ಬಸನಗೌಡ ಪಾಟೀಲ್ ಯತ್ನಾಳ್ ಅವರು ಎರಡು ನಾಲಿಗೆ ಉಳ್ಳವರು : ವಿಜಯಕುಮಾರ ಹಿಪ್ಪಳಗಾಂವ

ಬೀದರ್ : ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎರಡು ನಾಲಿಗೆ ಉಳ್ಳವರಾಗಿದ್ದಾರೆ ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷಿ ಇದೆ ಎಂದು ಮಾದಿಗ ದಂಡೋರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹಿಪ್ಪಳಗಾಂವ್ ಹೇಳಿದರು.
ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಧಾನ ಸೌಧದ ಅಧಿವೇಶನದಲ್ಲಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಒಳಮೀಸಲಾತಿ ಜಾರಿಗೆ ಮಾಡಲು ಹೊರಟಿದ್ದ ಪಕ್ಷ ನಮ್ಮದಾಗಿದೆ. ಆದರೆ ಇವಾಗಿನ ಕಾಂಗ್ರೆಸ್ ಅದನ್ನು ಜಾರಿಗೆ ಮಾಡಲು ವಿಳಂಬ ಮಾಡುತ್ತಿದೆ ಎಂದು ಯತ್ನಾಳ್ ಅವರು ಹೇಳಿದ್ದರು. ಅದಾದ ನಂತರ ಇನ್ನೊಂದು ಕಡೆ ಒಂದು ಸಮುದಾಯದ ಕಾರ್ಯಕ್ರಮದಲ್ಲಿ ಒಳಮೀಸಲಾತಿ ಜಾರಿ ಮಾಡುವುದರಿಂದ ನಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ. ಬಸವರಾಜ್ ಬೊಮ್ಮಾಯಿ ಅವರು ಒಳಮೀಸಲಾತಿ ಜಾರಿಗೆ ಮುಂದಾಗಿದ್ದರಿಂದ ಕೆಲ ಸಮುದಾಯಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಅವರ ಈ ದ್ವಂದ್ವ ಹೇಳಿಕೆಗಳಿಂದಲೇ ಅವರಿಗೆ ಎರಡು ನಾಲಿಗೆ ಇದೆ ಎಂದು ಗೊತ್ತಾಗುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷ ಕೂಡ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿದೆ. ಈ ಕಮಿಟಿಯಿಂದ ವರದಿ ಪಡೆದು ಎರಡು ತಿಂಗಳಲ್ಲಿ ಒಳಮೀಸಲಾತಿ ಜಾರಿಗೆ ಮಾಡುತ್ತೇವೆ ಎಂದು ಅದು ಜಂಭ ಕೊಚ್ಚಿಕೊಂಡಿತ್ತು. ಆದರೆ ಎರಡು ತಿಂಗಳು ಕಳೆದರೂ ಕೂಡ ಇಲ್ಲಿವರೆಗೆ ಒಳಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಕಿಡಿ ಕಾರಿದರು.
ಒಳಮೀಸಲಾತಿ ಜಾರಿ ಮಾಡುವುದಾಗಿ ಹೇಳಿ ಮೀನಾಮೇಷ ಏಣಿಸುತ್ತಿರುವುದು ಒಂದೆಡೆ ಆದರೆ ಇನ್ನೊಂದು ಕಡೆ ಬ್ಯಾಕ್ ಲಾಗ್ ಹುದ್ದಿ ಭರ್ತಿ ಮಾಡಿಕೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್.ಸಿ ಮಹಾದೇವಪ್ಪನವರು ಹೇಳುತ್ತಾರೆ. ಅವರ ಈ ನಡೆಯನ್ನು ನಾವು ವಿರೋಧಿಸುತ್ತೇವೆ. ಇದರ ವಿರುದ್ದ ಮಾ.1 ರಿಂದ ಬೆಂಗಳೂರಿನ ಫ್ರಿಡಂ ಪಾರ್ಕ್ ನಲ್ಲಿ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
2011ರ ಜಾತಿ ಜನಗಣತಿ ಆಧಾರದ ಮೇಲೆ ಸರ್ವೋಚ್ಛ ನ್ಯಾಯಾಲಯವು ಒಳ ಮೀಸಲಾತಿ ಜಾರಿ ಮಾಡಬಹುದು ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಈಗಾಗಲೇ ಹರಿಯಾಣ, ತೆಲಂಗಾಣ ರಾಜ್ಯಗಳು ಒಳ ಮೀಸಲಾತಿ ಜಾರಿ ಮಾಡಿವೆ. ಆದರೆ ಇಲ್ಲಿಯ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುತ್ತಿದ್ದು ಸರಿಯಲ್ಲ ಎಂದರು.
ಮಾ.7 ರಂದು ನಡೆಯಲಿರುವ ರಾಜ್ಯ ಬಜೆಟ್ ನಲ್ಲಿ ಮತ್ತೆ ಎಸ್ ಇ ಪಿ, ಟಿ ಎಸ್ ಪಿ ಯಲ್ಲಿ ಮಿಸಲಿಡುವ ಹಣ ತನ್ನ ಗ್ಯಾರಂಟಿಗಳಿಗೆ ಬಳಸುತ್ತಿದೆ ಎಂಬ ಮಾತು ಹರಿದಾಡುತ್ತಿದೆ. ಈ ಹಿಂದೆ 24 ಸಾವಿರ ಕೋಟಿ ರೂ. ಎಸ್ ಇ ಪಿ, ಟಿ ಎಸ್ ಪಿ ಹಣ ತನ್ನ ಗ್ಯಾರಂಟಿಗಳಿಗೆ ಬಳಿಸಿದೆ. ಒಳಮೀಸಲಾತಿ ಜಾರಿ ಮಾಡಿ ರಾಜ್ಯಕ್ಕೆ 6ನೇ ಗ್ಯಾರಂಟಿ ಕೊಡುತ್ತೇವೆ ಎಂದು ಹೇಳಿಕೆ ನೀಡಿದ ಈ ಸರ್ಕಾರ ಒಳಮೀಸಲಾತಿ ಜಾರಿ ಮಾಡದೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಈ ವರ್ಷ ಸಹ ಬಜೆಟ್ ನಲ್ಲಿ ನಮ್ಮ ಪಾಲಿನ ಎಸ್ ಇ ಪಿ, ಟಿ ಎಸ್ ಪಿ ಹಣ ಗ್ಯಾರಂಟಿಗಳಿಗೆ ಬಳಸಿದರೆ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಕಮಲಾಕರ್ ಹೆಗಡೆ, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ಗೋರಖ ನಿಂಬೂರ್, ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ವೀರಶೆಟ್ಟಿ ಬಂಬುಳಗಿ, ಸಮಿತಿಯ ಪ್ರಮುಖರಾದ ಖಜಾಂಚಿ ಜೈಶಿಲ್ ಮೇತ್ರೆ, ಅನೀಲ್ ಬಂಬುಳಗಿ, ಪ್ರಕಾಶ್ ಮೇತ್ರೆ ಹಾಗೂ ಜೈಶಿಲ್ ನಾಮದಾಪುರ ಸೇರಿದಂತೆ ಇತರರು ಇದ್ದರು.