ಹಸಿವೆಂಬ ಹೆಬ್ಬಾವು ನುಂಗುವ ಮುನ್ನ ...

Update: 2024-07-01 04:57 GMT

ಹಸಿವಿನಿಂದ ಸತ್ತೋರು

ಸೈಜುಗಲ್ಲು ಹೊತ್ತೋರು

ಒದೆಸಿಕೊಂಡು ವರಗಿದೋರು ನನ್ನ ಜನಗಳು ...

ಕವಿ ಸಿದ್ದಲಿಂಗಯ್ಯನವರ ಈ ಸಾಲುಗಳು ಕೇಳಿ ಬರೆದಿದ್ದಲ್ಲ, ಆನಂದಕ್ಕೆ ಬರೆದಿದ್ದಲ್ಲ, ಅನುಭವಿಸಿ ಬರೆದಿದ್ದು. ಈ ನನ್ನ ಜನರು ಹಸಿವು ಮತ್ತು ಅಸ್ಪೃಶ್ಯತೆಯ ಅಪಾರ ನೋವು ಮತ್ತು ಸಂಕಟವನ್ನು ಅನುಭವಿಸಿದವರು ಎಂಬ ಅನುಭವ ಕವಿಯ ಈ ಬರವಣಿಗೆಗೆ ಕಾರಣವಾಯಿತು. 70 ರ ದಶಕದಲ್ಲಿ ಈ ಸಾಲುಗಳು ಶೋಷಿತರ ಎದೆಯ ದನಿಯಾಗಿದ್ದವು. ಅದೇ ಸಂದರ್ಭದಲ್ಲಿ ‘ಗರಿಬೀ ಹಠಾವೋ’ ಮತ್ತು 20 ಅಂಶಗಳ ಕಾರ್ಯಕ್ರಮ ಕೂಡಾ ಜಾರಿಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಹಸಿವಿನ ತೀವ್ರತೆಯನ್ನು ಕಾಂಗ್ರೆಸ್ ಪಕ್ಷ ಆ ಹೊತ್ತಿಗೆ ಮನಗಂಡಿದ್ದರೆ ಅವತ್ತೆ ಆಹಾರ ಭದ್ರತೆಯ ಕಾನೂನು ಜಾರಿ ಮಾಡಿ ಕೋಟ್ಯಂತರ ಬಡವರಿಗೆ ಅನ್ನ ಭಾಗ್ಯ ನೀಡಬಹುದಿತ್ತು. ತುಂಬಾ ತಡವಾಗಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ಇದರ ತೀವ್ರತೆ ಅರ್ಥವಾಗಿ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಆಹಾರ ಭದ್ರತೆ ಕಾನೂನನ್ನು ಜಾರಿ ಮಾಡಿತು. ಆ ಮೂಲಕವೇ ಅನ್ನ ಭಾಗ್ಯ ದೇಶಾದ್ಯಂತ ಜಾರಿಯಾಗುವಂತಾಯಿತು. ಆನಂತರ ಅಧಿಕಾರಕ್ಕೆ ಬಂದ ಬಿಜೆಪಿ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮುಂದುವರಿಸಿತು. ಹಾಗೆಯೇ ಕರ್ನಾಟಕದಲ್ಲಿ ಕೂಡಾ ಅದು ಜಾರಿಯಾಗಿದೆ. ಇದು ಜಾರಿಯಾದಾಗ ಅನೇಕರ ಹೊಟ್ಟೆ ಮತ್ತು ಕಣ್ಣು ಉರಿಯತೊಡಗಿದವು, ಈಗಲೂ ಉರಿಯುತ್ತಿವೆ. ಹೀಗೆ ಉರಿ ಅನುಭವಿಸುವವರನ್ನ್ನು ನಾವು ಉತ್ತಮಜಾತಿಯವರು, ಸವರ್ಣೀಯರು, ಮೇಲ್ವರ್ಗದವರು ಎಂದು ಸಂಬೋಧಿಸುತ್ತೇವೆ. ಅತಿ ಹೆಚ್ಚು ಬಡವರು ಮತ್ತು ಹಸಿವಿನಿಂದ ನರಳುತ್ತಿದ್ದವರು, ನರಳುತ್ತಿರುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು.

