ತಾರೆ.
ಹೀಗೆ ಈ ಪುಸ್ತಕ ಇಸ್ರೇಲ್-ಫೆಲೆಸ್ತೀನ್ ಸಂಘರ್ಷದ 360 ಡಿಗ್ರಿ ಚಿತ್ರಣವನ್ನು ಮತ್ತು ನ್ಯಾಯೋಚಿತ ಪರಿಹಾರವನ್ನು ಅತ್ಯಂತ ಸರಳವಾಗಿ ಸಮೃದ್ಧ ಮಾಹಿತಿಗಳೊಂದಿಗೆ ಮುಂದಿಡುತ್ತದೆ.
ಈ ಪುಸ್ತಕ ಮೊದಲೇ ಬಂದಿದ್ದರೆ ಈ ವಿಷಯದ ಬಗ್ಗೆ ರಾಜ್ಯದ ಶಿಕ್ಷಿತರಲ್ಲೂ ಇರುವ ಅಜ್ಞಾನ ಮತ್ತು ಪೂರ್ವಗ್ರಹಗಳು ಸ್ವಲ್ಪ ಮಟ್ಟಿಗೆಯಾದರೂ ಕಡಿಮೆಯಾಗುತ್ತಿತ್ತು. ಹಾಗೂ ಕಳೆದ ಒಂದು ತಿಂಗಳಿಂದ ನಮ್ಮ ಕಣ್ಣೆದುರಿಗೇ ಇಸ್ರೇಲ್ ಫೆಲೆಸ್ತೀನ್ ಮೇಲೆ ನಡೆಸುತ್ತಿರುವ ಅಮಾನುಷ ನರಮೇಧದ ಬಗ್ಗೆ ಈ ರಾಜ್ಯದಲ್ಲಿ ಇಷ್ಟು ಮೌನ ಇರುತ್ತಿರಲಿಲ್ಲವೇನೋ?
ಕನ್ನಡದ ಓದುಗರು ಈ ಅತ್ಯಂತ ಅಗತ್ಯವಾಗಿದ್ದ ಹಾಗೂ ಮಹತ್ವದ ಪುಸ್ತಕವನ್ನು ಆಸ್ಥೆಯಿಂದ ಬರಮಾಡಿಕೊಳ್ಳುತ್ತಾರೆ ಹಾಗೂ ನ್ಯಾಯದ ಪರವಾಗಿ ನಿಲ್ಲುತ್ತಾರೆ ಎಂಬ ಭರವಸೆಯೊಂದಿಗೆ...
(ಮಾಧ್ಯಮ ಪ್ರಕಾಶನ ಪ್ರಕಟಿಸಿದ ಎ.ಎಸ್. ಪುತ್ತಿಗೆಯವರ
‘ಫೆಲೆಸ್ತೀನ್‌ನಲ್ಲಿ ನಡೆಯುತ್ತಿರುವುದೇನು?’ ಪುಸ್ತಕ ಪ್ರತಿಗಾಗಿ ಸಂಪರ್ಕಿಸಿ: 8867678549. ಬೆಲೆ: ರೂ. 230)