ಬೆಳ್ತಂಗಡಿ : ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ ಕಾರ್ಡ್‌ ಖರೀದಿಸಿದ ಐವರ ಬಂಧನ

Update: 2024-02-04 12:15 GMT

ಬೆಳ್ತಂಗಡಿ : ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಸಿಮ್ ಕಾರ್ಡ್ ಖರೀದಿಸಿ, ಬೆಂಗಳೂರು ಕಡೆ ಪ್ರಯಾಣ ಮಾಡುತ್ತಿರುವ ಐವರ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿರುವ ಘಟನೆ ರವಿವಾರ ವರದಿಯಾಗಿದೆ.

ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗುಂಪಕಲ್ಲು ನಿವಾಸಿ ರಮೀಝ್(20), ಬಂಟ್ವಾಳ ತಾಲೂಕಿನ ಬಡಗಕಜೆಕರ್ ಗ್ರಾಮದ ಪಾಂಡವಕಲ್ಲು ನಿವಾಸಿ ಅಕ್ಬರ್ ಆಲಿ(24), ಬೆಳ್ತಂಗಡಿ ಸಂಜಯ ನಗರ ನಿವಾಸಿ ಮುಹಮ್ಮದ್ ಮುಸ್ತಫಾ(22), ಬೆಳ್ತಂಗಡಿ ತಾಲೂಕಿನ ಪಡಂಗಡಿ ನಿವಾಸಿ ಮುಹಮ್ಮದ್ ಸಾಧಿಕ್(27) ಮತ್ತು ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ನಿಡಿಗಲ್ ನಿವಾಸಿ 17 ವರ್ಷದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಬಂಧಿಸಲಾಗಿದೆ.

ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ತೋಟತ್ತಾಡಿಯಲ್ಲಿ ಐದು ಜನ ಅಪರಿಚಿತ ಯುವಕರು ವ್ಯವಹಾರಕ್ಕೆಂದು ಹೇಳಿ ಅಧಿಕ ಪ್ರಮಾಣದ ಸಿಮ್ ಕಾರ್ಡ್ ಖರೀದಿಸಿ  ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಧರ್ಮಸ್ಥಳ ಠಾಣಾ ಪೊಲೀಸರು ಫೆ.1 ರಂದು ಸಂಜೆ 4 ಗಂಟೆ ಸುಮಾರಿಗೆ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಬಂಧಿಸಿ, ವಿಚಾರಣೆ ನಡೆಸಿದಾಗ ಯುವಕರ ಬ್ಯಾಗ್ ನಲ್ಲಿ ಬೇರೆ ಬೇರೆ ವಿಳಾಸದ ಹೆಸರಿನಲ್ಲಿ ಅಕ್ರಮವಾಗಿ ಪಡೆದುಕೊಂಡಿದ್ದ 42 ಸಿಮ್ ಕಾರ್ಡ್ ಮತ್ತು ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೋಸ ವಂಚನೆ ಮಾಡುವ ಅಥವಾ ಯಾವುದೋ ನಿಗೂಢ ಕಾರ್ಯ ಸಾಧನೆ ಮಾಡಲು ಹೊರಟಿರುವ ಗ್ಯಾಂಗ್ ನ ಭಾಗವಾಗಿ, ಬಡ ವರ್ಗದ ಜನರನ್ನು ಟಾರ್ಗೆಟ್ ಮಾಡಲಾಗಿತ್ತು ಎನ್ನಲಾಗಿದೆ.  ಸುಳ್ಳು ಮಾಹಿತಿ ನೀಡಿ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ ಒಟ್ಟು 42 ಸಿಮ್ ಖರೀದಿ ಮಾಡಿಸಿಕೊಂಡು ಬೆಂಗಳೂರಿಗೆ ತೆಗೆದುಕೊಂಡು ಹೋಗಿ ಅಲ್ಲಿ ಯಾವುದೋ ವ್ಯವಹಾರ ನಡೆಸುವ ಯೋಜನೆಯಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳು ಈ ಹಿಂದೆಯೂ  ಸಿಮ್ ಕಾರ್ಡ್ ದಂಧೆ ನಡೆಸುತ್ತಿದ್ದು, ಈ ಪ್ರಕರಣದ ಹಿಂದೆ ಹಲವು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಇದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ರೀತಿ ವಿವಿಧ ವ್ಯಕ್ತಿಗಳಿಂದ ಸಿಮ್ ಕಾರ್ಡ್ ಖರೀದಿಸಿ ಯಾರಿಗೆ ರವಾನೆಯಾಗುತ್ತಿತ್ತು ಮತ್ತು ಏಕೆ ಬಳಕೆ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಇನ್ನೂ ಸರಿಯಾಗಿ ದೃಢವಾಗಿಲ್ಲ. ಪ್ರಕರಣದ ತನಿಖೆ ಧರ್ಮಸ್ಥಳ ಪೊಲೀಸರು ಚುರುಕುಗೊಳಿಸಿದ್ದು, ಇದರ ಹಿಂದೆ ಇರುವವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ:

ಧರ್ಮಸ್ಥಳ ಪೊಲೀಸ್ ಠಾಣೆಯ ಎಎಸ್ಐ ಸ್ಯಾಮುವೆಲ್ ಅವರು ನೀಡಿದ (ಸುಮೊಟೊ ಕೇಸ್)ದೂರಿನ ಮೇರೆಗೆ ಐದು ಜನ ಆರೋಪಿಗಳ ವಿರುದ್ಧ  ಠಾಣೆಯಲ್ಲಿ ಐಪಿಸಿ 1860(U/s-420,120B ಜೊತೆಗೆ 34)( ವಂಚನೆ, ಒಳಸಂಚು) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣದಲ್ಲಿ ಬಂಧನವಾಗಿರುವ ಐವರು ಆರೋಪಿಗಳಲ್ಲಿ ನಾಲ್ಕು ಜನರನ್ನು  ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಾಲ್ವರಿಗೂ ನ್ಯಾಯಾಂಗ ಬಂಧನ ವಿಧಿಸಿದೆ. ಮತ್ತೊಬ್ಬ ಆರೋಪಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನಾದ ಕಾರಣ, ಆತನ ತಂದೆಯನ್ನು ಕರೆಸಿ ಬಾಲ ನ್ಯಾಯಲಯಕ್ಕೆ ಹಾಜರಾಗಲು ನೋಟಿಸ್ ನೀಡಿ ತಂದೆಯ ಜೊತೆ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News