ನಾವು ಹಸಿವನ್ನೂ ಸಹಿಸಿ, ಘೋರವಾದ ಅಸ್ಪೃಶ್ಯತೆಯಿಂದ ಮೈತುಂಬಾ ಆದ ಗಾಯಗಳನ್ನು ಅನುಭವಿಸಿ ಈಗಲೂ ಕಲ್ಲುಬಂಡೆಗಳ ಹಾಗೆ ಸಹನೆಯಿಂದ ಬದುಕುತ್ತಿದ್ದೇವೆ. ಹಸಿವನ್ನು ಎಷ್ಟು ತೀವ್ರವಾಗಿ ನಾವೆಲ್ಲಾ ಅನುಭವಿಸಿದ್ದೇವೆ ಎನ್ನುವುದಕ್ಕೆ ನನ್ನದೊಂದು ಪುಟ್ಟ ಘಟನೆಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ.

ಆಗ 70ರ ದಶಕ. ಐದು ಅಥವಾ ಆರನೇ ತರಗತಿಯಲ್ಲಿ ನಾನು ಓದುತ್ತಿದ್ದೆ. ಶಾಲೆಯಲ್ಲಿದ್ದರೆ ಮಧ್ಯಾಹ್ನಕ್ಕೆ ಒಂದಿಷ್ಟು ಉಪ್ಪಿಟ್ಟು ಸಿಗುತ್ತಿತ್ತು. ಬೇಸಿಗೆ ರಜೆಯಲ್ಲಂತೂ ಮಧ್ಯಾಹ್ನಕ್ಕೆ ಹೊಟ್ಟೆ ತುಂಬ ನೀರೇ ಗತಿ. ನಮ್ಮ ಮನೆಗಳಲ್ಲಿ ಎರಡು ಪಾವು ಅಕ್ಕಿ ಹಾಕಿದರೆ ಅದು ಬೆಳಗ್ಗೆಗೂ ಮಧ್ಯಾಹ್ನಕ್ಕೂ ಗಂಜಿ ಅನ್ನ. ಅವ್ವ,ಅಪ್ಪ, ಅಕ್ಕ ಕೂಲಿಗೆ ಹೋದರೆ ಮಂಜಣ್ಣ(ಪೋಲಿಯೊ ಪೀಡಿತ) ಮತ್ತು ನಾನು ಇಬ್ಬರೇ ಇರುತ್ತಿದ್ದೆವು. ರಜಾ ದಿನವಾದ್ದರಿಂದ ನನ್ನ ಚಿಕ್ಕಮ್ಮನ ಮಗಳು ನಮ್ಮ ಮನೆಗೆ ಬಂದಿದ್ದಳು. ಬೆಳಗ್ಗೆ ಹೊತ್ತಿನಲ್ಲೇ ಎಲ್ಲರು ಅನ್ನವನ್ನೇ ಗೋರಿಕೊಂಡು ಊಟಮಾಡಿದ್ದರಿಂದ ಮಧ್ಯಾಹ್ನಕ್ಕೆ ಖಾಲಿಗಂಜಿ ನೀರು ಮಾತ್ರ ಉಳಿದಿರುತ್ತಿತ್ತು. ನಾನು, ಪೋಲಿಯೊದಿಂದ ನರಳುತ್ತ್ತಿದ್ದ ನಮ್ಮ ಅಣ್ಣನೂ ಸೇರಿ ಮೂರು ಜನಕ್ಕೆ ಆ ಗಂಜಿಯೇ ಮಧ್ಯಾಹ್ನದ ಊಟ. ಬೆಳಗ್ಗೆ ಊಟಮಾಡಿ ಹೋದವನು ಮಧ್ಯಾಹ್ನ ಹೊಟ್ಟೆ ಹಸಿದ ಮೇಲೆ ಮನೆಕಡೆ ಬರುತ್ತಿದ್ದೆ. ನಾನು ಬರುವ ಹೊತ್ತಿಗೆ ನನ್ನ ಚಿಕ್ಕಮ್ಮನ ಮಗಳು ಗಂಜಿಯನ್ನು ಹಾಕಿಕೊಂಡು ಊಟ ಮಾಡುತ್ತಿದ್ದಳು. ಹಸಿದು ಬಂದ ನಾನು ಸಿಟ್ಟಿನಲ್ಲಿ ನನಗೆ ಉಳಿಸದೆ ಊಟ ಮಾಡುತ್ತಿಯಾ? ಎಂದು ಅವಳ ಬೆನ್ನಿಗೆ ಗುದ್ದಿದೆ, ಅವಳು ಅಳುತ್ತಲೇ ‘‘ಅಣ್ಣ ಬರೀ ಗಂಜಿ ನೀರು ಇರದು, ಅನ್ನ ಇಲ್ಲ’’ ಎಂದು ಪರಿತಪಿಸಿದಳು. ‘‘ನೋಡು ಬೇಕಾದರೆ, ಗಂಗಳದಲ್ಲಿ ಒಂದು ಅಗುಳು ಅನ್ನ ಇಲ’’್ಲ ಎಂದು ತೋರಿಸಿದಳು. ನಾನು ಮಡಿಕೆಯಲ್ಲ್ ಹೋಗಿ ನೋಡಿದೆ. ಅಲ್ಲಿ ಬರಿ ಗಂಜಿ ನೀರೇ ಇತ್ತು. ಆಗ ನನ್ನ ಚಿಕ್ಕಮ್ಮನ ಮಗಳು ದೊಡ್ಡು ಒಳಕ್ಕೆ ಬಂದು ‘‘ನಾನು ಇನ್ನೂ ಒಂದು ಗುಟುಕು ಗಂಜಿಯನ್ನೂ ಕುಡಿದಿಲ್ಲ. ಬೇಕಾದರೆ ನೀನೇ ಕುಡಿ, ನಾನು ಕುಡಿಯುವುದಿಲ್ಲ’’ ಎಂದು ತಟ್ಟೆಯನ್ನು ಅಲ್ಲೇ ಇಟ್ಟು ಹೋದಳು. ಅವಳ ಮಾತಿಗೆ ನನ್ನ ಕಣ್ಣಲ್ಲೂ ನೀರು ಬಂತು. ಯಾಕೋ ಹಸಿದ ಹೊಟ್ಟೆ ತುಂಬಿದ ಅನುಭವ ಆಯ್ತು. ಅವಳಿಗೆ ಏನು ಹೇಳಬೇಕೋ ತಿಳಿಯದೆ ಪೋಲಿಯೊದಿಂದ ನರಳುತ್ತಿದ್ದ ಮಂಜಣ್ಣನಿಗೆ ಗಂಜಿಯನ್ನು ಕುಡಿಸಿ ನಾನು ಮತ್ತೆ ಆಟ ಆಡಲು ಹೋದೆ. ಸಂಜೆ ಅವ್ವ ಮನೆಗೆ ಬಂದಾಗ ಮಧ್ಯಾಹ್ನ ಆದ ಘಟನೆಯನ್ನು ನನ್ನ ಚಿಕ್ಕಮ್ಮನ ಮಗಳು ವಿವರಿಸಿದ್ದಳು. ನಾನು ಪೆಚ್ಚು ಮೋರೆ ಹಾಕಿಕೊಂಡು ‘ನನಗೂ ಹಸಿವಾಗಿತ್ತು, ಅದಕ್ಕೆ ಹಾಗೆ ಮಾಡಿದೆ’ ಎಂದು ಹೇಳಿದೆ. ಅವ್ವನ ಅಸಹಾಯಕ ಮುಖ ನನ್ನ ಇನ್ನಷ್ಟು ನೋಯಿಸಿತ್ತು. ನನ್ನ ಚಿಕ್ಕಮ್ಮನ ಮಗಳು ದೊಡ್ಡು ಮಾರನೇ ದಿನ ಊರಿಗೆ ಹೊರಟು ನಿಂತಳು.

