ಬೀದರ್ | ವ್ಯಕ್ತಿತ್ವ ವಿಕಸನದಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದು : ಡಾ.ಬಿ.ಎಸ್.ಬಿರಾದಾರ್
ಬೀದರ್ : ಮನುಷ್ಯರ ವ್ಯಕ್ತಿತ್ವದ ಸರ್ವಾಂಗೀಣ ವಿಕಾಸದಲ್ಲಿ ಮುದ್ರಿತ ಪುಸ್ತಕಗಳ ಪಾತ್ರ ಮಹತ್ವದ್ದು ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಎಸ್.ಬಿರಾದಾರ್ ಅವರು ಹೇಳಿದರು.
ನಗರದಲ್ಲಿ ಅಕ್ಷರ ಪುಸ್ತಕ ಮನೆಯ 15ನೇ ವಾರ್ಷಿಕೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಏರ್ಪಡಿಸಿದ್ದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನದ ಫಲವಾಗಿ ಹುಟ್ಟಿಕೊಂಡ ಗೆಜೆಟ್‍ಗಳಿಗಿಂತ ಮುದ್ರಣ ಮಾಧ್ಯಮ ಹೆಚ್ಚು ಆನಂದದಾಯಕವೂ, ಅಧಿಕೃತವೂ ಆಗಿರುತ್ತದೆ. ಪುಸ್ತಕ ಪ್ರದರ್ಶನಗಳಿಂದ ಓದುಗರಿಗೆ ಉತ್ತಮ ಪುಸ್ತಕಗಳ ಪರಿಚಯದೊಂದಿಗೆ ಸುಲಭವಾದ ಆಯ್ಕೆಯ ಅನುಕೂಲತೆಯೂ ಆಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಚನಶೆಟ್ಟಿ ಅವರು ಮಾತನಾಡಿ, ಡಾ.ಬಂಡಯ್ಯ ಸ್ವಾಮಿ ಅವರ ಅಕ್ಷರ ಪುಸ್ತಕ ಮನೆ ಮಾದರಿ ಪುಸ್ತಕ ಮಳಿಗೆಯಾಗಿದೆ. ಜಿಲ್ಲೆಯ ಸಾಹಿತ್ಯಾಸಕ್ತರ ಹಸಿವು ನೀಗಿಸುತ್ತಿದೆ ಎಂದು ಬಣ್ಣಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಶ್ರೀದೇವಿ ಕಟ್ಟಿಮನಿ, ಡಾ. ಸುರೇಂದ್ರ ಸಿಂಗ್, ಡಾ.ಜಗದೇವಿ ತೇಲಿ, ಡಾ.ಶಾಮಲಾ ದತ್ತ, ಪ್ರೊ. ಗೋಪಾಲ್ ಬಡಿಗೇರ್, ಪ್ರೊ. ಅಫ್ರಾನಾಜ್, ರಾಜು ದೇಸಾಯಿ, ಶಶಿಧರ್ ಪಾಟೀಲ್, ಸಿದ್ರಾಮ್ ಬಿಚಕುಂದೆ, ನಾಗಪ್ಪ ಜಾನಕನೋರ್, ಮುಕೇಶ್ ಜೆ., ನಾಗೇಶ್ ಸ್ವಾಮಿ ಅವರಿಗೆ ಸನ್ಮಾನಿಸಲಾಯಿತು.
ನೌಬಾದ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಡಾ. ಜಯಶ್ರೀ ಪ್ರಭಾ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಮನೋಜಕುಮಾರ್, ಉದ್ಯಮಿ ಡಿ.ಆರ್. ಗಣಾಚಾರಿ, ಸಾಹಿತಿ ಗುರುನಾಥ್ ಅಕ್ಕಣ್ಣ, ಅನಿತಾ ಬಂಡಯ್ಯ ಮುಂತಾದವರು ಉಪಸ್ಥಿತರಿದ್ದರು.
ಅಕ್ಷರ ಪುಸ್ತಕ ಮನೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಬಂಡಯ್ಯ ಸ್ವಾಮಿ ಅವರು ಸ್ವಾಗತಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಟಿ.ಎಂ. ಮಚ್ಚೆ ಅವರು ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಜಗನ್ನಾಥ್ ಕಮಲಾಪುರೆ ಅವರು ವಂದಿಸಿದರು.