ವಿಧಾನ ಮಂಡಲದ ಅಧಿವೇಶನದಲ್ಲಿ ಸ್ಲಂ ಜನರ ಸಮಸ್ಯೆಗಳ ಮೇಲೆ ಚರ್ಚೆ : ಪ್ರಸಾದ್ ಅಬ್ಬಯ್ಯ

Update: 2024-12-14 16:56 GMT

ಪ್ರಸಾದ್ ಅಬ್ಬಯ್ಯ

ಬೆಂಗಳೂರು: ರಾಜ್ಯದಲ್ಲಿ ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಪ್ರಸ್ತುತ ಬಜೆಟ್‍ನಲ್ಲಿ ಹಣ ಮೀಸಲಿಡುವುದು ಸೇರಿದಂತೆ ಸ್ಲಂ ಕಾಯಿದೆಗೆ ವಿರುದ್ಧವಾಗಿರುವ ವಸತಿ ಇಲಾಖೆ ಸುತ್ತೋಲೆ ವಾಪಾಸಾತಿ ಹಾಗೂ ಲ್ಯಾಂಡ್ ಬ್ಯಾಂಕ್ ನೀತಿ ಕುರಿತಂತೆ ಪ್ರಸ್ತುತ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಮಾಡಲು ಈಗಾಗಲೇ ಸಮಯ ನಿಗಧಿಯಾಗಿದ್ದು ಸ್ಲಂ ಜನರ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಭರವಸೆ ನೀಡಿದ್ದಾರೆ.

ಶನಿವಾರ ಬೆಳಗಾವಿಯ ಸುವರ್ಣ ಸೌಧದ ಮುಂದೆ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯಿಂದ ನಡೆದ ಸಾಮಾಜಿಕ ನ್ಯಾಯಕ್ಕಾಗಿ ಸ್ಲಂ ನಿವಾಸಿಗಳ ಹಕ್ಕೋತ್ತಾಯ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಸರಕಾರದ ಪರವಾಗಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸ್ಲಂ ಜನರಿಗೆ ಹಕ್ಕುಪತ್ರ ವಿತರಣೆ ನೋಂದಣಿ ಮತ್ತು ಇ-ಖಾತಾ ಪ್ರಕ್ರಿಯೆಯನ್ನು ಸರಳಗೊಳಿಸಿ ಖಾಸಗಿ ಸ್ಲಂಗಳ ಅಭಿವೃದ್ಧಿಗೂ ಮುಂದಾಗುವ ಜೊತೆಗೆ ಪ್ರಧಾನ್ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ನಿರ್ಮಿಸುತ್ತಿರುವ ವಸತಿ ಯೋಜನೆಯನ್ನು ಪೂರ್ಣಗೊಳಲು ಹಣ ಮಂಜೂರಾತಿ ಮಾಡಲಾಗುವುದು ಎಂದು ಅವರು ಹೇಳಿದರು.

ಸ್ಲಂ ಜನರ ಪರವಾದ ಕಾನೂನು ಮತ್ತು ನೀತಿಗಳನ್ನು ನನ್ನ ಅವಧಿಯಲ್ಲಿ ಮುಖ್ಯಮಂತ್ರಿ ಮತ್ತು ವಸತಿ ಸಚಿವರ ಬೆಂಬಲದೊಂದಿಗೆ ಮಾಡಲಾಗುವುದು. ನಾನೂ ದಲಿತನಾಗಿ ಸ್ಲಂ ಜನರ ಕಷ್ಟದ ಅನುಭವವನ್ನು ಹೊಂದಿದ್ದು, ಈ ಕಷ್ಟಗಳನ್ನು ಪರಿಹರಿಸಲು ಪ್ರಮಾಣಿಕ ಪ್ರಯತ್ನ ಮಾಡಿ, ಮುಂದಿನ ದಿನಗಳಲ್ಲಿ ಸ್ಲಂ ಜನರ ರಾಜ್ಯಮಟ್ಟದ ಸಮಾವೇಶವನ್ನು ಮಾಡುವ ಮೂಲಕ ಸರಕಾರಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಆಯುಕ್ತ ಡಾ.ಅಶೋಕ್ ಡಿ.ಆರ್. ಮಾತನಾಡಿ, ಈಗಾಗಲೇ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೋಂದಣಿಗೆ ಇ-ಖಾತಾ ತೊಡಕಾಗಿರುವ ಬಗ್ಗೆ ಮುದ್ರಾಂಕ ಇಲಾಖೆಯ ಎಐಜಿ ಅವರೊಂದಿಗೆ ಸಭೆ ನಡೆಸಿ 94ಸಿಸಿ ಮಾದರಿಯಲ್ಲಿ ನೋಂದಣಿ ಮಾಡಿಕೊಡಲು ಒಪ್ಪಿಸಲಾಗಿದೆ. ಹಾಗೆಯೇ ಇದುವರೆಗೂ 1.86 ಲಕ್ಷ ಕುಟುಂಬಗಳಿಗೆ ಇದುವರೆಗೂ ಹಕ್ಕುಪತ್ರ ನೀಡಲಾಗಿದೆ ತ್ವರಿತವಾಗಿ ಪ್ರಧಾನ್ ಮಂತ್ರಿ ಅವಾಸ್ ಯೋಜನೆಯಲ್ಲಿ ಬಾಕಿ ಇರುವ ಮನೆಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗುವುದು ಎಂದರು.

ಖಾಸಗಿ ಮಾಲೀಕತ್ವದ ಘೋಷಣೆಗೆ ಯಾವುದೇ ರೀತಿಯ ತೊಡಕಿಲ್ಲ, ಈಗಾಗಲೇ ಹಣಕಾಸು ಇಲಾಖೆ ಸ್ಲಂಗಳ ಘೋಷಣೆ ಆಡಳಿತಾತ್ಮಕ ವಿಚಾರವೆಂದು ಸ್ಪಷ್ಟೀಕರಣ ನೀಡಿರುವುದರಿಂದ ಉತ್ತರ ಕರ್ನಾಟಕ ಭಾಗದ ಸ್ಲಂ ನಿವಾಸಿಗಳಿಗೆ ವಸತಿ ಇಲಾಖೆ ಸುತ್ತೋಲೆ ತೊಡಕಾಗಿದೆ. ಎಲ್ಲಾ ವಿಭಾಗಗಳಿಂದ ಬಾಕಿ ಇರುವ ಸರಕಾರಿ ಮತ್ತು ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ಕ್ರಮವಹಿಸಲು ಸ್ಪಷ್ಟ ಸೂಚನೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಲಂ ಜನರಿಗೆ ನೀಡಿರುವ ಪ್ರಾಳಿಕೆಯ ಭರವಸೆಯಂತೆ ಸಿದ್ದರಾಮಯ್ಯ ಸರಕಾರ ನಡೆಯಬೇಕು. ನಗರಗಳಲ್ಲಿ ಅಸಮಾನತೆ ಮತ್ತು ಅಭಿವೃದ್ಧಿ ತಾರತಮ್ಯದಿಂದ ಕೊಳಚೆ ಪ್ರದೇಶದಲ್ಲಿರುವ ವಂಚಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಖಾತ್ರಿ ಮಾಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದರು.

ಇದೇ ವೇಳೆ ಸ್ಲಂ ಜನಾಂದೋಲನದ ಪದಾಧಿಕಾರಿಗಳು ಸೇರಿ ಸಾವಿರಾರೂ ಕಾರ್ಯಕರ್ತರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News