ಈ ಘಟನೆ ನನಗೆ ಸದಾ ಕಾಡಿಸುತ್ತಿತ್ತು. ಅವ್ವನ ಒಂದು ಮಾತು ಈಗಲೂ ನೆನಪಾಗುತ್ತದೆ. ‘‘ಮನೆಯ ಬಾಗಿಲಿಗೆ ಯಾರಾದರೂ ಭಿಕ್ಷುಕರು ಬಂದರೆ ಒಂದು ಮುಷ್ಟಿ ಅಕ್ಕಿ ಕೊಡಕೂ ಮಡಕೇಲ್ಲಿ ಮೂರು ಕಾಳು ಇರಲ್ಲ’’ ಈ ಮಾತು ಆ ಹೊತ್ತಿಗೆ ಎಲ್ಲಾ ಬಡವರ ಮನೆಯ ಮಾತಾಗಿತ್ತು. ಇವತ್ತು ಅನ್ನಭಾಗ್ಯದಿಂದ ನಿಜವಾಗಲೂ ಕರ್ನಾಟಕ ಹಸಿವಿನಿಂದ ಮುಕ್ತವಾಗಿದೆ ಎನ್ನುವುದನ್ನು ಧೈರ್ಯವಾಗಿ ಹೇಳಬಹುದು. ಸರಕಾರ ಮತ್ತು ಅನ್ನ ಉಂಡವರು ಇಬ್ಬರಿಗೂ ಸಮಾಧಾನವಾಗಿದೆ ಎಂಬುದಂತೂ ಸತ್ಯ. ಇಂತಹದ್ದೊಂದು ಯೋಜನೆ ಜಾರಿಯಾದಾಗ ಎಲ್ಲರೂ ಮುಕ್ತ ಮನಸ್ಸಿನಿಂದ ಸ್ವಾಗತಿಸಬೇಕು. ಆಗ ಅನ್ನಭಾಗ್ಯ ಯೋಜನೆ ಇದ್ದಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ. ಅಪರೂಪಕ್ಕೆ ಬಂದ ನನ್ನ ಚಿಕ್ಕಮ್ಮನ ಮಗಳು ಸಿಟ್ಟುಮಾಡಿಕೊಂಡು ಅವರ ಮನೆಗೆ ಹಿಂದಿರುಗುತ್ತಿರಲಿಲ್ಲ.

ನನ್ನ ಪ್ರಕಾರ ಹಸಿವಿನಲ್ಲಿ ಎರಡು ಪ್ರಕಾರ ಇದೆ. ಒಂದು ಎಲ್ಲಾ ಇದ್ದೂ ಹಸಿದವರು, ಎರಡನೆಯದು ಏನೂ ಇಲ್ಲದೆ ಹಸಿದವರು. ಇದಕ್ಕೆ ಪೂರಕವೆಂಬಂತೆ ನಮ್ಮ ವಚನಕಾರರು ಹೀಗೆ ಹೇಳಿದ್ದಾರೆ.

ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿವಡೆೆ

ವಿಷವೇರಿತ್ತಯ್ಯಾ ಅಪಾದ ಮಸ್ತಕಕ್ಕೆ

ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲೆಡೆ

ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ

ಈ ಮಾತನ್ನು ನಾವು ಅಂತಃಕರಣದ ಮೂಲಕ ಓದಿಕೊಳ್ಳಬೇಕು. ಪ್ರತೀ ಅನ್ನದ ಅಗುಳು ಎಷ್ಟು ಮುಖ್ಯ ಎನ್ನುವುದಕ್ಕೆ ತಮಿಳಿನ ಶ್ರೇಷ್ಠ ಕವಿ ತಿರುವಳ್ಳುವರ್ ಊಟಮಾಡುವಾಗ ಒಂದು ಲೋಟ ನೀರು ಮತ್ತು ಒಂದು ಸೂಜಿಯನ್ನು ಇಟ್ಟುಕೊಂಡಿರುತ್ತಿದ್ದರು. ಊಟಮಾಡುವಾಗ ಅಕಸ್ಮಾತ್ ಆಗಿ ಒಂದು ಅಗುಳು ಹೊರಗೆ ಬಿದ್ದರೆ ಕವಿಗಳು ಸೂಜಿಯಿಂದ ಅಗುಳಿಗೆ ಚುಚ್ಚಿ ಗ್ಲಾಸಿನ ನೀರಿನಲ್ಲಿ ತೊಳೆದು ಆ ಅಗುಳನ್ನು ಊಟ ಮಾಡುತ್ತಿದ್ದರು. ರೈತರು ಬೆಳೆದ ಪ್ರತೀ ಅಕ್ಕಿ ಕಾಳಿನ ಮೇಲೆ ಹಸಿದವರೆಲ್ಲರ ಹೆಸರಿರುತ್ತದೆ, ಹಾಗಾಗಿ ಅನ್ನ ಭಾಗ್ಯದ ಬಗ್ಗೆ ಹಗುರವಾಗಿ ಮಾತನಾಡ ಬೇಡಿ, ಹೀಗೆ ಹಗುರವಾಗಿ ಮಾತನಾಡುವ ಶಕ್ತಿ ಬಂದಿರುವುದು ಅನ್ನದಿಂದಲೇ ಎನ್ನುವುದನ್ನು ಮರೆಯದಿರೊಣ.

