ಬುದ್ದಿಮಾಂದ್ಯ ಮಕ್ಕಳ ವಿಮಾ ಯೋಜನೆ : 2 ಲಕ್ಷ ರೂ. ಏರಿಕೆಗೆ ಶಿಫಾರಸು
ಬೆಳಗಾವಿ (ಸುವರ್ಣ ವಿಧಾನಸೌಧ) : ಬುದ್ದಿಮಾಂದ್ಯ ಮಕ್ಕಳ ಪೋಷಕರಿಗೆ ನೀಡುತ್ತಿರುವ ವಿಮಾ ಯೋಜನೆಯ ಹಣವನ್ನು 20 ಸಾವಿರದಿಂದ 2 ಲಕ್ಷ ರೂ.ಗಳಿಗೆ ಏರಿಕೆ ಮಾಡುವಂತೆ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಜತೆಗೆ ವಿಕಲಚೇತನ ವ್ಯಕ್ತಿಗಳನ್ನು ಸಾಮಾನ್ಯರು ಮದುವೆಯಾದಲ್ಲಿ ಪೋತ್ಸಾಹ ಧನ ನೀಡುವ ಯೋಜನೆಯ ಅನುದಾನವನ್ನು 5 ಸಾವಿರದಿಂದ 5 ಲಕ್ಷ ರೂ.ಗೆ ಹೆಚ್ಚುಸುವಂತೆ ಒತ್ತಾಯಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಂ.ರೂಪಕಲಾ ನೇತೃತ್ವದ ಸಮಿತಿ ವರದಿಯನ್ನು ವಿಧಾನ ಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿ ಸದಸ್ಯೆ ಉಮಾಶ್ರೀ ಗುರುವಾರ ವಿಧಾನ ಪರಿಷತ್ತಿನಲ್ಲಿ ಒಪ್ಪಿಸಿದರು.
ಹಗಲು ಯೋಗಕ್ಷೇಮ ಕೇಂದ್ರಗಳ ಯೋಜನೆಯನ್ನು ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ನಡೆಸಲು ಸಮಿತಿ ಶಿಫಾರಸ್ಸು ಮಾಡಿದೆ. ಗ್ರಾಮ ಪಂಚಾಯ್ತಿ ಹಂತದಲ್ಲಿ ವಿಕಲ ಚೇತನರಲ್ಲಿ ಶ್ರವಣ ದೋಷ ಇರುವವರಿಗೆ ಹಿಯರಿಂಗ್ ಸಾಧನ, ಕನ್ನಡಕ, ಹಾಗೂ ಸ್ಟಿಕ್ ಇತ್ಯಾದಿಗಳನ್ನು ಸರಕಾರದ ವತಿಯಿಂದ ಒದಗಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ನಗರ ಪ್ರದೇಶದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿನ ಸಹಾಯಕ ಹುದ್ದೆಗಳಿಗೆ ಸ್ಥಳೀಯರಿಗೆ ಮಾತ್ರ ಅವಕಾಶ ಎಂಬ ನಿಯಮದನ್ವಯ ಸ್ಥಳೀಯರಿಗೆರು ಹುದ್ದೆಗೆ ಬಾರದೆ ಇದ್ದರೆ ಬೇರೆಯವರಿಗೆ ಆದ್ಯತೆ ನೀಡಲಾಗುವುದೆಂಬ ಷರತ್ತನ್ನು ನಿಯಮದಲ್ಲಿ ಅಳವಡಿಸುವಂತೆ ಸಮಿತಿ ಶಿಫಾರಸು ಮಾಡಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಮಕ್ಕಳು ಬಾಲಭವನದ ವೀಕ್ಷಣೆಗಾಗಿ ಬೆಂಗಳೂರಿಗೆ ಬರುವುದಕ್ಕೆ ಸಾಧ್ಯವಾಗಿರುವುದಿಲ್ಲವಾದ್ದರಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪಿಪಿಪಿ ಮಾಡೆಲ್‍ನಲ್ಲಿ ಬಾಲ ಭವನ ನಿರ್ಮಾಣ ಮಾಡಬೇಕೆಂದು ಸಮಿತಿ ಒತ್ತಾಯಿಸಿದೆ. ಹಗಲು ಯೋಗಕ್ಷೇಮ ಕೇಂದ್ರಗಳ ಯೋಜನೆಯನ್ನು ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ನಡೆಸಬೇಕು. ಅಂಗನವಾಡಿಗೆ ದಾನಿಗಳು ಉಚಿತವಾಗಿ ನೀಡಿರುವ ಕಟ್ಟಡಗಳ ಮೇವೆ ದಾನಿಗಳ ಹೆಸರನ್ನು ಹಾಕಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.