ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಸಲ್ಲ: ಪಿ.ಎಂ.ನರೇಂದ್ರಸ್ವಾಮಿ

Update: 2024-12-13 16:38 GMT

 ಪಿ.ಎಂ.ನರೇಂದ್ರ ಸ್ವಾಮಿ 

ಬೆಳಗಾವಿ(ಸುವರ್ಣ ವಿಧಾನಸೌಧ) : ಪರಿಶಿಷ್ಟ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಎಸ್‍ಸಿಎಸ್‍ಪಿ ಮತ್ತು ಟಿಎಸ್ಪಿ ಅನುದಾನವನ್ನು ಕಡ್ಡಾಯವಾಗಿ ಆ ಸಮುದಾಯದ ಕಲ್ಯಾಣ ಕಾರ್ಯಗಳಿಗೆ ಬಳಸಬೇಕು. ಹೊರಗುತ್ತಿಗೆಯಲ್ಲಿ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಜಿಲ್ಲೆಗಳಲ್ಲಿ ಕಡ್ಡಾಯವಾಗಿ ಎಸ್‍ಸಿ ಮತ್ತು ಎಸ್‍ಟಿ ಸಮುದಾಯವರಿಗೆ 100 ದಿನಗಳ ಉದ್ಯೋಗ ಖಾತ್ರಿ ನೀಡಬೇಕು. ಸ್ಮಶಾನಭೂಮಿ ಇಲ್ಲದಿರುವ ಕಡೆಗಳಲ್ಲಿ ಕೂಡಲೇ ಒದಗಿಸಬೇಕು. ಭೂ ಒಡೆತನ ಯೋಜನೆಯಡಿ ಜಮೀನು ನೀಡಬೇಕು ಎಂದು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ಆಗ್ರಹಿಸಿದ್ದಾರೆ.

ಶುಕ್ರವಾರ ಸುವರ್ಣವಿಧಾನಸೌಧದಲ್ಲಿ ಸಮಿತಿಯ ಸದಸ್ಯರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2024-25ನೇ ಸಾಲಿನ ಮೊದಲನೇ ವರದಿಯನ್ನು ಡಿ.12ರಂದು ಉಭಯ ಸದನಗಳಲ್ಲಿ ಮಂಡಿಸಿ ಸರಕಾರಕ್ಕೆ ಸಲ್ಲಿಸಲಾಗಿದೆ. ಸಮಿತಿಯು ಕಲಬುರಗಿ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ಗದಗ ಹಾಗೂ ಬೆಳಗಾವಿ ಸೇರಿ ಒಟ್ಟು 14 ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಮಾಡಿ ಅನೇಕ ಲೋಪದೋಷಗಳನ್ನು ಪರಿಶೀಲಿಸಿದೆ. ಒಂದೇ ಮನೆಯ ಮಕ್ಕಳಂತೆ ಎಲ್ಲ ಪಕ್ಷದವರು ಒಗ್ಗೂಡಿ ಈ ವರದಿಯನ್ನು ಸಿದ್ಧಪಡಿಸಿದ್ದೇವೆ ಎಂದರು.

ರಾಜ್ಯದ ಹಿತದೃಷ್ಟಿಯಿಂದ ಮತ್ತು ಎಸ್‍ಸಿ, ಎಸ್‍ಟಿ ಸಮುದಾಯದ ಅಭಿವೃದ್ಧಿಗೆ ಹಾಗೂ ಅವರ ಭವಿಷ್ಯತ್ತನ್ನು ರೂಪಿಸುವುದಕ್ಕೆ ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನ ಆಗುವುದಕ್ಕೆ ಎಲ್ಲೆಲ್ಲಿ ಲೋಪಗಳಿದ್ದಾವೆ ಎಂಬುದನ್ನು ಪತ್ತೆ ಮಾಡಿ ಸಾಕಷ್ಟು ಶ್ರಮವಹಿಸಿ ಈ ವರದಿಯನ್ನು ತಯಾರಿ ಮಾಡಿದ್ದೇವೆ. ನಿವೇಶನ, ವಸತಿ ರಹಿತರಿಗೆ ಕೂಡಲೇ ಸೌಕರ್ಯ ಒದಗಿಸಬೇಕು. ಪ್ರಾಧಿಕಾರಗಳಿಂದ ಬರುವ ಆದಾಯದಲ್ಲಿ ಎಸ್ಸಿ ಎಸ್ಟಿ ಹಾಸ್ಟೇಲ್‍ಗಳಿಗೆ ಹಾಸಿಗೆ, ಮಂಚ, ದಿಂಬು ಒದಗಿಸಬೇಕು. ಹೌಸಿಂಗ್ ಸೊಸೈಟಿಗಳ ಬಡಾವಣೆಗಳಲ್ಲಿ ನಿವೇಶನಗಳ ಮೀಸಲಾತಿ ನೀಡಬೇಕು ಎಂಬುದು ಸೇರಿದಂತೆ ನಾನಾ ವಿಷಯಗಳ ಬಗ್ಗೆ ಸಮಿತಿಯು ಪರಿಶೀಲಿಸಿ ವರದಿ ನೀಡಿದೆ ಎಂದು ಅವರು ತಿಳಿಸಿದರು.