ಇನ್ನು ಕಾಂಗ್ರೆಸ್ ಸರಕಾರ ಜಾರಿಗೊಳಿಸಿರುವ ಗ್ಯಾರಂಟಿಗಳ ಬಗ್ಗೆ ಮಾತನಾಡುವುದಾದರೆ, ಈಗಲೂ ಅದರ ಬಗ್ಗೆ ಅಪಸ್ವರಗಳು ಅಲ್ಲಲ್ಲಿ ಕೇಳಿಬರುತ್ತಿವೆ. ಲೋಕಸಭೆಯ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ದೇಶದಲ್ಲಿ ಜಾತಿಜನಗಣತಿ ನಡೆಯಬೇಕೆಂದು ಪ್ರಸ್ತಾಪಿಸಿತ್ತು . ಅದೇ ಸಂದರ್ಭದಲ್ಲಿ ಪತ್ರಕರ್ತರು ರಾಹುಲ್ ಗಾಂಧಿ ಅವರನ್ನು ಜಾತಿಜನಗಣತಿಯನ್ನು ಕುರಿತು ಪ್ರಶ್ನಿಸುತ್ತಾರೆ. ಅದಕ್ಕೆ ರಾಹುಲ್ ಗಾಂಧಿ ‘‘ನಿಮ್ಮಲ್ಲಿ ಯಾರು ಎಸ್‌ಸಿ-ಎಸ್ಟಿಗಳು ಇದ್ದೀರಿ, ಯಾರು ಹಿಂದುಳಿದವರು ಇದ್ದೀರಿ’’ ಎಂದು ಪತ್ರಕರ್ತರನ್ನೇ ರಾಹುಲ್ ಗಾಂಧಿ ಪ್ರಶ್ನಿಸುತ್ತಾರೆ. ಆ ಕಡೆಯಿಂದ ಉತ್ತರ ಬರುವುದಿಲ್ಲ, ಜಾತಿ ಗಣತಿಯ ಉದ್ದೇಶ ಪತ್ರಕರ್ತರಿಗೆ ಅರ್ಥವಾಗದ ವಿಷಯವೇನಲ್ಲ, ಇವರೆಲ್ಲಾ ಉಳಿದ ಸಮುದಾಯದಿಂದ ಬಂದವರು. ಅವರಿಗೆ ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆಯ ನೋವು, ಹಸಿವಿನ ಸಂಕಟಗಳು ತಿಳಿದಿರುವುದಿಲ್ಲ. ಜಾತಿ ಗಣತಿ ಮಾಡಿದರೆ ಈ ಸಾಮಾಜಿಕ ಅಸಮಾನತೆ, ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳು, ಹಸಿವಿನಿಂದ ಬಳಲುತ್ತಿರುವ ಸಮುದಾಯಗಳ ಬದುಕು ಮತ್ತು ಬವಣೆ ಅರ್ಥವಾಗುತ್ತದೆ. ಈ ಎಲ್ಲಾ ಅಂಶಗಳನ್ನು ತಿಳಿಯುವುದಕ್ಕಾಗಿ ಜಾತಿಗಣತಿ ಅವಶ್ಯವಿರುತ್ತದೆ. ಈ ಎಲ್ಲಾ ಅಸಮಾನತೆಯನ್ನು ಒಂದಿಷ್ಟಾದರೂ ಸುಧಾರಣೆ ಮಾಡಲು ಗ್ಯಾರಂಟಿಗಳು ಅವಶ್ಯಕವಾಗಿ ಬೇಕಾಗುತ್ತದೆ. ಈ ಗ್ಯಾರಂಟಿಗಳಿಂದಾಗಿ ವಿಶೇಷವಾಗಿ ಹೆಣ್ಣುಮಕ್ಕಳ ಆತ್ಮವಿಶ್ವಾಸ ಹೆಚ್ಚಾಗಿದೆ. ನಾನು ಬಸ್ಸಿನಲ್ಲಿ ಆಟೋದಲ್ಲಿ ಓಡಾಡುವಾಗಲೆಲ್ಲಾ ಹೀಗೆ ಸಮಯ ಸಿಕ್ಕಾಗ ಈ ಗ್ಯಾರಂಟಿಗಳ ಬಗ್ಗೆ ಕೇಳುತ್ತಿರುತ್ತೇನೆ. ಇದರಲ್ಲಿ ಮಿಶ್ರಪ್ರತಿಕ್ರಿಯೆಗಳನ್ನು ಕೇಳಿಸಿಕೊಂಡಿದ್ದೇನೆ. ನಗರ ಪ್ರದೇಶದಲ್ಲಿ ಪುರುಷರು ಗ್ಯಾರಂಟಿ ಬಗ್ಗೆ ಕೇಳಿದರೆ ಸಿಡಿದೇಳುತ್ತಾರೆ, ಆದರೆ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ತುಂಬಾ ಸಂತೋಷದಿಂದ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಕೆಲವು ದಿನಗಳ ಹಿಂದೆ ನಾನು ಹಾಸನದಿಂದ ಚನ್ನರಾಯಪಟ್ಟಣಕ್ಕೆ ಬಸ್ಸಿನಲ್ಲಿ ಬಂದೆ . ನನ್ನ ಪಕ್ಕದಲ್ಲೇ ಕುಳಿತಿದ್ದ ವಯಸ್ಸಾದ ಅಜ್ಜಿ

