ಬೀದರ್ | ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಧರಣಿ ಸತ್ಯಾಗ್ರಹ

Update: 2024-12-20 13:22 GMT

ಬೀದರ್ : ಜಿಲ್ಲೆಯ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಅಧಿಕಾರಿಗಳು ಜಾತಿ ತಾರತಮ್ಯ ಮಾಡುತ್ತಿದ್ದಾರೆ. ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಜನರ ಧ್ವನಿ ಸಂಘಟನೆಯು ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಿದೆ.

ಮನ್ನಾಖೆಳ್ಳಿ ಪಟ್ಟಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ, ಚಿಟಗುಪ್ಪಾ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಚಳಕಾಪುರ ದಲಿತರ ಮೇಲೆ ಸುಳ್ಳು ಕೇಸು ದಾಖಲಿಸಲಾಗಿದೆ. ಅದನ್ನು ತಕ್ಷಣವೇ ವಾಪಸ್ಸು ಪಡೆಯಬೇಕು. ವಿಳಾಸಪುರ್ ಗ್ರಾಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಬೇಕು. ಸಂಸತ್ತಿನಲ್ಲಿ ಅಂಬೇಡ್ಕರ್ ಅವರನ್ನು ಅವಮಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು. ಹಾಗೆಯೇ ಆರ್.ಟಿ.ಒ ಅಧಿಕಾರಿ ಮಂಜುನಾಥ್ ಕೊರವಿ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಜಿಲ್ಲಾದ್ಯಂತ ನಿರಂತರವಾಗಿ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಅದರಲ್ಲೂ ಭಾಲ್ಕಿ ತಾಲ್ಲೂಕಿನಲ್ಲಿ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಭಾಲ್ಕಿಯ ಡಿ.ವೈ.ಎಸ್.ಪಿ ಶಿವಾನಂದ ಅವರು ದಲಿತರ ಮೇಲೆಯೇ ಸುಳ್ಳು ಕೇಸು ದಾಖಲಿಸಿ ಜಾತಿವಾದಿ ಮನೋಭಾವನೆಯನ್ನು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹ ಮಾಡಲಾಗಿದೆ.

ಈ ಸಂದರ್ಭದಲ್ಲಿ ಜನರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ರಾಜಕುಮಾರ್ ಸಿಂಧೆ, ಉಪಾಧ್ಯಕ್ಷ ಲಕ್ಶ್ಮಣ ಹೊಚಕನಳ್ಳಿ, ಹಿರಿಯ ಮುಖಂಡ ತಿಪ್ಪಣ್ಣ ವಾಲಿ ಹಾಗೂ ರವಿ ಕೋಟರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News