ಬೀದರ್ | ಮನುಷ್ಯನ ಸಮೃದ್ಧ ಬದುಕಿಗೆ ಬಸವತತ್ವ ಪೂರಕ : ಗುರುಬಸವ ಪಟ್ಟದೇವರು
ಬೀದರ್ : ಮನುಷ್ಯನ ಸಮೃದ್ಧ ಬದುಕಿಗೆ ಬಸವತತ್ವ ಪೂರಕ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದೇವರು ಹೇಳಿದ್ದಾರೆ.
ಭಾಲ್ಕಿಯ ಚನ್ನಬಸವಾಶ್ರಮ ಡಾ.ಚನ್ನಬಸವ ಪಟ್ಟದೇವರು 135ನೇ ಜಯಂತ್ಯೋತ್ಸವ ನಿಮಿತ್ತ ಆಯೋಜಿಸಿದ್ದ ಜೀವನ ದರ್ಶನ ಪ್ರವಚನ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಪಟ್ಟದೇವರು ಗುರುಪರಂಪರೆ ಮಠವನ್ನು ಮೀರಿ ಬಸವಣ್ಣನವರ ತತ್ವ ಸಿದ್ಧಾಂತ ಅಪ್ಪಿಕೊಂಡು ಅದರಂತೆ ಬದುಕು ಸಾಗಿಸಿದರು. ಮನುಷ್ಯನ ಎಲ್ಲ ಕಷ್ಟ, ಸಮಸ್ಯೆ, ನೋವು, ನಲಿವುಗಳಿಗೆ ಬಸವತತ್ವದಲ್ಲಿ ಪರಿಹಾರವಿದೆ. ಪ್ರತಿಯೊಬ್ಬರು ತಮ್ಮ ಸಮೃದ್ಧ ಬದುಕಿಗಾಗಿ ಬಸವ ಮಾರ್ಗ ಅನುಸರಿಸಬೇಕು ಎಂದು ತಿಳಿಸಿದರು.
ಪ್ರವಚನಕಾರ ಡಾ.ಸಂಜುಕುಮಾರ ಜುಮ್ಮಾ ಮಾತನಾಡಿ, ಡಾ.ಚನ್ನಬಸವ ಪಟ್ಟದೇವರು ಅಸಾಧಾರಣ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಆಗಬೇಕು. ಬಸವ ಎಂದವರಿಗೆ ಹೃದಯದಲ್ಲಿ ಸ್ಥಾನ ಕಲ್ಪಿಸಿ ರಕ್ಷಣೆ ನೀಡಿದ್ದಾರೆ. ಅಂತಹ ಮಹಾತ್ಮರ ಕುರಿತು ಮಾತನಾಡಲು ಅವಕಾಶ ಸಿಕ್ಕಿರುವುದು ನನ್ನ ಪುಣ್ಯವೆಂದು ಭಾವಿಸಿದ್ದೇನೆ. ತನು, ಮನ ಶುದ್ಧಿಗೆ ಪ್ರವಚನ, ಅನುಭವ ಆಲಿಸುವುದು ಅಗತ್ಯ ಎಂದು ನುಡಿದರು.
ಬಸವಕಲ್ಯಾಣ ಅನುಭವ ಮಂಟಪದ ಸಂಚಾಲಕ ಶಿವಾನಂದ ಸ್ವಾಮೀಜಿ ಮಾತನಾಡಿ, ಡಾ.ಚನ್ನಬಸವ ಪಟ್ಟದೇವರು ಮನುಕುಲದ ಒಳಿತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. ಯುವಶಕ್ತಿ ಅವರ ತತ್ವ ಅನುಸರಿಸಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಕಾರ್ಯಕ್ರಮ ಉದ್ಘಾಟಿಸಿದರು. ಶಶಿಕಲಾ ವಾಲೆ ಪೂಜೆ ನೆರವೇರಿಸಿದರು. ಚನ್ನಬಸವಾಶ್ರಮ ಸಂಚಾಲಕ ವಿಶ್ವನಾಥಪ್ಪ ಬಿರಾದಾರ್ ಅಧ್ಯಕ್ಷತೆ ವಹಿಸಿದರು. ವೀರಣ್ಣ ಕುಂಬಾರ್ ನಿರೂಪಿಸಿ, ವಂದಿಸಿದರು.