ಯೊಬ್ಬರನ್ನು ಮಾತನಾಡಿಸುತ್ತಾ ಕೇಳಿದೆ ‘‘ನಿಮಗೆ ಸರಕಾರದಿಂದ ಎರಡು ಸಾವಿರ ಹಣ ಬರುತ್ತಾ?’’ ಅಂತ ಕೇಳಿದೆ. ಅದಕ್ಕೆ ಆಕೆ ನನಗೆ ಮರು ಪ್ರಶ್ನೆ ಮಾಡಿ ‘‘ನಿಮ್ಮನೆಯಲ್ಲಿ ಯಾರೂ ತಗಳಲ್ವ?’’ ಅಂತ ಕೇಳ್ತು.

‘ಇಲ್ಲಾ ತಾಯಿ, ನಾನು ಸರಕಾರದ ಕೆಲಸದಲ್ಲಿದ್ದು ನಿವೃತ್ತಿಯಾಗಿದ್ದೇನೆ. ಆದರೆ ನನ್ನ ಪತ್ನಿ ಬಸ್ಸಿನಲ್ಲಿ ಫ್ರೀಯಾಗಿ ಓಡಾಡುತ್ತಾರೆ. ಆದರೆ ಎರಡು ಸಾವಿರ ಹಣ ತೆಗೆದುಕೊಳ್ಳುವುದಿಲ್ಲ’ ಅಂದೆ

‘‘ಯಾರು ಏನಾದ್ರು ಹೇಳಲಿ ಸ್ವಾಮಿ, ಆ ಸಿದ್ರಾಮಪ್ಪ ನಮಗೆ ಅನ್ನ ಕೊಟ್ಟ, ದುಡ್ಡು ಕೊಟ್ಟ, ಬೆಳಕು ಕೊಟ್ಟ ಇನ್ನೇನಾಗಬೇಕು, ನೂರುಕಾಲ ಚೆನ್ನಾಗಿರಲಿ ನಮ್ಮಪ’’್ಪ ಎಂದು ಸರಕಾರದ ಯೋಜನೆಗಳ ಬಗ್ಗೆ ಆ ತಾಯಿ ಅಭಿಮಾನದಿಂದ ಮಾತನಾಡಿದರು. ಆದರೆ ಅನೇಕ ಟಿವಿ ಚಾನಲ್ ಗಳವರು ಮೈಕ್ ಹಿಡಿದರೆ ಸಾಕು ಸರಕಾರದ ಯೋಜನೆಗಳನ್ನು ಪಡೆದುಕೊಂಡವರು ಕೂಡ ಅದನ್ನು ವಿರೋಧಿಸಿ ಮಾತನಾಡುತ್ತಾರೆ. ಇದಕ್ಕೆ ಪಕ್ಷರಾಜಕಾರಣವೂ ಸೇರಿದಂತೆ ತಳಸಮುದಾಯಗಳಿಗೆ ಸಿಗುವ ಸೌಲಭ್ಯಗಳನ್ನು ಸಹಿಸದವರೇ ಕಾರಣ. ಇದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ.