ಎಸ್ಸಿಪಿ ಟಿಎಸ್ಪಿ ಕಾಯ್ದೆಯಡಿ ಬರುವ ರೀತಿಯಲ್ಲಿ ಹೊರಗುತ್ತಿಗೆ ಮೀಸಲಾತಿ ಇರಬೇಕು, ಹೊರಗುತ್ತಿಗೆ ಸಿಬ್ಬಂದಿಗೆ ನೀಡುವ ವೇತನದ ಬಗ್ಗೆ ಜೊತೆಗೆ ಹಾಸ್ಟೆಲ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದನ್ನು ಸಮಿತಿಯು ಪರಿಶೀಲನೆ ನಡೆಸಿ ಮಾರ್ಗೋಪಾಯ ಕಂಡು ಹಿಡಿದು ವರದಿಯಲ್ಲಿ ನೀಡಿದೆ. ವಸತಿ, ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದಕ್ಕೆ ಸಮಿತಿಯು ಸಲಹೆ ಮಾಡಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆಗೂ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ವ್ಯವಸ್ಥೆಗೂ ಅಂತರ ಇರಬಾರದು. ಈ ನಿಟ್ಟಿನಲ್ಲಿ ಇನ್ನು ಮುಂದೆ ಕಂಪ್ಯೂಟರ್ ಶಿಕ್ಷಣ ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ಎಸ್‍ಡಿಎಂಸಿಗಳ ಭಾಗವಹಿಸುವಿಕೆಯ ಜೊತೆಗೆ ಸ್ಥಳೀಯ ಅನುದಾನವನ್ನು ಕ್ರೋಢೀಕರಿಸಿ ಟ್ಯಾಬ್‍ಗಳನ್ನು ನೀಡುವುದು ಮತ್ತು ಸಿಎಸ್‍ಆರ್ ಅನುದಾನ ಲಭ್ಯತೆವಿರುವ ಕಡೆಗಳಲ್ಲಿ ಅದನ್ನು ಬಳಸಿಕೊಂಡು ಗ್ರಾಮೀಣ ಶಿಕ್ಷಣವನ್ನು ಮೇಲೆತ್ತಬೇಕು ಎಂದು ಸಮಿತಿಯು ಸಲಹೆ ಮಾಡಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.

ಸಮಿತಿಯ ಸದಸ್ಯರು ಜಿಲ್ಲೆಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಮಾಹಿತಿ ಪಡೆದಾಗ ಅಲ್ಲಿ ವಿದ್ಯಾಭ್ಯಾಸ ಮಾಡುವ ಒಟ್ಟು ಮಕ್ಕಳ ಪೈಕಿ ಶೇ.50ಕ್ಕಿಂತ ಹೆಚ್ಚು ಮಕ್ಕಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆಂಬ ಅಂಶ ತಿಳಿದು ಬಂದಿರುವುದರಿಂದ ಸೌಲಭ್ಯ ಕಲ್ಪಿಸುವುದರ ಬಗ್ಗೆ ಸಮಿತಿಯು ಕೆಲವು ಮಾರ್ಪಾಟುಗಳಿಗೆ ವರದಿಯಲ್ಲಿ ಅವಕಾಶ ಮಾಡಿದೆ. ಹೊರಗುತ್ತಿಗೆ ಆಧಾರದ ಮೇಲೆ ನೌಕರರನ್ನು ಪಡೆದುಕೊಳ್ಳುವ ವ್ಯವಸ್ಥೆಯ ಬಗ್ಗೆ ಸಮಿತಿಯು ಪರಿಶೀಲಿಸಿದೆ. ಸಿಬ್ಬಂದಿಗೆ ಸಿಗಬೇಕಾದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಏಜೆನ್ಸಿಯವರು ಉಳಿಸಿಕೊಳ್ಳುವುದು ತಪ್ಪಬೇಕು. ಹೊರಗುತ್ತಿಗೆ ನೌಕರರಿಗೆ ಏಜೆನ್ಸಿ ಮೂಲಕ ಹಣ ನೀಡುವ ಬದಲು ನೇರವಾಗಿ ಇಲಾಖೆಗಳೇ ಸಿಬ್ಬಂದಿಯನ್ನು ನೇಮಿಸಿಕೊಂಡು ವೇತನ ಪಾವತಿಸುವುದರಿಂದ ನೌಕರರಿಗೆ ಹೆಚ್ಚುವರಿ ಹಣ ಸಿಗುತ್ತದೆ ಎಂಬುದಾಗಿ ಸಮಿತಿಯು ವರದಿಯಲ್ಲಿ ತಿಳಿಸಿದೆ ಎಂದು ಅವರು ತಿಳಿಸಿದರು.

ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ನೀಡಿದ ವರದಿಗಳು ಪರಿಣಾಮಕಾರಿಯಾಗಿ ಜಾರಿಯಾಗಿವೆ. ಬಜೆಟ್‍ನಲ್ಲಿ ಮತ್ತು ಕಾರ್ಯಕ್ರಮ ಅನುಷ್ಠಾನದಲ್ಲಿ ಸರಕಾರವು ಜವಾಬ್ದಾರಿಯುತವಾಗಿ ನಡೆದುಕೊಂಡಿದೆ. 2013ರ ಎಸ್ಸಿಪಿ ಟಿಎಸ್ಪಿ ಕಾಯ್ದೆಯಡಿ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿಡುವಂತಹ ಶಿಫಾರಸ್ಸನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಯಥಾವತ್ತಾಗಿ ಜಾರಿಗೊಳಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ನರೇಂದ್ರ ಸ್ವಾಮಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ದುರ್ಯೋದನ ಎಂ. ಐಹೊಳೆ, ಕೃಷ್ಣನಾಯ್ಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ವಿಶೇಷವಾಗಿ ಉತ್ತರ ಕರ್ನಾಟಕ ಏಳೆಂಟು ಜಿಲ್ಲೆಗಳಲ್ಲಿ ಪ್ರವಾಸದ ವೇಳೆ ಶೋಚನೀಯ ಅಂಶವೊಂದು ಸಮಿತಿಯ ಗಮನಕ್ಕೆ ಬಂದಿತು. ಮಾಜಿ ದೇವದಾಸಿಯರಿಗೆ ಪೂರ್ಣಪ್ರಮಾಣದಲ್ಲಿ ಪುನರ್ವಸತಿ ಕಲ್ಪಿಸದೇ ಇರುವುದನ್ನು ಗಮನಿಸಲಾಗಿದೆ. ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಸೂಕ್ತವಾದ ಮಾರ್ಗದರ್ಶನ ಮಾಡಿದ್ದೇವೆ. ಸಾವಿರಾರು ಮಾಜಿ ದೇವದಾಸಿಯರು ವಸತಿ, ನಿವೇಶನ ಇಲ್ಲದೇ ಹಳೆಯ ಪದ್ಧತಿಯಂತೆಯೇ ಬದುಕುತ್ತಿರುವುದರ ಬಗ್ಗೆ ನಾವು ವರದಿಯಲ್ಲಿ ಬೆಳಕು ಚೆಲ್ಲಿದ್ದೇವೆ. ಈ ಬಗ್ಗೆ ಸ್ಪಷ್ಟವಾದ ವಿಚಾರಗಳನ್ನು ಮತ್ತು ದತ್ತಾಂಶಗಳನ್ನು ಕ್ರೋಢೀಕರಿಸಿ ವರದಿಯಲ್ಲಿ ನೀಡಿದ್ದೇವೆ. ಅವರಿಗೆ ಸೂಕ್ತ ಪುನರ್ ವಸತಿ ಕಲ್ಪಿಸಬೇಕು’ ಎಂದು ನರೇಂದ್ರ ಸ್ವಾಮಿ ಕೋರಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News