ಮುರುಡೇಶ್ವರದಲ್ಲಿ ವಿದ್ಯಾರ್ಥಿನಿಯರ ಸಾವು; ಶಿಕ್ಷಕರ ನಿರ್ಲಕ್ಷ್ಯ ಸ್ಪಷ್ಟ: ಸಚಿವ ಕೃಷ್ಣಬೈರೇಗೌಡ

Update: 2024-12-13 14:24 GMT

ಕೃಷ್ಣ ಬೈರೇಗೌಡ

ಬೆಳಗಾವಿ(ಸುವರ್ಣ ವಿಧಾನಸೌಧ) : ‘ಪ್ರವಾಸಕ್ಕೆ ತೆರಳಿದ್ದ ವೇಳೆ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟಿರುವುದು ವಿಷಾದದ ಸಂಗತಿ. ಹಾಗೆಂದು ಸರಕಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಜೀವಹಾನಿ ಆದಲ್ಲಿ, ನಾವು ಜವಾಬ್ದಾರರಲ್ಲ ಎಂದು ಕೈಚೆಲ್ಲಲು ನಮ್ಮ ಸರಕಾರ ಸಿದ್ಧವಿಲ್ಲ. ಹೀಗಾಗಿ ನಿರ್ಲಕ್ಷ್ಯ ವಹಿಸಿದ ಶಿಕ್ಷಕರನ್ನು ಅಮಾನತ್ತು ಮಾಡಲಾಗಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ಜೆಡಿಎಸ್ ಸದಸ್ಯ ಸಮೃದ್ಧಿ ಮಂಜುನಾಥ್ ಪ್ರಸ್ತಾಪಿಸಿದ ವಿಷಯಕ್ಕೆ ಸರಕಾರದ ಪರವಾಗಿ ಉತ್ತರ ನೀಡಿದ ಕೃಷ್ಣಬೈರೇಗೌಡ, ‘ಮುಳಬಾಗಿಲು ತಾಲ್ಲೂಕಿನ ಎಂ.ಕೊತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿಯರನ್ನು ಶೈಕ್ಷಣಿಕ ಪ್ರವಾಸಕ್ಕಾಗಿ ಮುರುಡೇಶ್ವರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಕ್ಕಳ ಜೊತೆ ಏಳು ಜನ ಶಿಕ್ಷಕರೂ ತೆರಳಿದ್ದರು. ಪ್ರವಾಸದ ವೇಳೆ ಮಕ್ಕಳ ರಕ್ಷಣೆ ಶಿಕ್ಷಕರ ಜವಾಬ್ದಾರಿ. ಮಕ್ಕಳು ಸಮುದ್ರದ ಆಳವಾದ ಸ್ಥಳಕ್ಕೆ ಈಜಲು ತೆರಳಿದ್ದಾಗ ಶಿಕ್ಷಕರು ಅದನ್ನು ತಡೆಯಬೇಕಿತ್ತು. ಆದರೆ, ಅವರು ಹಾಗೆ ಮಾಡಿಲ್ಲ. ಹೀಗಾಗಿ ಪ್ರಾಥಮಿಕ ತನಿಖೆಯಲ್ಲಿ ಶಿಕ್ಷಕರ ನಿರ್ಲಕ್ಷ್ಯ ಮೇಲುನೋಟಕ್ಕೆ ಎದ್ದು ಕಾಣುತ್ತಿದೆ’ ಎಂದು ಉಲ್ಲೇಖಿಸಿದರು.

‘ಸರಕಾರಕ್ಕೆ ಸಂಬಂಧಪಟ್ಟ ವಿಚಾರದಲ್ಲಿ ಜೀವಹಾನಿ ಆದಲ್ಲಿ, ನಾವು ಜವಾಬ್ದಾರರಲ್ಲ ಎಂದು ಕೈಚೆಲ್ಲಲು ಸರಕಾರ ಸಿದ್ಧವಿಲ್ಲ. ಹೀಗಾಗಿ, ನಿರ್ಲಕ್ಷ್ಯ ವಹಿಸಿದ್ದ ಶಿಕ್ಷಕರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಹೆಚ್ಚಿನ ಜನ ಪ್ರವಾಸಕ್ಕೆ ಆಗಮಿಸುವ ಸ್ಥಳಕ್ಕೆ ಮತ್ತಷ್ಟು ಮುಂಜಾಗ್ರತಾ ಕ್ರಮ ವಹಿಸಬೇಕೆಂಬ ಸಮೃದ್ಧಿ ಮಂಜುನಾಥ್‍ರ ಸಲಹೆಯನ್ನೂ ಸ್ವೀಕರಿಸಲಾಗುವುದು. ಅಲ್ಲದೆ, ಈ ದುರಂತದ ಬಗ್ಗೆ ಶೀಘ್ರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಮೊರಾರ್ಜಿ ವಸತಿ ಶಾಲಾ ಮಕ್ಕಳನ್ನು ಡಿ.10ರಂದು ಶಿಕ್ಷಕರು ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಕ್ಕೆಂದು ಕರೆತಂದಿದ್ದರು. ಆದರೆ, ಸಮುದ್ರದ ಆಳವಾದ ಭಾಗದಲ್ಲಿ ಈಜಲು ತೆರಳಿದ್ದ ನಾಲ್ವರು ವಿದ್ಯಾರ್ಥಿನಿಯರು ನೀರು ಪಾಲಾಗಿ ಮೃತಪಟ್ಟಿದ್ದರು. ವಿದ್ಯಾರ್ಥಿನಿಯರ ಕುಟುಂಬಕ್ಕೆ ರಾಜ್ಯ ಸರಕಾರದ ವತಿಯಿಂದ ತಲಾ 5ಲಕ್ಷ ರೂ.ಪರಿಹಾರ ನೀಡಲಾಗುವುದು ಎಂದು ಘೋಷಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News