ಗೃಹಲಕ್ಷ್ಮ್ಮಿಯ ಕುರಿತು ನನ್ನ ಸ್ನೇಹಿತರೊಬ್ಬರ ಮನೆಯಲ್ಲಿ ಸಿಕ್ಕಿದ್ದ ತುಮಕೂರಿನ ಹೆಣ್ಣುಮಗಳ ಘಟನೆಯನ್ನು ವಿವರಿಸುವುದಾದರೆ ಆಕೆಯ ಮಗ ತುಮಕೂರಿನ ಒಂದು ಶಾಲೆಯಲ್ಲಿ ಓದುತ್ತಿದ್ದು ಆತನ ಫೀಸ್ ಕಟ್ಟಲು ಗೃಹ ಲಕ್ಷ್ಮಿ ಹಣ ಸಹಾಯವಾಯಿತು . ಇಲ್ಲವಾದರೆ ಸಾಲ ಮಾಡಬೇಕಿತ್ತು ಮತ್ತು ಈಗಾಗಲೇ ಮಾಡಿರುವ ಸಾಲಗಳಿಂದ ಮಗನ ಓದು ನಿಲ್ಲುತಿತ್ತು.

ಈ ಎಲ್ಲಾ ಘಟನೆಗಳನ್ನು ನೆನಪಿಸಿಕೊಳ್ಳುವಾಗ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಒಂದು ಮಾತು ನೆನಪಾಗುತ್ತದೆ. ‘‘ಈ ದೇಶದ ಸಾಮಾನ್ಯ ಮತ್ತು ಅತಿ ಸಾಮಾನ್ಯ ಹೆಣ್ಣುಮಕ್ಕಳ ಕೈಯಲ್ಲಿ ಹಣ ಸಿಕ್ಕಿದರೆ ಆರ್ಥಿಕ ವ್ಯವಸ್ಥೆ ಚಲನಶೀಲವಾಗುತ್ತದೆ, ಇದರಿಂದ ಸಣ್ಣ ಸಣ್ಣ ಕುಟುಂಬಗಳೂ ಕೂಡ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲ್ಗೊಂಡಂತೆ ಆಗುತ್ತದೆ. ಇದು ಸಮಾಜದ ಅಭಿವೃದ್ಧ್ದಿಗೆ ಸಹಾಯಕವಾಗುತ್ತದೆ’’ ಹೀಗೆಂದ ಅವರು ‘‘ಬೆರಣಿ ತಟ್ಟಿ ವಿದೇಶದಲ್ಲಿದ್ದ ನನ್ನ ಶಿಕ್ಷಣದ ಓದಿಗೆ ಹಣ ಕಳಿಸುತ್ತಿದ್ದರು ರಮಾ. ಕಳಿಸುತ್ತಿದ್ದ ಹಣ ನನ್ನ ಸಣ್ಣ ಪುಟ್ಟ ಖರ್ಚುಗಳಿಗೆ ಸಹಾಯಕವಾಗಿತ್ತು. ಇದರಿಂದ ಅರ್ಥವಾಗಿದ್ದು ಆರ್ಥಿಕತೆಯ ನಿಜವಾದ ಸಾರ್ಥಕತೆ ಇರುವುದು ಪ್ರತೀ ಪೈಸೆಯನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ. ಇದು ಹೆಣ್ಣುಮಕ್ಕಳಿಗೆ ಮಾತ್ರಸಾಧ್ಯ’’ ಅಗತ್ಯಕ್ಕನುಗುಣವಾಗಿ ಖರ್ಚುಮಾಡುವ ಮಹಿಳೆಯರ ಉಳಿತಾಯದ ಮಾರ್ಗ ಯಾವತ್ತೂ ಆದರ್ಶ ಮತ್ತು ಕುಟುಂಬಕ್ಕೆ ಪೂರಕವಾಗಿರುತ್ತದೆ.

