ಬೀದರ್ | ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ಕಾಂಗ್ರೆಸ್ ಆಗ್ರಹ

Update: 2024-12-21 11:30 GMT

ಬೀದರ್ : ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೀಳುಮಟ್ಟದಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ.

ಭಾಲ್ಕಿ ನಗರದ ಅಂಬೇಡ್ಕರ್ ಪ್ರತಿಮೆ ಎದುರುಗಡೆ ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಹಿಡಿದು ಅಮಿತ್ ಶಾ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟಿಸಲಾಯಿತು.

ಡಾ.ಅಂಬೇಡ್ಕರ್ ಅವರು ನೀಡಿರುವ ಬೃಹತ್ ಲಿಖಿತ ಸಂವಿಧಾನ ಭಾರತ ದೇಶಕ್ಕೆ ಜೀವನ ಧರ್ಮ ಮತ್ತು ಪವಿತ್ರವಾಗಿದೆ. ಅದೇ ರೀತಿ ನಮಗೆ ಅಂಬೇಡ್ಕರ್ ಅವರು ಕೂಡ ಪೂಜನೀಯರಾಗಿದ್ದಾರೆ. ಆದರೆ ಡಿ.18 ರಂದು ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ತಮ್ಮ ಭಾಷಣದಲ್ಲಿ ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್ ಅನ್ನೋದು ಈಗ ಕೆಲವರಿಗೆ ಫ್ಯಾಶನ್ ಆಗಿದೆ. ಇಷ್ಟು ಬಾರಿ ದೇವರ ನಾಮ ಜಪಿಸಿದರೆ ಏಳು ಜನ್ಮಗಳವರೆಗೆ ಸ್ವರ್ಗ ಪ್ರಾಪ್ತಿಯಾಗುತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಇದರಿಂದಾಗಿ ಸಂವಿಧಾನಕ್ಕೂ ಪರೋಕ್ಷವಾಗಿ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.

ಅಮಿತ್ ಶಾ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಒಂದು ಕ್ಷಣವೂ ಸಚಿವರಾಗಿ ಮುಂದುವರಿಯುವ ನೈತಿಕತೆ ಇಲ್ಲ. ಸಂವಿಧಾನಶಿಲ್ಪಿಗೆ ಅವಮಾನ ಮಾಡಿರುವ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡುವಂತೆ ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ವೈಜಿನಾಥ ಕುಂಟೆಸಿರ್ಸಿ, ವಿಲಾಸ್ ಮೊರೆ, ಯುವ ಕಾಂಗ್ರೆಸ್ ಅಧ್ಯಕ್ಷ ಜೈಪಾಲ್ ಬೋರಾಳೆ, ರಾಜಕುಮಾರ್ ಮೊರೆ, ವಿಜಯಕುಮಾರ್, ರಾಜಕುಮಾರ್ ಬಾವುಗೆ, ಕೈಲಾಸ್ ಭಾವಿಕಟ್ಟೆ, ಲೊಕೇಶ್ ಭೂರೇ, ಪ್ರಕಾಶ್ ಮತ್ತು ಕಾಶೀನಾಥ್ ಸೇರಿದಂತೆ ನೂರಾರು ಜನ ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News