ಬೀದರ್ | ಅಪರಾಧ ಮುಕ್ತ ಸಮಾಜಕ್ಕಾಗಿ ನಾಗರಿಕರ ಸಹಕಾರ ಅಗತ್ಯ : ಸಿಪಿಐ ಶಿವಬಲ
ಬೀದರ್ : ಸಮಾಜವನ್ನು ಅಪರಾಧ ಮುಕ್ತ ಮಾಡಲು ಪೊಲೀಸರಿಗೆ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ಸಿಪಿಐ ಅಮರೆಪ್ಪ ಶಿವಬಲ ಅಭಿಪ್ರಾಯಪಟ್ಟರು.
ಕಮಲನಗರ ತಾಲ್ಲೂಕಿನ ಚಾಂಡೇಶ್ವರ ಗ್ರಾಮದಲ್ಲಿ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡ ʼಅಪರಾಧ ತಡೆ ಮಾಸಾಚರಣೆಯ ಜಾಗೃತಿ ಕಾರ್ಯಕ್ರಮʼದಲ್ಲಿ ಮಾತನಾಡಿದ ಅವರು, ಇಂದಿನ ಯುವಪೀಳಿಗೆ ಸುಂದರ ಸಮಾಜದ ನಿರ್ಮಾಣ ಮಾಡಲು ಅಪರಾಧ ಮುಕ್ತ ವಾತಾವರಣ ನಿರ್ಮಿಸಬೇಕು. ತಾನು ಬದುಕಿ ಬೇರೆಯವರನ್ನು ಸಹ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಯುವಕರಲ್ಲಿ ಅರಿವು ಮೂಡಿಸಿದರು.
ಪಿಎಸ್ಐ ಚಂದ್ರಶೇಖರ್ ನೀರ್ಣೆ ಮಾತನಾಡಿ, ಆಧುನಿಕ ಸಮಾಜ ಅಪರಾಧ ಮುಕ್ತ ಸಮಾಜ ರಚನೆಗೆ ಪ್ರತಿಯೊಬ್ಬ ವ್ಯಕ್ತಿಯ ಪಾತ್ರ ಮಹತ್ವದಾಗಿದೆ. ಅಪರಾಧ ತಡೆಯುವ ಶಕ್ತಿ ಸಾರ್ವಜನಿಕರಲ್ಲಿದೆ. ವ್ಯಕ್ತಿಯ ಸ್ವಾರ್ಥಮಯ ಬದುಕಿನಿಂದ ಮೇಲಿದ್ದಾಗ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಸುಖ ದುಃಖ ಸಮಾನವಾಗಿ ಅರಿತಾಗ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಅಪರಾಧ ಪ್ರಕರಣಗಳು ಕಡಿಮೆಯಾದಾಗ ಸಾರ್ವಜನಿಕರು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ನಾಗೇಶ್ ಸಾಹುಕಾರ, ವೈಜಿನಾಥ ಸೂರ್ಯವಂಶಿ, ಎಚ್ ಸಿ ಲೋಕೇಶ್, ಪರಶುರಾಮ್, ವಸಂತ, ವೈಜಿನಾಥ, ಪರಮೇಶ್, ರತಿಕ್ ಸೇರಿದಂತೆ ಹಲವರು ಇದ್ದರು.