ಪುರುಷ ಎಲ್ಲದಕ್ಕೂ ನಾನೇ ಅಧಿಕಾರಿ ಎನ್ನುವ ಮಾತು ಶಕ್ತಿ ಯೋಜನೆಯಿಂದ ಬಹುತೇಕ ಈಗ ಇಲ್ಲ. ಮಹಿಳೆ ಮತ್ತು ಪುರುಷ ಸರಿಸಮ, ಹಾಗೆ ನೋಡಿದರೆ ಮಹಿಳೆಯರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ಶಕ್ತಿ ಯೋಜನೆಯಿಂದಾಗಿ ಹೆಣ್ಣುಮಕ್ಕಳ ಲೋಕಸಂಚಾರಕ್ಕೆ, ಅರಿವಿನ ವಿಸ್ತಾರಕ್ಕೆ ಅವಕಾಶ ಸಿಕ್ಕಂತಾಯ್ತು.

‘ದೇಶ ಸುತ್ತು ಕೋಶ ಓದು’ ಎಂಬ ಗಾದೆಯಿತ್ತು. ಇದು ಪುರುಷರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಅದು ಈಗ ಮಹಿಳೆಯರಿಗೂ ವಿಸ್ತರಿಸಿದೆ, ಮಹಿಳೆಯರು ಸುಖಾಸುಮ್ಮನೆ ಬಸ್ಸಿನಲ್ಲಿ ತಿರುಗಾಡುತ್ತಿಲ್ಲ. ಈ ಬಸ್ಸಿನಲ್ಲಿ ಓಡಾಡುವುದಕ್ಕೂ ಕಾರಣವಿರುತ್ತದೆ ಮತ್ತು ಸದುದ್ದೇಶವಿರುತ್ತದೆ. ಮಹಿಳೆಯರಿಗೆ ಮನೆ, ಗಂಡ, ಮಕ್ಕಳು ಎನ್ನುವುದೇ ಲೋಕವಾಗಿತ್ತು, ಆದರೆ ಈಗ ಅವಳು ತನ್ನತನವನ್ನು ಗುರುತಿಸಿಕೊಳ್ಳುವ ಸಮಯ ಬಂದಿದೆ. ಬಸ್ಸಿನಲ್ಲಿ ಸಂಚರಿಸಿ ಲೋಕವನ್ನು ನೋಡುತ್ತಾ ಗಿಡ, ಮರ, ನದಿ, ಊರು, ಕೇರಿ, ಪಟ್ಟಣ, ದೇವಸ್ಥಾನ ಹೀಗೆ ಎಲ್ಲವನ್ನೂ ಹೊಸದಾಗಿ ನೋಡಿ ಅರಿವನ್ನು ವಿಸ್ತರಿಸಿಕೊಳ್ಳುತ್ತಿದ್ದಾಳೆ. ಆಕೆಗೂ ಒಂದು ಲೋಕಾನುಭವ ಬೇಕಲ್ಲವೇ. ಹೀಗೆ ಸರಕಾರದ ಯೋಜನೆಗಳು ಭಿಕ್ಷೆಯಲ್ಲ, ಅದು ನಮ್ಮ ಹಕ್ಕು. ಎಂದು ತಿಳಿದುಕೊಂಡಾಗ ಮಾತ್ರ ಮಾನವೀಯ ಸಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಅದಲ್ಲದೆ ಧರ್ಮ ಮತ್ತು ಜಾತಿಗಳ ಗೋಡೆ ಕಟ್ಟಿಕೊಂಡು, ಲಿಂಗ ತಾರಮ್ಯವನ್ನು ಮಾಡಿಕೊಂಡು, ಇನ್ನೆಷ್ಟು ದಿನ ಹೊಡೆದಾಡಿಕೊಳ್ಳುವುದು ? ಸಮಾಜವನ್ನು ಕಟ್ಟುವ ಮನಸ್ಸಿದ್ದವರಿಗೆ ಎಲ್ಲರಿಗೂ ಒಳ್ಳೆಯದಾಗುವುದನ್ನು ಸಹಿಸಿಕೊಳ್ಳುವ ಗುಣವೂ ಬೇಕು.

‘ಸರ್ವಜನ ಹಿತಾಯ ಸರ್ವಜನ ಸುಖಾಯ’ 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಸುಬ್ಬು ಹೊಲೆಯಾರ್

contributor

Similar News